ಸರ್ವವೂ ಸಾವಯವ

7

ಸರ್ವವೂ ಸಾವಯವ

Published:
Updated:
ಸರ್ವವೂ ಸಾವಯವ

ಬೆ  ಲೆ ಏರಿಳಿತ, ಕೂಲಿ ಕಾರ್ಮಿಕರ ಕೊರತೆಯ ನಡುವೆಯೂ ಇರುವ ಅಲ್ಪ ಜಮೀನಿನಲ್ಲಿಯೇ  ಶೂನ್ಯ ಬಂಡವಾಳದ ಸಾವಯವ ಕೃಷಿಯಿಂದ ಹೆಚ್ಚು ಫಸಲು ತೆಗೆಯುವ ಮೂಲಕ ಮಾಗಡಿಯ ಸಮೀಪದ ವಿಠ್ಠಲಪುರ ಗ್ರಾಮದ ಆಶಾ ಯಶಸ್ವಿ ರೈತ ಮಹಿಳೆ ಎನಿಸಿಕೊಂಡಿದ್ದಾರೆ.ಹೆಚ್ಚು ಫಸಲು ಬೆಳೆಯುವ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡದೆ ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸುತ್ತಮುತ್ತಲ ರೈತರಿಗೆ ಕೃಷಿ ಪಾಠವನ್ನು ಮಾಡುತ್ತಿದ್ದಾರೆ ಇವರು.ವಿವಿಧ ಬೆಳೆ

ಇರುವ ಎರಡೂವರೆ ಎಕರೆ ಭೂಮಿಯಲ್ಲಿ ತೊಗರಿ, ಬಾಳೆಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಮಿಶ್ರ ಬೆಳೆಯೂ ಇರುವುದರಿಂದ ರಾಗಿ, ಅವರೆ, ಅಲಸಂದೆ, ತೆಂಗು, ಮಾವು, ಹಲಸು, ಕುಂಬಳಕಾಯಿ, ಚಿಕ್ಕು, ಅರಳಿಕಾಯಿ, ಲಿಂಬೆ, ಗುಲಾಬಿ, ಕನಕಾಂಬರ, ಚೆಂಡು ಹೂ, ಚಿಂತಾಮಣಿ, ನುಗ್ಗೆ ಹೀಗೆ ವಿವಿಧ ಪ್ರಕಾರದ ಬೆಳೆಗಳು ಇವರ ಹೊಲದಲ್ಲಿ ನಳನಳಿಸುತ್ತಿವೆ.‘ಮೊದಲು ರಾಸಾಯನಿಕ ಗೊಬ್ಬರವನ್ನು ಬಳಸಿ ಕೃಷಿ ಮಾಡುತ್ತಿದ್ದೆವು. ರಾಸಾಯನಿಕ ಬಳಕೆ ಸ್ವಲ್ಪ ಅತಿಯಾದರೂ ಗಿಡಗಳು ಸತ್ತು ಹೋಗುತ್ತಿದ್ದವು. ಒಮ್ಮೆ ಕೃಷಿ ಇಲಾಖೆಯವರು ಸಾವಯವ ಕೃಷಿಯ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಅವರ ಮಾರ್ಗದರ್ಶನದಂತೆ ಹಂತಹಂತವಾಗಿ ಭೂಮಿಯನ್ನು ಸಾವಯವಕ್ಕೆ ಒಗ್ಗಿಸಿಕೊಂಡೆವು. ಈಗ ಸಂಪೂರ್ಣವಾಗಿ ಸಾವಯವ ರೀತಿಯಲ್ಲಿಯೇ ಕೃಷಿ ಮಾಡುತ್ತಿದ್ದೇವೆ’ ಎಂದು ತಮ್ಮ ಕೃಷಿ ಸಾಧನೆಯ ಕುರಿತು ವಿವರಿಸುತ್ತಾರೆ ಆಶಾ.‘ಬೆಳೆಗಳಿಗೆ ಉಣಿಸಲು ಸಾಕಾಗುವಷ್ಟು ಕೊಟ್ಟಿಗೆ ಗೊಬ್ಬರವಿದೆ. ಬಿತ್ತನೆ ಬೀಜವನ್ನು ನಾವೇ ಶೇಖರಿಸಿಟ್ಟುಕೊಂಡಿರುತ್ತೇವೆ. ಮರಗಳಿಂದ ಉದುರುವ ಎಲೆ ಸೇರಿದಂತೆ ನೈಸರ್ಗಿಕ ಜನ್ಯ ವಸ್ತುಗಳನ್ನೆಲ್ಲ ಜೀವ ಸಾರ ಘಟಕದಲ್ಲಿ ಹಾಕುತ್ತೇವೆ. ಇದರಿಂದ ಹೊರ ಹೋಗುವ ನೀರು ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅದರಲ್ಲೇ ಉಳಿದ ತ್ಯಾಜ್ಯವನ್ನು ಬೆಳೆಗಳಿಗೆ ಹಾಕುವುದರಿಂದ ಉತ್ತಮ ಫಸಲು ಬರುತ್ತಿದೆ’ ಎನ್ನುವುದು ಅವರ ಅನುಭವದ ಮಾತು.‘ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಲಾಭ ಬರುತ್ತದೆ. ಆದರೆ ಎಂದೂ ನಷ್ಟ ಅನುಭವಿಸಿಲ್ಲ. ಸಾವಯವದಲ್ಲಿ ಖರ್ಚು ಕಡಿಮೆಯಾದ್ದರಿಂದ ಬಂದಿದ್ದೆಲ್ಲವೂ ಲಾಭವೇ ಆಗಿರುತ್ತದೆ. ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿರುವುದರಿಂದ ಜೀವನ ನಿರ್ವಹಣೆಗೆ ಎಂದಿಗೂ ಕಷ್ಟವಾಗಿಲ್ಲ’ ಎನ್ನುತ್ತಾರೆ ಅವರು.ಉಪ ಕಸುಬು


ಕೃಷಿ ಜೊತೆಗೆ ಉಪಕಸುಬನ್ನು ಮಾಡಿದರೆ ಮಾತ್ರವೇ ಆರ್ಥಿಕ ಸದೃಢತೆ ಸಾಧ್ಯ ಎಂದು ನಂಬಿಕೊಂಡಿರುವವರು ಇವರು. ಹಾಗಾಗಿ ನಾಲ್ಕು ನಾಟಿ ಹಸುಗಳನ್ನು ಸಾಕಿದ್ದಾರೆ. ಒಂದು ಹಸು ದಿನಕ್ಕೆ 4ಲೀ. ಹಾಲು ಕೊಡುತ್ತದೆ. 10 ಕುರಿ, ಮೇಕೆಗಳನ್ನು ಇವರು ಸಾಕಿದ್ದಾರೆ. ಇದರ ಜೊತೆಗೆ ಹೈಬ್ರಿಡ್ ಶ್ವಾನ ತಳಿಗಳಾದ ಜರ್ಮನ್‌ ಶೆಫರ್ಡ್, ಆಲ್‌ಸಿಷನ್, ಪಮೋರಿಯನ್, ಲ್ಯಾಬ್ರೊಡಾರ್ ಶ್ವಾನಗಳನ್ನು ಸಾಕಿ  ಮಾರಾಟ ಮಾಡುತ್ತಾರೆ.ಹೈಬ್ರಿಡ್ ಶ್ವಾನದ ತಳಿಗಳಿಗೆ ಹಳ್ಳಿಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಕಳ್ಳಕಾಕರು ಮತ್ತು ಇತರೆ ಪ್ರಾಣಿ, ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ಶ್ವಾನಗಳನ್ನು ಕೊಂಡುಕೊಳ್ಳುತ್ತಾರೆ ಎನ್ನುತ್ತಾರೆ.  ಹೈಬ್ರಿಡ್ ನಾಯಿ ತಳಿಗಳನ್ನು ಸಾಕಲು ಸಾಕಷ್ಟು ಹಣ ವ್ಯಯವಾಗುತ್ತದೆ. ರೈತರಿಗೆ ಅಷ್ಟು ಹಣವನ್ನು ಖರ್ಚು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರೆ, ನಾವು ಶ್ವಾನಗಳಿಗೆ ಅಂಗಡಿಯಿಂದ ಖರೀದಿಸಿದ ಆಹಾರವನ್ನು ಹಾಕುವುದಿಲ್ಲ. ಬದಲಾಗಿ  ರಾಗಿ, ಗೋಧಿ, ಮುಸುಕಿನ ಜೋಳ, ಅಲಸಂದೆ, ಕೆಂಪು ಅಕ್ಕಿಯನ್ನು ಹುರಿದು ಪುಡಿ ಮಾಡಿ  ಗಂಜಿ ಮಾಡಿಕೊಡುತ್ತೇವೆ. ಶ್ವಾನಗಳು ಆರೋಗ್ಯವಾಗಿರುವುದರ ಜೊತೆಗೆ ದಷ್ಟಪುಷ್ಟವಾಗಿವೆ ಎನ್ನುತ್ತಾರೆ ಇವರು.ಸಂಸಾರದ ಜೊತೆಗೆ ಕೃಷಿ ಕೆಲಸವನ್ನು ನಿಭಾಯಿಸುವುದು ಕಷ್ಟವೇನಲ್ಲ ಎನ್ನುವ ಇವರು, ‘ಮನಸ್ಸಿದ್ದರೆ ಎಂತಹ ಕಠಿಣ ಕೆಲಸವೂ ಸುಲಲಿತವಾಗಿ ಸಾಗುತ್ತದೆ. ಶ್ರಮವಿದ್ದರೆ, ಪ್ರತಿಫಲ ದೊರೆಯುತ್ತದೆ’ ಎನ್ನುತ್ತಾರೆ. ಇವರ ಕೃಷಿ ಸಾಧನೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ‘ಪ್ರಗತಿಪರ ರೈತ ಮಹಿಳೆ‘ ಎಂಬ ಪ್ರಶಸ್ತಿ ಲಭಿಸಿದೆ. ಸಂಪರ್ಕಕ್ಕೆ: 9900391029.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry