ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ

ಸೋಮವಾರ, ಮೇ 27, 2019
28 °C

ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ

Published:
Updated:

ಬಳ್ಳಾರಿ: ನಾಟಕಕಾರ, ಗಮಕ ಕಲಾನಿಧಿ ದಿವಂಗತ ಜೋಳದರಾಶಿ ಡಾ.ದೊಡ್ಡನಗೌಡ ಅವರ ನೇತೃತ್ವದಲ್ಲಿ ರಂಗಭೂಮಿ ಚಟುವಟಿಕೆಗಾಗಿ ನಿರ್ಮಾಣವಾಗಿರುವ ನಗರದ ರಾಘವ ಕಲಾಮಂದಿರವು ಕಲೆಗೆ ಬಳಕೆಯಾಗದೆ, ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಸರ್ಕಾರ ಕೂಡಲೇ ಕಲಾಮಂದಿರವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನಂದಿ ಸ್ವಯಂ ಸೇವಾ ಸಂಸ್ಥೆ ಆಗ್ರಹಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಹೆಗಡೆ, ರಾಘವ ಕಲಾಮಂದಿರದ ನಿರ್ವಹಣೆ ಹಾಗೂ ಹಣಕಾಸಿನ ವ್ಯವಹಾರದಲ್ಲೂ ಸಾಕಷ್ಟು ಅಕ್ರಮಗಳು ನಡೆದಿದ್ದು, ರಾಘವ ಮೆಮೋರಿಯಲ್ ಅಸೋಸಿಯೇಷನ್ ಪದಾಧಿಕಾರಿಗಳು ಅಂದಾಜು ರೂ 3.5 ಕೋಟಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.ಬಳ್ಳಾರಿಯಲ್ಲಿ ನಿರಂತರ ರಂಗ ಚಟುವಟಿಕೆ ನಡೆಯಲಿ ಎಂಬ ಸದುದ್ದೇಶದೊಂದಿಗೆ ರಂಗಾಸಕ್ತರು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸರ್ಕಾರದ ಜಾಗೆಯಲ್ಲಿ ಕಲಾಮಂದಿರ ನಿರ್ಮಿಸಿದ್ದಾರೆ. ಆದರೆ, ಇದಕ್ಕೆ ಬಳಕೆಯಾಗದೇ ಮದುವೆ, ಸಮಾರಂಭ, ವಾಣಿಜ್ಯ ಸಂಬಂಧಿ ಉತ್ಸವಗಳಿಗೆ ಬಾಡಿಗೆ ನೀಡಲಾಗುತ್ತಿದೆ. ನಾಟಕ ಮತ್ತು ಸಂಗೀತ ಪ್ರದರ್ಶನಗಳಿಗೆ ಉಚಿತ ದೊರೆಯಬೇಕಿರುವ ಕಲಾ ಮಂದಿರಕ್ಕೆ ಬಾಡಿಗೆ ಪಡೆಯಲಾಗುತ್ತಿದೆ ಎಂದು ಅವರು ದೂರಿದರು.ಈ ಹಿಂದೆ ರೂಪಿಸಿರುವ ಯಾವುದೇ ನಿಯಮಾವಳಿಗಳನ್ನು ಸದ್ಯದ ಪದಾಧಿಕಾರಿಗಳು ಪಾಲಿಸದೆ, ತಮ್ಮ ಸ್ವಂತದ ಆಸ್ತಿಯಂತೆ ಬಳಕೆ ಮಾಡಿಕೊಳ್ಳುತ್ತಿದ್ದು, ಕಲಾಮಂದಿರವು ಕೇವಲ ಒಂದು ಕುಟುಂಬದ ಆಸ್ತಿಯಂತಾಗಿದೆ.ಒಂದೇ ಕುಟುಂಬದವರೇ ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಚೆನ್ನಪ್ಪ ಅವರು ಕಳೆದ 12 ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ನಾಟಕ ತಂಡಗಳಿಂದ ಬಾಡಿಗೆ ಪಡೆದು ನಾಟಕ ಪ್ರದರ್ಶನಕ್ಕೆ ಕಲಾಮಂದಿರ ಬಾಡಿಗೆ ನೀಡಿರುವ ಇವರ ಸೇವೆಯನ್ನು ಅನನ್ಯ ಎಂದು ಪರಿಗಣಿಸಿ ಜೀವಮಾನದ ಸಾಧನೆಗಾಗಿ ನಾಟಕ ಅಕಾಡೆಮಿಯು ಇವರಿಗೆ ರಾಜ್ಯ ಪ್ರಶಸ್ತಿಯನ್ನೂ ನೀಡಿ ಗೌರವಿಸಿರುವುದು ಶೋಚನೀಯ ಎಂದು ಅವರು ತಿಳಿಸಿದರು.ಕಲಾಮಂದಿರ ಬಾಡಿಗೆ ಪಡೆಯುವವರಿಂದ ಸೂಕ್ತ ರಸೀದಿ ನೀಡದೆ, ಹಣ ವಸೂಲಿ ಮಾಡಲಾಗುತ್ತಿದೆ. ಎಲ್ಲ ವ್ಯವಹಾರಗಳೂ ಮೌಖಿಕವಾಗಿ ನಡೆಯುತ್ತಿದ್ದು, ಧ್ವನಿ- ಬೆಳಕು ಸಾಧನೆಗಳು ಮತ್ತು ಜನರೇಟರ್‌ಗಳಿಗೆ ಅನಗತ್ಯ ಹಣ ಕೀಳಲಾಗುತ್ತಿದೆ ಎಂದು ಅವರು ಆರೋಪಿಸಿದರು.ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಜಿಲ್ಲೆಯ ನೂರಾರು ಕಲಾವಿದರಿಗೆ ಸದಸ್ಯತ್ವ ನೀಡಿಲ್ಲ. ಕೇಳಿದರೆ, ರೂ 5 ಸಾವಿರ ಶುಲ್ಕ ಭರಿಸಿ ಸದಸ್ಯತ್ವ ಪಡೆಯುವಂತೆ ಹೇಳಲಾಗುತ್ತಿದೆ. ಅಧ್ಯಕ್ಷ ಕೆ.ಚನ್ನಪ್ಪ ಅವರ ಕುಟುಂಬದ ನಾಲ್ವರಿಗೆ ಸದಸ್ಯತ್ವ ನೀಡಲಾಗಿದೆ.  ಇವರ ಪುತ್ರನಿಗೆ ಕಲಾಮಂದಿರದ ವಾಣಿಜ್ಯ ಸಂಕೀರ್ಣದಲ್ಲಿ ಔಷಧಿ ಅಂಗಡಿ ತೆರೆಯಲು ಬಾಡಿಗೆ ನೀಡಲಾಗಿದೆ ಎಂದರು.ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು ನ್ಯಾಯಾಲ ಯದ ಮೊರೆ ಹೋಗುವ ವಿಚಾರವಿದೆ ಎಂದರು.ಕನ್ನಡ ಕ್ರಾಂತಿ ದಳದ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಶಾಂತನಗೌಡ, ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕುಂದಾಪುರ ನಾಗರಾಜ್, ಚಂದ್ರಶೇಖರ ಕೋಳೂರ್, ಸಿಂಗಾಪೂರ್ ನಾಗರಾಜ್, ಗೌರಿಶಂಕರ ಸ್ವಾಮಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry