ಗುರುವಾರ , ಅಕ್ಟೋಬರ್ 17, 2019
21 °C

ಸರ್ವರಿಗೂ ಒಳ್ಳೆಯದು ಮಾಡುವುದೇ ಧ್ಯೇಯವಾಗಲಿ

Published:
Updated:

ಬೆಳಗಾವಿ: “ನಾವೆಲ್ಲರೂ ಜೀವನದಲ್ಲಿ ಸರ್ವರಿಗೂ ಒಳ್ಳೆಯದನ್ನು ಮಾಡಬೇಕು. ಅದೇ ನಮ್ಮ ಜೀವನದ ಧ್ಯೇಯವಾಗಬೇಕು” ಎಂದು ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಎ. ರುದ್ರಪ್ಪ ಹೇಳಿದರು.ನಗರದ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ಬುಧವಾರ ಆರಂಭವಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಶಿ.ಶಿ. ಬಸವನಾಳ ಮತ್ತು ಆಂಗ್ಲ ಮಾಧ್ಯಮ ಡಿ.ಇಡಿ. ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಯುವಕರು ದೇಶದ ಆಸ್ತಿಯಾಗಿದ್ದಾರೆ. ಆದ್ದರಿಂದ ಯುವಕರು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸತ್ಪ್ರಜೆಗಳಾಗಿ ಬಾಳಬೇಕು~ ಎಂದು ಅವರು ಕರೆ ನೀಡಿದರು.ಎಸ್‌ಎಸ್‌ಬಿಟಿಟಿಐ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಯುವ ಜನೋತ್ಸವಗಳು ನಮ್ಮ ಸಂಸ್ಕೃತಿ ಅಭಿವ್ಯಕ್ತಿಯ ವೇದಿಕೆಗಳಾಗಬೇಕು. ಸಮತೋಲನ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಛಲಬೇಕು. ಛಲದಿಂದಲೇ ಗುರಿ ಸಾಧನೆಯಾಗುವುದು ಎಂದರು.ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಯುವ ಜನಾಂಗ ಸೇವ, ಶ್ರಮ, ಗೌರವಯುತ ಜೀವನದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಶಿ.ಶಿ. ಬಸವನಾಳ ಕಾಲೇಜಿನ ಪ್ರಾಚಾರ್ಯ ಐ.ಬಿ. ಅಂಗಡಿ ಸ್ವಾಗತಿಸಿದರು. ಎಸ್.ಎಂ. ಪಾಟೀಲ ಹಾಗೂ ಅನಿರುದ್ಧ ನಿರೂಪಿಸಿದರು. ರಾಜೇಶ್ವರಿ ದೇಸಾಯಿ ವಂದಿಸಿದರು.

Post Comments (+)