ಸರ್ವಂ ಡಾಲರ್ ಮಯಂ

7
ವಾರದ ವಿನೋದ

ಸರ್ವಂ ಡಾಲರ್ ಮಯಂ

Published:
Updated:
ಸರ್ವಂ ಡಾಲರ್ ಮಯಂ

ಹರಟೆಕಟ್ಟೆಯಲ್ಲಿ ಕೋರಂ ಭರ್ತಿಯಾಗಿತ್ತು. ಗೌರಿ-ಗಣೇಶ ಹಬ್ಬದ ಕಾರಣ ಹರಟೆಕಟ್ಟೆಗೆ ವಿಶೇಷ ಕಳೆಯೂ ಬಂದಿತ್ತು. ಮಿಸ್ಸಮ್ಮ ಗರಿಗರಿ ಸೀರೆ ಉಟ್ಟು ಸಿರಿಗೌರಿಯ ಹಾಗೆ ಕಂಗೊಳಿಸುತ್ತಿದ್ದಳು. ಗುಡ್ಡೆಗೆ ಕೀಟಲೆ ಮಾಡಬೇಕೆನ್ನಿಸಿ ಸೀದಾ ಅವಳ ಮುಂದೆ ಹೋಗಿ ನಿಂತು ಎರಡೂ ಕೈ ಎತ್ತಿ ಮುಗಿದು `ನಮಸ್ಕಾರ ಗೌರಮ್ಮ...' ಎಂದ ನಾಟಕೀಯವಾಗಿ.ಮಿಸ್ಸಮ್ಮಗೆ ಮುಜುಗರವಾಯಿತು. `ಏಯ್, ನನಗ್ಯಾಕೆ ನಮಸ್ಕಾರ ಮಾಡ್ತಿಯೋ ತರ್ಲೆ, ನಾನೇನ್ ಗೌರಮ್ಮನಾ?' ಎಂದಳು ನಗುತ್ತ.

`ಒಂಥರಾ ಗೌರಮ್ಮನ ಹಾಗೇ ಕಾಣ್ತಿದಿ ಮಿಸ್ಸಮ್ಮ. ನಿನಗೆ ನಮಸ್ಕಾರ ಮಾಡಿದ್ರೆ ಅದು ಗೌರಮ್ಮಂಗೆ ತಲುಪುತ್ತೆ ಅಂತ ಮಾಡಿದ್ನೆಪ, ಏನ್ ತಪ್ಪು?'`ಅಂದ್ರೇ ನಮ್ಮ ಈ ಡೊಳ್ಳುಹೊಟ್ಟೆ ದುಬ್ಬೀರುಂಗೆ ನಮಸ್ಕಾರ ಮಾಡಿದ್ರೆ ಅದು ಗಣಪತಿಗೆ ಹೋಗಿ ತಲುಪುತ್ತೆ ಅನ್ನು...' ತೆಪರೇಸಿ ಗುಡ್ಡೆ ಕೀಟಲೆಗೊಂದಿಷ್ಟು ವಗ್ಗರಣೆ ಹಾಕಿದ.ಈ ಕೀಟಲೆಗಳಿಗೆಲ್ಲ ತಲೆ ಕೆಡಿಸಿಕೊಳ್ಳದ ದುಬ್ಬೀರ, `ಲೇ ತರ್ಲೆಗಳಾ, ನನ್ನ ಏನ್ ಬೇಕಾದ್ರು ಅನ್ನಿ, ಬೇಜಾರಿಲ್ಲ. ಆದ್ರೆ ಅದಕ್ಕೆ ತಕ್ಕಂಗೆ ನಡ್ಕಳಿ. ಈಗ ನನ್ನ ಗಣಪ ಅಂದ್ರಿ, ಓಕೆ. ಮತ್ತೆ ಕಡುಬು ಚಕ್ಲಿ ಎಲ್ಲ ಎಲ್ಲಿ ?' ಎಂದ ನಗುತ್ತ.`ಕಡುಬು ಗಿಡುಬು ಇಲ್ಲ, ಇವತ್ತು ಸ್ಪೆಷಲ್ ಬೆಣ್ಣೆ ದೋಸೆಗೆ ಆರ್ಡರ್ ಮಾಡಿದೀನಿ. ಬರುತ್ತೆ, ಸ್ವಲ್ಪ ತಡ್ಕಾಬೇಕು' ಎಂದ ಕಡೇಮನಿ ಕೊಟ್ರೇಶಿ, `ಸರಿ, ಈಗ ಏನ್ರಪ್ಪಾ ಹೊಸ ಸಮಾಚಾರ?' ಎನ್ನುತ್ತ ಹರಟೆಗೆ ಚಾಲನೆ ನೀಡಿದ.`ಸಮಾಚಾರ ಬೇಕಾದಷ್ಟ್ ಐತಿ. ಪೆಟ್ರೋಲು-ಡೀಸೆಲು ಏರ್ತು, ಸೆನ್ಸೆಕ್ಸು-ರೂಪಾಯಿ ಇಳೀತು. ಯಾಸಿನ್ ಭಟ್ಕಳ್ ಸಿಗಾಕ್ಕೊಂಡ, ಸೈಕೋ ಶಂಕರ್ ತಪ್ಪಿಸ್ಕೊಂಡ. ಸಿದ್ರಾಮಯ್ಯ ಸರ್ಕಾರಕ್ಕೆ ನೂರು, ಚಿದಂಬರಂಗೆ ಟೀಕೆ ನೂರಾರು... ಸಾಕಾ, ಬೇಕಾ?' ಎಂದ ಗುಡ್ಡೆ.`ತಡಿ, ಒಂದು ಕರೆಕ್ಷನ್. ಸೈಕೋ ಶಂಕರನೂ ಸಿಕ್ಕಿಬಿದ್ನಂತೆ, ಪೇಪರ್ ನೋಡ್ಲಿಲ್ವಾ?' ಎಂದ ಕೊಟ್ರೇಶಿ. `ಅದಿರ್ಲಿ ಈಗ ರೂಪಾಯಿ ಬೆಲೆ ಪೈಸೆಗೆ ಇಳಿದ ಮೇಲೆ ಡಾಲರ್‌ನಲ್ಲೇ ಎಲ್ಲ ವ್ಯವಹಾರ ಶುರುವಾಗೇತಂತೆ ಹೌದಾ?' ಎಂದು ಪ್ರಶ್ನಿಸಿದ.`ಹೌದಂತೆ. ಡಾಲರ್‌ನಲ್ಲಿ ಈಗ ಎಲ್ಲ ರೇಟುಗಳೂ ಇಳಿದಿದಾವಂತೆ. ಈರುಳ್ಳಿ ಕೆ.ಜಿ.ಗೆ ಜಸ್ಟ್ ಒಂದು ಡಾಲರ್. ಪೆಟ್ರೋಲ್ ಲೀಟರ್‌ಗೆ ಜಸ್ಟ್ ಒಂದೂ ಕಾಲು ಡಾಲರ್. ಚಿನ್ನ ತೊಲಕ್ಕೆ ಜಸ್ಟ್ ಐದು ಸಾವಿರ ಡಾಲರ್! ಹೆಂಗೆ? ಇನ್ಮುಂದೆ ನಮ್ಮಲ್ಲೂ ಡಾಲರ್ ಚಲಾವಣೆ ಆದ್ರೆ ಮಜ ಅಲ್ವಾ?' ಗುಡ್ಡೆ ಚಮತ್ಕಾರದ ಮಾತಾಡಿದ.`ಕರೆಕ್ಟ್ ಕಣಲೆ, ರೂಪಾಯಿ ಈಗ ಬಡಪಾಯಿ. `ಡಾಲರ್ ಇದ್ದೋನು ಕಾಲರ್ ಎತ್ಕಂಡ್ ಓಡಾಡಿದ' ಅನ್ನಂಗಾಗೇತಿ. ಇವತ್ತು ಬೆಳಿಗ್ಗೆ ಗಣಪತಿ ಮೂರ್ತಿ ರೇಟು ಕೇಳಿದೆ. `ಜಸ್ಟ್ ಐವತ್ತು' ಅಂದ. ಐವತ್ತು ರೂಪಾಯಾ? ಅಂತ ಕೇಳಿದೆ. ಅಲ್ಲ, ಡಾಲರ್ರು ಅಂದ! ಡಾಲರ್ ಕೊಟ್ಟು ತಂದಿರೋದ್ರಿಂದ ಅದಕ್ಕೆ `ಡಾಲರ್ ಗಣೇಶ' ಅಂತ ಹೆಸರಿಟ್ಟಿದೀವಿ...' ತೆಪರೇಸಿ ಕತೆ ಹೊಸೆದ.`ನಿನ್ತೆಲಿ, ನೀನು ಯಾವತ್ತಾದ್ರು ಡಾಲರ್ ಮುಖ ನೋಡಿದೀ ಏನ್ಲೆ? ರೀಲ್ ಬಿಡ್ತಾನೆ' ಎಂದು ನಗಾಡಿದ ದುಬ್ಬೀರ, `ಅದು ಬಿಡ್ರಪ್ಪ, ಈಗ ಸಿದ್ರಾಮಯ್ಯನೋರ ಸರ್ಕಾರ ನೂರು ದಿನ ಓಡ್ತಲ್ಲ, ಅನ್ನಭಾಗ್ಯ, ಕ್ಷೀರಭಾಗ್ಯದ ತರ ಮತ್ಯಾವುದಾರ `ಭಾಗ್ಯ' ಜಾರಿಗೆ ಬಂದಾವೇನು?' ಎಂದು ಪ್ರಶ್ನಿಸಿದ.ಅಂಗನವಾಡಿ ಮಕ್ಕಳಿಗೇನೋ ಹಣ್ಣು ಕೊಡ್ತಾರೆ ಅಂತ ಪೇಪರ್‌ನಲ್ಲಿ ಬಂದಿತ್ತಪ್ಪ. ಅದನ್ನ `ಹಣ್ಣುಭಾಗ್ಯ' ಅಂತ ಕರೀಬಹುದು. ಅದೇತರ `ಹೆಣ್ಣುಭಾಗ್ಯ' ಅಂತ ಒಂದು ಯೋಜನೆ ಜಾರಿಗೆ ತಂದಿದ್ರೆ ಚೆನ್ನಾಗಿರ್ತಿತ್ತು...' ತೆಪರೇಸಿ ಕಣ್ಣು ಮಿಟುಕಿಸಿ ನಕ್ಕ.`ಹೆಣ್ಣು ಭಾಗ್ಯ'ನಾ? ಯಾಕಪ್ಪಾ, ಯಾರಿಗೆ ಬೇಕು ಈಗ ಹೆಣ್ಣು?' ಮಿಸ್ಸಮ್ಮ ಕೇಳಿದಳು.`ಇನ್ಯಾರಿಗೆ? ನಮ್ಮ ಗುಡ್ಡೆ ಅಂತೋರಿಗೆ. ಪಾಪ ಎಷ್ಟು ಹುಡುಕಿದ್ರೂ ಗುಡ್ಡೆಗೆ ಹೆಣ್ಣೇ ಸಿಗ್ತಿಲ್ಲ. ಈಗ ಹೆಣ್ಣಿನ ಸಂಖ್ಯೆ ಬೇರೆ ಕಡಿಮೆ ಆಗಿ ಸಾವಿರ ಗಂಡಿಗೆ ಎಂಟುನೂರು ಹೆಣ್ಣು ಅದಾವಂತೆ. ಅಂದ್ರೆ ಇನ್ನು ಇನ್ನೂರು ಜನ ಏನ್ಮಾಡಬೇಕು? ಗುಡ್ಡೆ ಗತಿ ಏನು?' ತೆಪರೇಸಿ ಕಿಚಾಯಿಸಿದ.`ತೆಪರೇಸಿ ಮಾತು ದುಬ್ಬೀರನಿಗೇಕೋ ಸರಿ ಕಾಣಲಿಲ್ಲ. `ಅಲ್ಲಲೆ ತೆಪರ, ಹೆಣ್ಣು ಸಿಗಲ್ಲ, ಹೆಣ್ಣು ಸಿಗಲ್ಲ ಅಂತೀರಲ್ಲ, ನಮ್ಮಲ್ಲಿ ಇಬ್ಬಿಬ್ರನ್ನ ಮದುವೆ ಆಗಿರೋರು ಎಷ್ಟು ಜನ ಇಲ್ಲ ? ಸರಿಯಾಗಿ ಹುಡುಕಿದ್ರೆ ಹೆಣ್ಣು ಸಿಗಲ್ವಾ?' ಎಂದ.`ಅದಕ್ಕೇ ಸಿದ್ರಾಮಯ್ಯನೋರಿಗೆ `ಹೆಣ್ಣುಭಾಗ್ಯ' ಚಾಲೂ ಮಾಡಿ ಅಂತ ಕೇಳ್ತಿರೋದು. ಪಾಪ ಗುಡ್ಡೆ ಅಂತೋರಿಗೆ ಹೆಣ್ಣು ಹುಡುಕಿ ಕೊಡ್ಲಿ, ಯಾರು ಬೇಡಂತಾರೆ?' ತೆಪರೇಸಿ ಒಳಗೇ ನಕ್ಕಾಗ, ಗುಡ್ಡೆ `ಬರೀ ನಂದೊಬ್ಬುಂದೇ ಹೇಳ್ತೀಯಲ್ಲಲೆ, ಹಂಗೇ ನಮ್ಮ ಮಿಸ್ಸಮ್ಮುಂಗೆ `ಗಂಡುಭಾಗ್ಯ' ಬ್ಯಾಡೇನು?' ಎಂದ.`ಲೇ ಗುಡ್ಡೆ, ನನ್ ತಂಟೆಗೆ ಬರಬೇಡ ನೋಡು' ಎಂದು ಎಚ್ಚರಿಸಿದ ಮಿಸ್ಸಮ್ಮ, `ನಾನು ಎಲ್ಲ ಹೆಣ್ಣುಮಕ್ಕಳ ಪರವಾಗಿ `ಚಿನ್ನಭಾಗ್ಯ' ಜಾರಿಗೆ ತರ್ಲಿ ಅಂತ ಸಿದ್ರಾಮಯ್ಯನೋರ್ನ ಕೇಳ್ಕಂತೀನಿ' ಎಂದಳು.`ಚಿನ್ನಭಾಗ್ಯ' ಅಂದ್ರೆ? ಪುಗ್ಸಟ್ಟೆ ಚಿನ್ನ ಕೊಡಬೇಕಾ?' ಗುಡ್ಡೆ ಪ್ರಶ್ನಿಸಿದ.`ಪುಗ್ಸಟ್ಟೆ ಏನು ಬೇಡ, ಸಬ್ಸಿಡಿ ಕೊಡ್ಲಿ. ಹತ್ತು ಗ್ರಾಂ ಚಿನ್ನಕ್ಕೆ ಒಂದು ಹದಿನೈದು ಸಾವಿರ ಸಬ್ಸಿಡಿ ಕೊಟ್ರೆ ಬಡವರು ಬಗ್ಗರು ಹೆಂಗೋ ಮದುವೆ ಮುಂಜಿ ಮಾಡ್ಕಂತಾರೆ ಅಲ್ವಾ?'`ನೀ ಹೇಳೋದ್ರಲ್ಲೂ ಅರ್ಥ ಇದೆ. ಆದ್ರೆ ಅದ್ರಿಂದ ನಿನಗೇನು ಪ್ರಯೋಜನ? ಹೇಳಿ ಕೇಳಿ ನೀನು ಬ್ರಹ್ಮಚಾರಿ...' ಗುಡ್ಡೆ ತುಂಟನಗೆ ನಕ್ಕ.

`ಗುಡ್ಡೇ... ಬ್ಯಾಡ ನೋಡು' ಎಂದು ದೊಡ್ಡ ಕಣ್ಣು ಬಿಟ್ಟ ಮಿಸ್ಸಮ್ಮ, `ನಂದಿರ್ಲಿ, ನಿಂಗೆ ಯಾವ ಭಾಗ್ಯ ಬೇಕಪ್ಪ ಸುಂದರಾ?' ಎಂದು ಪ್ರಶ್ನಿಸಿದಳು.`ನಂಗೆ `ಹೆಣ್ಣುಭಾಗ್ಯ'ಕ್ಕಿಂತ `ಎಣ್ಣೆಭಾಗ್ಯ' ಬೇಕು. ಮಾಡಿಸ್ತೀರಾ? ಅದೆಲ್ಲ ನಿಮ್ ಕೈಲಿ ಎಲ್ಲಾಗುತ್ತೆ, ನಮ್ ಸರ್ಕಾರ ಬಂದಾಗ ರೇಣುಕಾಚಾರ್ಯರಿಗೆ ಹೇಳಿ ನಾವೇ ಮಾಡಿಸ್ಕೋತೀವಿ ಬಿಡಿ' ಎಂದ ಗುಡ್ಡೆ ಗತ್ತಿನಿಂದ.`ಆಯ್ತಪ್ಪ, ಮಾಡಿಸ್ಕಾ. `ಎಣ್ಣೆಭಾಗ್ಯ'ದ ಜೊತೆಗೆ ಹಂಗೇ `ಮಣ್ಣುಭಾಗ್ಯ' ಅಂತಾನೂ ಒಂದು ಯೋಜನೆ ಮಾಡಿಸು, ಉಪಯೋಗಕ್ಕೆ ಬರುತ್ತೆ' ಎಂದಳು ಮಿಸ್ಸಮ್ಮ.`ಮಣ್ಣುಭಾಗ್ಯನಾ? ಅದ್ಯಾಕೆ?'

`ಕುಡಿದೂ ಕುಡಿದೂ ಸತ್ರೆ ನಿನ್ನಂಥೋರ್ನ ಉಚಿತವಾಗಿ ಮಣ್ಣು ಮಾಡೋಕೆ...!' ಮಿಸ್ಸಮ್ಮನ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry