ಸರ್ವಧರ್ಮ ಸಮನ್ವಯದ ತಿಂಥಣಿ ಮೌನೇಶ್ವರರು

7

ಸರ್ವಧರ್ಮ ಸಮನ್ವಯದ ತಿಂಥಣಿ ಮೌನೇಶ್ವರರು

Published:
Updated:

`ಓಂ ಏಕ್ ಲಾಖ್ ಅಸ್ಸೀ ಹಜಾರ್ ಪಾಚೋಪೀರ್ ಪೈಗಂಬರ್ ಮೌನಾಧೀನ್ ಕಾಶಿಪತಿ ಗಂಗಾಧರ ಹರ ಹರ ಮಹಾದೇವ~ಸರ್ವ ಧರ್ಮ ಸಮನ್ವಯದ ಈ ಶ್ಲೋಕ, ಮೌನೇಶ್ವರರ ಮೂಲ ಮಂತ್ರ. ಹಿಂದು-ಮುಸ್ಲಿಂ ಭಾವೈಕ್ಯದ ಸಂಗಮ ಕ್ಷೇತ್ರವಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿಯಲ್ಲಿ ಮೌನೇಶ್ವರರ ಆರಾಧನೆ ನಿತ್ಯವೂ ನಡೆಯುತ್ತದೆ.ಧಾರ್ಮಿಕ ಸೌಹಾರ್ದಕ್ಕೆ ಮೆರುಗು ನೀಡುತ್ತಿರುವ ಮೌನೇಶ್ವರ ದೇವಸ್ಥಾನದಿಂದಾಗಿ ತಿಂಥಣಿ ಗ್ರಾಮ ಹೆಸರುವಾಸಿ. ಇಲ್ಲಿ ಈಗ ಜಾತ್ರೆಯ ಸಂಭ್ರಮ. ಜಾತಿ ಭೇದ ಎಣಿಸದೇ ಆಗಮಿಸುವ ಭಕ್ತರ ಸಂಖ್ಯೆ ಅಪಾರ. ಹೀಗಾಗಿ ಕೋಮು ಸಾಮರಸ್ಯವನ್ನು ಇಲ್ಲಿ ಕಾಣಬಹುದು. ಅಲ್ಲದೇ ಇದು ಇಡೀ  ಭಾರತದಲ್ಲೇ ವಿಶ್ವಕರ್ಮ ಸಮಾಜದ ಬೃಹತ್ ಮೇಳ. ಅದಕ್ಕೆಂದೇ ತಿಂಥಣಿ ಕ್ಷೇತ್ರಕ್ಕೆ `ದಕ್ಷಿಣ ಕಾಶಿ~ ಎಂಬ ಅಭಿದಾನವೂ ಇದೆ.ಹದಿನಾರನೇ ಶತಮಾನದಲ್ಲಿ ಅವತಾರವೆತ್ತಿದ ಈ ಮಹಾಪುರುಷ ಹಿಂದುಗಳಿಗೆ ಯೋಗಿಯಾದರೆ, ಮುಸ್ಲಿಮರಿಗೆ ಸೂಫಿ ಸಂತ. ಜಾತಿವಾದವನ್ನು ಬಲವಾಗಿ ಖಂಡಿಸಿದವರಲ್ಲಿ ಮೌನೇಶ್ವರರು ಪ್ರಮುಖರು. ಹಸಿರು ಶಾಲನ್ನು ತಮ್ಮ ಲಾಂಛನವಾಗಿಸಿದ್ದಲ್ಲದೇ, ಧ್ವಜಕ್ಕೂ ಹಸಿರು ಬಣ್ಣ ಕೊಟ್ಟವರು. ಹೀಗಾಗಿಯೇ ಇವರ ದೇವಸ್ಥಾನ ಒಳಭಾಗದಲ್ಲಿ ಹಿಂದೂ ವಾಸ್ತು ವಿನ್ಯಾಸ ಹೊಂದಿದ್ದರೆ, ಹೊರನೋಟದಲ್ಲಿ ದರ್ಗಾದ ಶೈಲಿಯನ್ನು ಬಿಂಬಿಸುತ್ತದೆ. ಇವೆಲ್ಲವೂ ಸಮಾನತೆಯ ಕುರುಹುಗಳಾಗಿವೆ.ಜಾತಿವಾದದ ಮೂಲೋತ್ಪಾಟನೆಗೆ ಶ್ರಮಿಸಿದ ಮೌನೇಶ್ವರರು ಮೆರೆದ ಪವಾಡಗಳು ಅನೇಕ. ಉಪನಯನದ ಸಮಯದಲ್ಲಿ ಅಹಂಕಾರ ಮತ್ತನಾಗಿದ್ದ ಪುರೋಹಿತನಿಗೆ ಪ್ರಾಯಶ್ಚಿತ ರೂಪದಲ್ಲಿ ಜ್ಞಾನೋದಯ ಕಲ್ಪಿಸಿದ್ದು, ಪಾಠಶಾಲೆಯ ಗುರುಗಳಿಗೆ ಓಂಕಾರದ ಮಹಿಮೆ ತಿಳಿಸಿದ್ದು, ಮೃತ ರಾಜಕುಮಾರನನ್ನು ಬದುಕಿಸಿದ್ದು, ಗೋನಾಲದ ಪರ್ವತಶೆಟ್ಟಿಗೆ ಐಶ್ವರ್ಯ ಕರುಣಿಸಿದ್ದು, ವಿಜಾಪುರದ ಸುಲ್ತಾನ ಆದಿಲ್‌ಶಾಹನಿಗೆ ದೇವರು ಒಬ್ಬನೇ ಎಂದು ನಿರೂಪಿಸಿದ್ದು ಹೀಗೆ ಹತ್ತು ಹಲವಾರು ಪವಾಡಗಳನ್ನು ಮೌನೇಶ್ವರರು ತೋರಿಸಿದ್ದಾರೆ ಎಂಬುದು ಭಕ್ತರ ನಂಬಿಕೆ.ವರವಿ, ಲಿಂಗನಬಂಡಿ, ತಿಂಥಣಿ ಮೌನೇಶ್ವರರ ಸಂಚಾರಿ ಜೀವನದ ನೆಲೆಗಳೆಂಬಂತೆ ಹೇಳಲಾಗಿದ್ದರೂ, ಮೂಲತಃ ಮೌನೇಶ್ವರರು ಯಾವ ಊರಿನವರು ಎಂಬುದು ಸ್ಪಷ್ಟವಾಗಿಲ್ಲ.

 

ಭಕ್ತರ ನಂಬಿಕೆಯ ಪ್ರಕಾರ ಸುರಪುರ ತಾಲ್ಲೂಕಿನ ದೇವರಗೋನಾಲದಲ್ಲಿ ಜನಿಸಿ, ನಾಡಿನುದ್ದಕ್ಕೂ ಭಾವೈಕ್ಯವನ್ನು ಸಾರಿದರು. ಕೊನೆಯ ದಿನಗಳಲ್ಲಿ ಕೃಷ್ಣೆಯ ತಟದ ತಿಂಥಣಿಗೆ ಬಂದು ಭಾರತ ಹುಣ್ಣಿಮೆಯಂದು ಗುಹೆ ಪ್ರವೇಶ ಮಾಡಿ ಐಕ್ಯರಾದರು. ಇಂದಿಗೂ ಮೌನೇಶ್ವರರು ಎಲ್ಲ ಜಾತಿ, ಧರ್ಮದ ಭಕ್ತರನ್ನು ಕರುಣಿಸುತ್ತಿದ್ದಾರೆ ಎಂದು ಜನ ನಂಬುತ್ತಾರೆ.`ಬಸವಣ್ಣ~ ಎಂಬ ಅಂಕಿತದಲ್ಲಿ ಮೌನೇಶ್ವರರ ಸುಮಾರು 800 ವಚನಗಳಿವೆ.

ಜಾತ್ರೆ ಸಂಭ್ರಮ

ಪ್ರತಿ ವರ್ಷ ಭಾರತ ಹುಣ್ಣಿಮೆ ಸಮಯದಲ್ಲಿ ತಿಂಥಣಿಯಲ್ಲಿ ಜಾತ್ರೆ. ಇಂದು ಅಲ್ಲಿ ಧೂಳಗಾಯಿ, ಗುಹಾಪ್ರವೇಶ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.ಈಗಾಗಲೇ ಪೂರ್ವಭಾವಿ ಆಚರಣೆಗಳು ನಡೆಯುತ್ತಿವೆ. ಇದಕ್ಕೆ ಕರ್ನಾಟಕವಲ್ಲದೇ ಆಂಧ್ರ, ಮಹಾರಾಷ್ಟ್ರಗಳಿಂದಲೂ ಸಹಸ್ರಾರು ಭಕ್ತರು ಆಗಮಿಸುತ್ತಾರೆ.                                                                      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry