ಭಾನುವಾರ, ಜೂನ್ 13, 2021
23 °C

ಸರ್ವಶಕ್ತ ರಾಷ್ಟ್ರ, ಭಾರತದ ಆಸೆ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಇತ್ತೀಚಿನ ವರ್ಷಗಳಲ್ಲಿ ಭಾರತವು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ `ಸರ್ವಶಕ್ತ~ (ಸೂಪರ್ ಪವರ್) ರಾಷ್ಟ್ರವಾಗುವ ಸಾಧ್ಯತೆ ಇಲ್ಲ ಎಂದು ಹೆಸರಾಂತ ಇತಿಹಾಸ ತಜ್ಞ ಪ್ರೊ.ರಾಮಚಂದ್ರ ಗುಹಾ ಮತ್ತಿತರ ತಜ್ಞರು ಪ್ರತಿಪಾದಿಸಿದ್ದಾರೆ.ನಿಜ ಹೇಳಬೇಕೆಂದರೆ, ಭಾರತವು ಸರ್ವ ಶಕ್ತ ರಾಷ್ಟ್ರವಾಗಬೇಕೆಂಬ ಆಕಾಂಕ್ಷೆಯನ್ನೇ ಹೊಂದಿರಬಾರದು ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ 2009ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, `ನನ್ನ ಪ್ರಕಾರ ಭಾರತ ಕೇವಲ ಪ್ರಾದೇಶಿಕ ಶಕ್ತಿ ಮಾತ್ರವಲ್ಲ; ಜಾಗತಿಕ ಶಕ್ತಿ~ ಎಂದು ಹೇಳಿದ್ದರು. ಆದರೆ ಎಲ್‌ಎಸ್‌ಇ ತಜ್ಞರು `ಭಾರತ: ಮುಂದಿನ ಸರ್ವಶಕ್ತ ರಾಷ್ಟ್ರ?~ ಶೀರ್ಷಿಕೆಯಡಿ ನಡೆಸಿದ ಅಧ್ಯಯನದಲ್ಲಿ ಆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.ಭಾರತದ ಆರ್ಥಿಕತೆ, ರಕ್ಷಣೆ, ಆಡಳಿತ, ಸಂಸ್ಕೃತಿ, ಪರಿಸರ ಮತ್ತು ಸಮಾಜ ಕುರಿತ ಒಂಬತ್ತು ತಜ್ಞರು ಬರೆದ ಲೇಖನಗಳನ್ನು ಆಧರಿಸಿ ಎಲ್‌ಎಸ್‌ಇ ಈ ನಿರ್ಧಾರಕ್ಕೆ ಬಂದಿದೆ. ಸರ್ವಶಕ್ತ ರಾಷ್ಟ್ರದ ಸ್ಥಾನಮಾನ ಕೋರುತ್ತಿರುವ ಭಾರತದ ಬೇಡಿಕೆಯನ್ನು ಬಹಳ ಜಾಗರೂಕವಾಗಿ ಪರಿಶೀಲಿಸಬೇಕು ಎಂದೂ ಎಲ್‌ಎಸ್‌ಇ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.ಎಲ್‌ಎಸ್‌ಇ ಯಲ್ಲಿ ಇತಿಹಾಸ ಮತ್ತು ಜಾಗತಿಕ ವಿದ್ಯಮಾನಗಳ ವಿಭಾಗದ ಫಿಲಿಪ್ ರೋಮನ್ ಚೇರ್ (ಅಧ್ಯಯನ ಪೀಠದ ಮುಖ್ಯಸ್ಥ) ಆಗಿರುವ ಪ್ರೊ.ರಾಮಚಂದ್ರ ಗುಹಾ ಕೂಡ, ಭಾರತ ಸರ್ವಶಕ್ತ ರಾಷ್ಟ್ರವಾಗಲು ಬಯಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಮಾಮಾನ ವ್ಯಕ್ತಪಡಿಸಿದ್ದಾರೆ.ಭಾರತ ಏಕೆ ಸರ್ವ ಶಕ್ತ ರಾಷ್ಟ್ರವಾಗಲು ಆಗಲು ಅರ್ಹವಲ್ಲ ಎಂಬುದಕ್ಕೆ `ಪ್ರಜಾವಾಣಿ~ಯ ಅಂಕಣಕಾರರೂ ಆದ ಗುಹಾ ಮುಂದಿಡುವ ಕಾರಣಗಳು ಹೀಗಿವೆ:ಭಾರತದಲ್ಲಿ ನಕ್ಸಲರ ಸವಾಲು ಇದೆ; ಹಿಂದುತ್ವವಾದಿಗಳ ಸಂಖ್ಯೆ ಬೆಳೆಯುತ್ತಿದೆ; ಉಳ್ಳವರು ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತಿದೆ; ಮಾಧ್ಯಮಗಳ ಕ್ಷುಲ್ಲಕವಾಗಿ ಕಾರ್ಯನಿರ್ವಹಿಸುತ್ತಿವೆ; ಪ್ರಸ್ತುತ ಸಂಪನ್ಮೂಲಗಳ ಬಳಕೆಗೆ ಅನುಸರಿಸುತ್ತಿರುವ ನೀತಿ ಸುಸ್ಥಿರತೆಗೆ ವಿರೋಧಿಯಾಗಿದೆ; ಅಸ್ಥಿರತೆ ಹಾಗೂ ಮೈತ್ರಿ ಸರ್ಕಾರದಿಂದಾಗಿ ನೀತಿ ನಿರೂಪಣೆಯಲ್ಲಿನ ಅಸಂಬದ್ಧತೆ ಇದೆ- ಇವು ರಾಷ್ಟ್ರಕ್ಕೆ ತೊಡಕಾಗಿವೆ ಎಂಬುದು ಅವರ ಮಂಡನೆಯಾಗಿದೆ.ಏನೆಲ್ಲಾ ಅಡಚಣೆಗಳ ಮಧ್ಯೆಯೂ ಭಾರತದಲ್ಲಿ ಪ್ರಜಾಪ್ರಭುತ್ವ ಬೆಳೆದಿರಬಹುದು. ಆದರೆ ಆ ರಾಷ್ಟ್ರದ ವ್ಯವಸ್ಥೆಯು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದಾಗಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂದೂ ಅಧ್ಯಯನ ಹೇಳಿದೆ.ಭಾರತದಲ್ಲಿ ಪರಿಸರವನ್ನು ಬಲಿಗೊಟ್ಟು ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದೂ ತಜ್ಞರು ಹೇಳಿದ್ದಾರೆ.

ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಸರ್ವ ಶಕ್ತ ರಾಷ್ಟ್ರವನ್ನಾಗಿ ಬೆಳೆಸಬೇಕೆಂದು ಕೆಲವರು ಇಚ್ಛಿಸಿದ್ದರೂ ಅದು ಪ್ರಾಯೋಗಿಕವಾಗಿ ನಿಜವಾಗುವ ಸಾಧ್ಯತೆ ಕ್ಷೀಣ ಎಂದಿದ್ದಾರೆ.ಗುಹಾ ಅವರ ಲೇಖನದ ಜತೆಗೆ ರಾಜೀವ್ ಸಿಬಲ್, ಇಸ್ಕಂದರ್ ರೆಹಮಾನ್, ನಿಕೊಲಸ್ ಬ್ಲೇರಲ್, ಆಲಿವರ್ ಸ್ಟ್ಯೂಂಕೆಲ್, ಹರೀಶ್ ವಾಂಖೇಡೆ, ಮುಕುಲಿಕಾ ಬ್ಯಾನರ್ಜಿ, ಆಂಡ್ರ್ಯೂ ಸ್ಯಾಂಚೆಜ್ ಮತ್ತು ಸಂದೀಪ್ ಸೇನ್‌ಗುಪ್ತ ಅವರ  ಲೇಖನಗಳನ್ನು ಆಧರಿಸಿ ಎಲ್‌ಎಸ್‌ಇ ಅಧ್ಯಯನ ನಡೆಸಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.