ಸರ್ವಸಮ್ಮತ ಸೂತ್ರದಿಂದ ಪರಿಹಾರ

7

ಸರ್ವಸಮ್ಮತ ಸೂತ್ರದಿಂದ ಪರಿಹಾರ

Published:
Updated:

ಕೃಷ್ಣರಾಜಪೇಟೆ: `ಕಾವೇರಿ ಕುಟುಂಬ~ದ ಪರಿಕಲ್ಪನೆಯೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ರೈತರು ಒಂದೆಡೆ ಕುಳಿತು ಚರ್ಚಿಸಿ, ಸರ್ವಸಮ್ಮತ ಸೂತ್ರವನ್ನು ರೂಪಿಸಿಕೊಳ್ಳುವುದರಿಂದ ಮಾತ್ರ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಪ್ರಗತಿಪರ ಚಿಂತಕ, ಕರ್ನಾಟಕ ಜನಶಕ್ತಿ ಸಂಚಾಲಕ ಡಾ.ಎಚ್.ವಿ.ವಾಸು ಪ್ರತಿಪಾದಿಸಿದರು.ಪಟ್ಟಣದ ಮಿನಿ ವಿಧಾನಸೌಧದ ಒಳಾಂಗಣದಲ್ಲಿ ನಾವು - ನೀವು, ಸಮಾನ ಮನಸ್ಕರ ಸಂಘಟನೆ  ಗುರುವಾರ ಏರ್ಪಡಿಸಿದ್ದ `ಕಾವೇರಿ ಜಲವಿವಾದ - ಸಮಸ್ಯೆಗಳು ಮತ್ತು ಪರಿಹಾರಗಳು: ಒಂದು ಚಾರಿತ್ರಿಕ ವಿಶ್ಲೇಷಣೆ~ ಎಂಬ ವಿಷಯದ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾವೇರಿ ನದಿಯ ಹುಟ್ಟು ಮತ್ತು ಪ್ರಹಿಸುವಿಕೆಯ ಕವಲುಗಳು, ನದಿನೀರು ಹಂಚಿಕೆ ವಿವಾದದ ಐತಿಹಾಸಿಕ ಮೂಲ, ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ನಡುವೆ ನದಿಗಳ ನೀರು ಬಳಕೆ ಕುರಿತು ಆದ ಒಪ್ಪಂದಗಳು, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಸಂದರ್ಭದಲ್ಲಿ ಆದ ರಾಜಕೀಯ ಬೆಳವಣಿಗೆ, ತಗಾದೆಗಳು, ಕಾವೇರಿ ನ್ಯಾಯಾಧಿಕರಣದ ಸ್ಥಾಪನೆ, ಮಧ್ಯಂತರ ಮತ್ತು ಅಂತಿಮ ತೀರ್ಪುಗಳು ಸೇರಿದಂತೆ ಕಾವೇರಿ ಜಲವಿವಾದದವನ್ನು ಅವರು ಎಳೆ ಎಳೆಯಾಗಿ ವಿಶ್ಲೇಷಿಸಿದರು. ಕಾವೇರಿ ವಿಷಯದಲ್ಲಿ ಕರ್ನಾಟಕ ರಾಜ್ಯಕ್ಕೆ ಚಾರಿತ್ರಿಕವಾದ ಅನ್ಯಾಯವಾಗಿದೆ. 1892 ಮತ್ತು 1924ರಲ್ಲಿ ಆದಂತಹ ಒಪ್ಪಂದಗಳು ಕರ್ನಾಟಕಕ್ಕೆ ಅನ್ಯಾಯ ಉಂಟುಮಾಡಿವೆ. ನೀರು ಹಂಚಿಕೆ ಕುರಿತು 1970 ರಲ್ಲಿ ರೂಪಿಸಲು ಯತ್ನಿಸಿದ ಮಾಸ್ಟರ್ ಪ್ಲಾನ್ ಮತ್ತು ರಾಜ್ಯದ ಹಿಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ತಮ್ಮ ತಮಿಳುನಾಡಿನ ಸಹವರ್ತಿ ಕರುಣಾನಿಧಿಯೊಂದಿಗೆ ನಡೆಸಿದ ಮಾತುಕತೆ ಮಾತ್ರ ಕರ್ನಾಟಕದ ಪಾಲಿಗೆ ಉತ್ತಮ ಬೆಳವಣಿಗೆಗಳಾಗಿವೆ. ಇದರ ಹೊರತಾಗಿ ರಾಜಕಾರಣಿಗಳಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಪರಸ್ಪರರ ಬಗ್ಗೆ ತಪ್ಪು ಅಭಿಪ್ರಾಯಗಳು, ಸುಳ್ಳು ನಂಬಿಕೆಗಳಿವೆ. ತಮಿಳುನಾಡಿನಲ್ಲಿ ಒಂದೇ ವರ್ಷದಲ್ಲಿ ತಾಲಡಿ, ಸಾಂಬಾ ಮತ್ತು ಕುರುವೈ ಎಂಬ ಮೂರು ಬೆಳೆ ಬೆಳೆಯುತ್ತಾರೆ. ಇದೇ ರೀತಿ ಕರ್ನಾಟಕದ ಜನರು ಜಗಳಗಂಟರು ಎಂಬಂತಹ ಅಭಿಪ್ರಾಯಗಳು ಚಾಲ್ತಿಯಲ್ಲಿದ್ದು, ಇವುಗಳು ಸತ್ಯಕ್ಕೆ ದೂರವಾದ, ಆಧಾರರಹಿತ ವಿಷಯಗಳಾಗಿದ್ದು, ಮಾತುಕತೆ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬೇಕು. ಆಗ ಮಾತ್ರ ಶಾಶ್ವತ ಪರಿಹಾರ ಗೋಚರಿಸುತ್ತದೆ ಎಂದರು.ಕೃಷಿ ಭೂಮಿಗೆ ಅತಿಯಾದ ರಸಗೊಬ್ಬರಗಳ ಬಳಕೆಯನ್ನು ತಪ್ಪಿಸಿ, ರಾಸಾಯನಿಕಮುಕ್ತ ಮತ್ತು ಕಡಿಮೆ ಪ್ರಮಾಣದ ನೀರು ಬಳಸುವಂತೆ ಮಾಡಬೇಕು. ನಾಡಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಲಭ್ಯವಿರುವ ನೀರನ್ನು ಮಿತಬಳಕೆ ಮತ್ತು ಸೂಕ್ತವಾದ ನಿರ್ವಹಣೆ ಮಾಡಬೇಕು. ಆ ಮೂಲಕ ನಾವು ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ತಾಲ್ಲೂಕು ದಂಡಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ರಾಜ್ಯದ ರೈತ ಮುಖಂಡರಾದ ಕೆ.ಆರ್.ಜಯರಾಂ, ಎಂ.ವಿ.ರಾಜೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ರೈತಸಂಘದ ಅಧ್ಯಕ್ಷ ಮಂಚನಹಳ್ಳಿ ನಾಗಣ್ಣ, ಸಂಯೋಜಕರಾದ ಡಾ.ಉಮಾಶಂಕರ್, ಡಾ.ರವೀಂದ್ರ, ಕೆ.ವಾಸು ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry