ಮಂಗಳವಾರ, ಮೇ 18, 2021
22 °C

ಸರ್ವಜನರ ಕೆರೆಮ್ಮ ಜಾತ್ರೆ ಸಡಗರ

- ಪ್ರಸನ್ನ ಮಂಡಲಗಿರಿ,ಶಹಾಬಾದ Updated:

ಅಕ್ಷರ ಗಾತ್ರ : | |

ಸಾಮಾನ್ಯವಾಗಿ ಮಠಗಳ ಹಿರಿತನದ್ಲ್ಲಲಿ ಬಹುತೇಕ ಜಾತ್ರೆಗಳು ನಡೆಯುತ್ತವೆ. ಆದರೆ ಚಿತ್ತಾಪುರ ತಾಲ್ಲೂಕಿನ ಶಹಾಬಾದ ಸಮೀಪದ ಭಂಕೂರ ಗ್ರಾಮದ ಕೆರೆಮ್ಮ ಜಾತ್ರೆಗೆ ಮಾತ್ರ ಯಾವುದೇ ಮಠದ ಇತಿಹಾಸವಿಲ್ಲ. ಗ್ರಾಮದ ಎಲ್ಲ ಜಾತಿ, ಜನಾಂಗದ ಜನ ಸೇರಿ ಆಚರಿಸುವ ಇಂತಹ ಜಾತ್ರೆ ರಾಜ್ಯದಲ್ಲಿಯೇ ಅಪರೂಪ.ಭಂಕೂರಿನ ಅತ್ಯಂತ ವೈಶಿಷ್ಟ್ಯಪೂರ್ಣ ಜಾತ್ರೆ ಎನಿಸಿರುವ ಗ್ರಾಮದೇವತೆ ಕೆರೆಮ್ಮದೇವಿಯ ಕಾರಹುಣ್ಣಿಮೆ ಜಾತ್ರೆ ಈ ಬಾರಿ ಜೂನ್ 23 (ಭಾನುವಾರ) ಮೂಲಾ ನಕ್ಷತ್ರದ ದಿನದಂದು ಸಂಭ್ರಮ-ಸಡಗರದಿಂದ ನಡೆಯಲಿದೆ. ಶನಿವಾರ ರಾತ್ರಿ ಬಂಡಿಯಲ್ಲಿ ಗ್ರಾಮ ದೇವತೆಯನ್ನು ಹತ್ತಿರದ ಕಾಗಿಣಾ ನದಿಗೆ ಗಂಗಾಸ್ನಾನಕ್ಕೆಂದು ಕರೆದೊಯ್ಯಲಾಗುತ್ತದೆ. ಭಾನುವಾರ ಬೆಳಿಗ್ಗೆ ಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಅಗಸಿಯಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಮಂದಿರ ತಲುಪುತ್ತದೆ. ತದನಂತರ ಪೂಜಾ ವಿಧಿ-ವಿಧಾನಗಳು ಜರುಗುತ್ತವೆ.ಸಂಜೆ ಕರಿ ಹರಿಯುವ ಕಾರ‌್ಯಕ್ರಮದ ಮುಂಚೆ ನಡೆಯುವ ಬಂಡಿ ಓಡುವ ರೋಮಾಂಚಕಾರಿ ದೃಶ್ಯ ಈ ಜಾತ್ರೆಯ ವಿಶೇಷಗಳಲ್ಲೊಂದು.ಕೆರೆಮ್ಮದೇವಿಯ ಗುಡಿಯ ಪಕ್ಕದ ಎತ್ತರದ ಜಾರು ಪ್ರದೇಶದಿಂದ ಸುಮಾರು ಒಂದು ಕಿ.ಮೀ.ನಷ್ಟು ದೂರ ಬಂಡಿಗೆ ಕಟ್ಟಿದ ಆಕರ್ಷಕ ಜೋಡೆತ್ತುಗಳು ಜೋರಾಗಿ ಓಡಿದ ನಂತರ, ರಾತ್ರಿ ಕರಿ ಹರಿಯುವ ಘಟ್ಟ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಸಾಕ್ಷಿಯಾಗುತ್ತಾರೆ.ಜಾತ್ರೆಯ ವೈಶಿಷ್ಟ್ಯ: ಎಲ್ಲ ಜಾತಿ -ಜನಾಂಗದ ಜನ ಒಂದಿಲ್ಲ ಒಂದು ಕಾರಣಕ್ಕೆ ಜಾತ್ರೆಯ ಭಾಗವಾಗಿ, ಅದನ್ನು ಶಾಂತಿ- ಸಹಬಾಳ್ವೆಯಿಂದ ನಡೆಸಿಕೊಂಡು ಹೋಗುವುದು ಈ ಜಾತ್ರೆಯ ವೈಶಿಷ್ಟ್ಯ. ಹಾಗಾಗಿ ಇದು ನಿಜವಾಗಿಯೂ ಭಾವೈಕ್ಯ ಮೆರೆಯುವ ಗ್ರಾಮಹಬ್ಬ.ಕಾರಹುಣ್ಣಿಮೆ ಕರಿ ಹರಿಯುವ ದಿನದ ಮೊದಲು ಊರಿನ ಮಾಲಿಗೌಡರು ದೇವಿಗೆ ಕಳಸ, ಕುಲಕರ್ಣಿ ಸೀರೆ-ಬಳೆ ತಂದರೆ, ಗೌಡರು ಜಾತ್ರೆಯ ವ್ಯವಸ್ಥೆ, ಕರಿ ಹರಿಯುವ ಹಗ್ಗದ ವ್ಯವಸ್ಥೆಯನ್ನು ಮಾನಕರ್ ಮನೆತನ ನೋಡಿಕೊಳ್ಳುತ್ತದೆ.ಬಾರಕೋಲು ಹಾಕುವ ಮಜ್ಜಿಗೆ ಮನತನದವರು ಮತ್ತು ಕರಿ ಹರಿಯುವ ಕುಲಕರ್ಣಿ ಮನೆತನದವರು ಅಂತಿಮವಾಗಿ ಕರಿ ಹರಿ  ಯುತ್ತಾರೆ. ಅಕ್ಕಸಾಲಿಗರು ಆಭರಣ, ತಳವಾರ ಬಂಧುಗಳು ಕರಿ ಹರಿಯುವ ಖಡ್ಗ ಮತ್ತು ಕುಂಭದ ವ್ಯವಸ್ಥೆ, ಬಡಿಗರು ಬಂಡಿಯ ವ್ಯವಸ್ಥೆ ಮಾಡುತ್ತಾರೆ. ಗಾಣಿಗರು ದೀಪಕ್ಕೆ ಎಣ್ಣೆ, ಹೂಗಾರರು ಹೂವು ಮತ್ತು ಕುರುಬ ಜನಾಂಗದ ಬಂಧುಗಳು ಡೊಳ್ಳು ಸೇವೆ ಮೂಲಕ ದೇವಿಗೆ ತಮ್ಮ ಸೇವೆ ಸಲ್ಲಿಸುತ್ತಾರೆ.ವಿಶೇಷವೆಂದರೆ ಪರಿಶಿಷ್ಟ ಜಾತಿ ಜನಾಂಗದವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಎಲ್ಲ ಜಾತಿ-ಧರ್ಮದ ಜನ ಒಟ್ಟಾಗಿ ಈ ಜಾತ್ರೆ ಆಚರಿಸುತ್ತಾರೆ. ಕರಿ ಹರಿದ ನಂತರ ಗ್ರಾಮದ ಎಲ್ಲ ಧರ್ಮಿಯರು ಸಿಹಿ ಹಂಚಿಕೊಂಡು ಉಣ್ಣುವುದರೊಂದಿಗೆ ಮೀಸಲು ಕರಿ ಆಚರಣೆ ಮುಕ್ತಾಯಗೊಳ್ಳುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.