ಗುರುವಾರ , ನವೆಂಬರ್ 21, 2019
27 °C

`ಸರ್ವತೋಮುಖ ಅಭಿವೃದ್ಧಿಸಂಕಲ್ಪ'

Published:
Updated:

ಕುಕನೂರು:  ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿ.ಜೆ.ಪಿ ಸಂಕಲ್ಪ ಮಾಡಿದೆ ಎಂದು ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು. ಇಲ್ಲಿಯ ಸೊರಟೂರ ಮಿಲ್‌ನಲ್ಲಿ ಸೋಮವಾರ ಬಿ.ಜೆ.ಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಹೈದ್ರಾಬಾದ್ ಕರ್ನಾಟಕದ ಜನತೆಯ ಕಷ್ಟ ಕಾರ್ಪಣ್ಯಗಳನ್ನು ಅರಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು 1300 ಕೋಟಿ ರೂ.ವೆಚ್ಚದ ಕೃಷ್ಣಾ-ಬಿ ಯೋಜನೆಯ ಕೊಪ್ಪಳ ಏತ ನೀರಾವರಿಗೆ ಹಣ ಮಂಜೂರಿ ಮಾಡುವ ಮೂಲಕ ರೈತರ ಬಾಳಿಗೆ ಬೆಳಕು ನೀಡುವ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯ 2,80 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕುತ್ತದೆ.

ಕುಕನೂರು ಸೇರಿದಂತೆ ರಾಜ್ಯದಲ್ಲಿ 43 ಹೊಸ ತಾಲ್ಲೂಕು ರಚನೆ ಮಾಡುವ ಮೂಲಕ ಎದೆಗಾರಿಕೆ ಪ್ರದರ್ಶಿಸಿದ್ದಾರೆ. ಇಷ್ಟೇ ಅಲ್ಲದೇ ಜಿಲ್ಲೆಗೆ ಕೃಷಿ, ತೋಟಗಾರಿಕೆ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಜೊತೆಗೆ ಹಿರೇಹಳ್ಳ ಯೋಜನೆಯಲ್ಲಿ ನಿರಾಶ್ರಿತರಾದ ಶಿರೂರು, ಅರಕೇರಿ, ಮುತ್ತಾಳ ಹಾಗೂ ಮುದ್ಲಾಪುರ ಹಾಗೂ ವೀರಾಪೂರ ಗ್ರಾಮಗಳ ಪುನರ್ವಸತಿಗಾಗಿ 38 ಕೋಟಿ ರೂ. ಪರಿಹಾರ ನೀಡಿದ್ದು ಬಿ.ಜೆ.ಪಿ ಸರ್ಕಾರ ಎಂದು ಹೆಮ್ಮೆಯಿಂದ ಹೇಳಿದ ಅವರು, ಜಗದೀಶ ಶೆಟ್ಟರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಬಿ.ಜೆ.ಪಿಗೆ ಮತ ನೀಡುವಂತೆ ಅವರು ನೆರೆದ ಸಾವಿರಾರು ಜನರಲ್ಲಿ ಮನವಿ ಮಾಡಿದರು.ಸಂಸದ ಶಿವರಾಮಗೌಡ ಮಾತನಾಡಿ, ಹೈ-ಕಕ್ಕೆ 371 ಕಲಂ ಮಂಜೂರು ಯಾವುದೇ ಪಕ್ಷದ ಸ್ವತ್ತಲ್ಲ, ಅದು ಈ ಭಾಗದ ಜನತೆಯ ಹೋರಾಟದ ಪ್ರತಿಫಲ ಎಂದ ಅವರು, ಯು.ಪಿ.ಎ ನೇತೃತ್ವದ ಕೇಂದ್ರ ಸರ್ಕಾರ 2ಜಿ ಸ್ಪೆಕ್ಟ್ರಂ ಹಗರಣ, ಹೆಲಿಕಾಫ್ಟರ್ ಖರೀದಿ ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ಹಲವಾರು ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಪ್ರಧಾನ ಮಂತ್ರಿ ಮನಮೋಹನಸಿಂಗ್ ಅವರು ಹಗರಣಗಳ ಕಿಂಗ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.ಕೊಪ್ಪಳ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಕರಡಿ ಸಂಗಣ್ಣ ಮಾತನಾಡಿ, ರಾಜ್ಯದಲ್ಲಿ 40-50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಈ ಭಾಗದ ಅಭಿವೃದ್ಧಿಗೆ ಕಿಂಚಿತ್ತೂ ಯೋಚಿಸದ ಕಾರಣದಿಂದ ಹಿಂದುಳಿಯಲು ಕಾರಣವಾಯಿತು. ಕೊಪ್ಪಳ ಭಾಗದ ಅಭಿವೃದ್ಧಿಗೆ ಬಿ.ಜೆ.ಪಿ ಸರ್ಕಾರ ಜಿಲ್ಲೆಗೆ ಹಂಚಿಕೆಯಾಗಿರುವ 12 ಟಿ.ಎಂ.ಸಿ ನೀರು ಬಳಸಿಕೊಳ್ಳಲು ಹಣ ಮಂಜೂರು ಮಾಡುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಿಂದ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕಿನ 2,80 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕುತ್ತದೆ ಎಂದರು.ಬಿ.ಜೆ.ಪಿ ಜಿಲ್ಲಾಧ್ಯಕ್ಷ ಎಚ್.ಗಿರೇಗೌಡ, ಮಾಜಿ ಸಚಿವ ಹನುಮಂತಪ್ಪ ಅಂಗಡಿ, ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ, ಸಂಗಪ್ಪ ವಕ್ಕಳದ, ಕುಷ್ಟಗಿ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ, ಪೀರಾಹುಸೇನ ಹೊಸಳ್ಳಿ, ಶಕುಂತಲಾದೇವಿ ಮಾಲಿಪಾಟೀಲ, ಅಪ್ಪಣ್ಣ ಪದಕಿ, ಸಿದ್ರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಈಶಪ್ಪ ಆರೇರ, ಗವಿಸಿದ್ದಪ್ಪ ಆರೇರ, ವೀರಭದ್ರಪ್ಪ ಆವಾರಿ, ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದಗೌಡ ಪಾಟೀಲ, ಸಂಗಪ್ಪ ವಕ್ಕಳದ, ಅಂದಪ್ಪ ಜವಳಿ, ರವಿ ಜಕ್ಕಾ, ಶಂಭು ಜೋಳದ, ಶಿವಕುಮಾರ ನಾಗಲಾಪುರಮಠ, ಬಸವರಾಜ ಆಚಾರ್, ಮುನಿಯಪ್ಪ ಹುಬ್ಬಳ್ಳಿ, ಕೊಟ್ರಪ್ಪ ತೋಟದ ಸೇರಿದಂತೆ ಜಿಲ್ಲೆಯ ವಿವಿಧ ಘಟಕಗಳ ಮುಖಂಡರು ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಅನ್ಯ ಪಕ್ಷಗಳಿಂದ ಆಗಮಿಸಿದ ರಸೂಲಸಾಬ ದಮ್ಮೂರ, ಕಾಶೀಮಸಾಬ ಮಾಟಲದಿನ್ನಿ, ಚನ್ನಬಸಪ್ಪ ಮಾಲಗಿತ್ತಿ, ಡಿ.ಕೆ.ಪರಶುರಾಮ, ಈರಪ್ಪ ಗಾವರಾಳ ಮತ್ತಿತರರನ್ನು ಬಿ.ಜೆ.ಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ತಾಲ್ಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಿತ್ತು.

ಪ್ರತಿಕ್ರಿಯಿಸಿ (+)