ಶುಕ್ರವಾರ, ಅಕ್ಟೋಬರ್ 18, 2019
28 °C

ಸರ್ಕಾರ ವಜಾಕ್ಕೆಧರಣಿ

Published:
Updated:

ಗುಲ್ಬರ್ಗ: ರಾಜ್ಯದ ಬಿಜೆಪಿ ಸರ್ಕಾರ ವಜಾಗೊಳಿಸಬೇಕೆಂದು ಆಗ್ರಹಿಸಿ ಗುಲ್ಬರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯಿತು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಗರಣಗಳು, ರೈತರ ಪ್ರಾಣ ಹಾನಿ, ಸಚಿವರಿಂದ ಲೈಂಗಿಕ ಹಗರಣ, ಭೂ ಹಗರಣಗಳು ನಿರಂತರವಾಗಿ ನಡೆಯುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ. 1,500 ವಿಶೇಷ ಭತ್ಯೆ ನೀಡುತ್ತೇವೆಂದು ಭರವಸೆ ನೀಡಿದ್ದು ಇದು ಜಾರಿಗೆ ಬಂದಿಲ್ಲ, ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರ ಬ್ಯಾಂಕುಗಳಲ್ಲಿ ಸಾಲ ಕೊಡಲು ಉದ್ದೇಶಿಸಿದ್ದರೂ ಅದರ ಪ್ರಯೋಜನವನ್ನು ರಾಜ್ಯ ಸರ್ಕಾರ ಉಪಯೋಗ ಮಾಡುತ್ತಿಲ್ಲ ಎಂದು ಧರಣಿನಿರತರು ಆಕ್ಷೇಪಿಸಿದರು.ಮತ ಗಳಿಕೆಗಾಗಿಯೇ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಲಕ್ಷ ಉದ್ಯೋಗಾವಕಾಶವನ್ನು ನೀಡುತ್ತೇವೆಂದು ಬಿಜೆಪಿ ನಾಯಕರು ಭರವಸೆ ನೀಡಿ ಅದನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರ ಬಡ, ಹಿಂದುಳಿದ, ದಲಿತ, ಮತ್ತು ಅಲ್ಪಸಂಖ್ಯಾತರ 70 ಸಾವಿರ ವಿದ್ಯಾರ್ಥಿಗಳಿಗೆ ರೂ. 10,000ದಂತೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಕೊಡುವ ಕೊಡುಗೆ ಮಾತ್ರ ಶೂನ್ಯವಾಗಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.ಬಿಜೆಪಿ ಸರ್ಕಾರ ರಾಜ್ಯದಲ್ಲಿ ನಿರುದ್ಯೋಗಿ ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸದೆ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವುದರಲ್ಲಿ ಸಮಯ ಹಾಳು ಮಾಡುತ್ತಿದೆ. ಮತೀಯ ದ್ವೇಷ ಪ್ರಚೋದಿಸುವುದಕ್ಕಾಗಿ ಸಂಘ ಪರಿವಾರದ ಬಜರಂಗದಳ, ಶ್ರೀರಾಮ ಸೇನೆ ಮತ್ತಿತರ ಸಂಘ ಸಂಸ್ಥೆಗಳು ಪಾಕಿಸ್ತಾನದ ಬಾವುಟವನ್ನು ಸಿಂದಗಿಯಲ್ಲಿ ಹಾರಿಸಿ, ಇದು ಅಲ್ಪಸಂಖ್ಯಾತರ ಕಾರ್ಯ ಎಂದು ಮಾಡುವ ಕುತಂತ್ರ ಬಯಲಾಗಿದೆ ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಗುಲ್ಬರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ ಎಂದು ಸಮಿತಿ ಅಧ್ಯಕ್ಷ ನಾಸಿರ್ ಹುಸೈನ್ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Post Comments (+)