ಸರ್ಕಾರ ಬಲಿ ಕೊಟ್ಟಾದರೂ ಹಿತ ರಕ್ಷಣೆ

7

ಸರ್ಕಾರ ಬಲಿ ಕೊಟ್ಟಾದರೂ ಹಿತ ರಕ್ಷಣೆ

Published:
Updated:

ದಾವಣಗೆರೆ: ಕಾವೇರಿ ನದಿಯಿಂದ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡದಿರಲು ನಿರ್ಧರಿಸಲಾಗಿದೆ. ಸರ್ಕಾರ ಬಲಿ ಕೊಟ್ಟಾದರೂ ಜನರ ಹಿತಾಸಕ್ತಿ ಕಾಯುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.ಸುವರ್ಣ ವಿಧಾನಸೌಧ ಉದ್ಘಾಟನೆ ಕಾರ್ಯಕ್ರಮಕ್ಕೆಂದು ಬೆಳಗಾವಿಗೆ ತೆರಳುತ್ತಿದ್ದ ಅವರು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. `ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಹೋದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಭೇಟಿ ಅವಕಾಶ ನಿರಾಕರಿಸಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯದ ಜನರ ಮೇಲೆ ದೊಡ್ಡ ಗದಾ ಪ್ರಹಾರ ಮಾಡಿದ್ದಾರೆ~ ಎಂದು ಆರೋಪಿಸಿದರು.`ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೇಂದ್ರ ಸರ್ಕಾರ 3 ಬಾರಿ ತಂಡ ಕಳುಹಿಸಿ ವರದಿ ಪಡೆದಿತ್ತು. ಜಲಾಶಯಗಳು ತುಂಬಿಲ್ಲ. ಆದರೂ ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮೇಲಿನ ಗೌರವದಿಂದ ಸ್ವಲ್ಪ ನೀರು ಬಿಡಲಾಗಿದೆ. ಇನ್ನೂ ಮುಂದುವರಿಸುವಂತೆ ಕೇಳುವುದರಲ್ಲಿ ಅರ್ಥವಿಲ್ಲ~ ಎಂದು ಹೇಳಿದರು.ಬಿಜೆಪಿ ರಾಜ್ಯ ಘಟಕದಲ್ಲಿ ಗೊಂದಲ, ನಾಯಕರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಧನಂಜಯ ಕುಮಾರ್ ನೀಡುತ್ತಿರುವ ಹೇಳಿಕೆ ಪಕ್ಷ, ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದು ನಿಜ. ವರಿಷ್ಠರಷ್ಟೇ ಕ್ರಮ ಕೈಗೊಳ್ಳಬೇಕು. ನನ್ನ ಕೈಯಲ್ಲಿ ಅಧಿಕಾರವಿಲ್ಲ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry