ಸರ್ದಾರ್ ಬೂಟಾಸಿಂಗ್‌ಗೆ ಬಸವ ಪುರಸ್ಕಾರ

7

ಸರ್ದಾರ್ ಬೂಟಾಸಿಂಗ್‌ಗೆ ಬಸವ ಪುರಸ್ಕಾರ

Published:
Updated:

ಬೀದರ್: ನಗರದಲ್ಲಿ ಇದೇ 16 ರಿಂದ ಮೂರು ದಿನ ಕಾಲ ಆಯೋಜಿಸಿರುವ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಸರ್ದಾರ್ ಬೂಟಾಸಿಂಗ್ ಅವರಿಗೆ ‘ಬಸವ ಪುರಸ್ಕಾರ’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಭಾರತ ಏಕತಾ ಆಂದೋನದ ಅಧ್ಯಕ್ಷರಾಗಿ ದೇಶದ ಏಕತೆಗೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ವಚನ ವಿಜಯೋತ್ಸವದ ಅಂಗವಾಗಿ ನಗರದ ಬಸವಗಿರಿಯಲ್ಲಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬಸವಾದಿ ಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿ ಬೆಳೆಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಉತ್ಸವದ ಅಂಗವಾಗಿ ಜಿಲ್ಲೆಯ 211 ಗ್ರಾಮಗಳಿಗೆ ಬಸವಜ್ಯೋತಿ ಯಾತ್ರೆ ಮೂಲಕ ಬಸವ ಸಂದೇಶ ತಲುಪಿಸಲಾಗಿದೆ. ಸ್ವಾಗತ, ಹಣಕಾಸು, ಆಹಾರ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಮೂರು ದಿನಗಳ ಉತ್ಸವದಲ್ಲಿ ಸುಮಾರು 50 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.ಫೆಬ್ರುವರಿ 16 ರಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಲಿದೆ. ಅಂದು ಬೆಳಿಗ್ಗೆ 11.30 ಕ್ಕೆ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಜಯಕುಮಾರ ಸಿಂಹ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ಸಾಮೂಹಿಕ ಇಷ್ಟಲಿಂಗಯೋಗ, ತತ್ವಸಂಪದ ಗೋಷ್ಠಿ, ಲಿಂಗಾಯತ ಚಿಂತನ ಗೋಷ್ಠಿ, ಕವಿ ಗೋಷ್ಠಿ, ಲಿಂಗಾಯತ ಧರ್ಮಗ್ರಂಥ ‘ಗುರುವಚನ’ ಪಾರಾಯಣ, ವಿದ್ಯಾರ್ಥಿ- ಯುವ ಸಂಪದ ಗೋಷ್ಠಿ, ಮಲ್ಲಗಂಬ ಪ್ರದರ್ಶನ, ಬಸವತತ್ವ ಸಾಮಾಜಿಕ ಮಹತ್ವ ಚಿಂತನ ಗೋಷ್ಠಿ ಮತ್ತಿತರ ಕಾರ್ಯಕ್ರಮ ಜರುಗಲಿವೆ.ಫೆಬ್ರುವರಿ 18 ರಂದು ಐದು ಕುದುರೆಗಳ ರಥದಲ್ಲಿ ಲಿಂಗಾಯತ ಧರ್ಮಗ್ರಂಥ ಹಾಗೂ ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಉತ್ಸವದ ಪ್ರಚಾರಾರ್ಥವಾಗಿ ಫೆಬ್ರುವರಿ 15 ರಂದು 500 ಬೈಕ್‌ಗಳ ರ್ಯಾಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ,  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕಾಶಪ್ಪ ಧನ್ನೂರ, ಅಧ್ಯಕ್ಷ ಗುರುನಾಥ ಕೊಳ್ಳೂರ, ಕಾರ್ಯಾಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಚನ್ನಬಸವ ಶರಣರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry