ಸರ್ವಿಸಸ್ ಎದುರು ಕುಸಿತ ಕಂಡ ಮುಂಬೈ ತಂಡ

7

ಸರ್ವಿಸಸ್ ಎದುರು ಕುಸಿತ ಕಂಡ ಮುಂಬೈ ತಂಡ

Published:
Updated:
ಸರ್ವಿಸಸ್ ಎದುರು ಕುಸಿತ ಕಂಡ ಮುಂಬೈ ತಂಡ

ನವದೆಹಲಿ (ಪಿಟಿಐ): 39 ಬಾರಿಯ ಚಾಂಪಿಯನ್ ಮುಂಬೈ ತಂಡದವರು ಒಮ್ಮೆಲೇ ಕುಸಿತ ಕಂಡಿದ್ದಾರೆ. ಬುಧವಾರ ಇಲ್ಲಿಆರಂಭವಾದ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ ಎದುರು ಮೊದಲ ದಿನವೇ ಮುಂಬೈ ಆತಂಕಕ್ಕೆ ಸಿಲುಕಿದೆ.ಪಾಲಂ ಏರ್‌ಫೋರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಮುಂಬೈ 78 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ವಿಚಿತ್ರವಾಗಿ ವರ್ತಿಸುತ್ತಿರುವ ಪಿಚ್‌ನಲ್ಲಿ ಈ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡಿದರು.ಕೇವಲ 23 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈಗೆ ಆಸರೆಯಾಗಿದ್ದು ಸಚಿನ್ ತೆಂಡೂಲ್ಕರ್ ಹಾಗೂ ಅಭಿಷೇಕ್ ನಾಯರ್. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 81 ರನ್ ಸೇರಿಸಿದರು. 75 ಎಸೆತ ಎದುರಿಸಿದ ತೆಂಡೂಲ್ಕರ್ 56 ರನ್ ಗಳಿಸಿದರು. ಅದರಲ್ಲಿ ಒಂದು ಸಿಕ್ಸರ್ ಹಾಗೂ 10 ಬೌಂಡರಿಗಳಿವೆ. ಅಭಿಷೇಕ್ (70; 160ಎ, 8 ಬೌಂ.) ಕೂಡ ಕಠಿಣ ಪಿಚ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಆದರೆ ಐದು ದಿನಗಳ ಈ ಪಂದ್ಯದಲ್ಲಿ ಮುಂಬೈ ಸಂಕಷ್ಟಕ್ಕೆ ಸಿಲುಕಿರುವುದು ನಿಜ.ಸೌರಾಷ್ಟ್ರದ ಸವಾಲಿನ ಮೊತ್ತ: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಎದುರು ಸೌರಾಷ್ಟ್ರ ತಂಡದವರು ಸವಾಲಿನ ಮೊತ್ತ ಗಳಿಸುವತ್ತ ದಾಪುಗಾಲಿಟ್ಟಿದ್ದಾರೆ. ಈ ತಂಡದವರು ಮೊದಲನೇ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದ್ದಾರೆ.ನಾಯಕ ಜಯದೇವ್ ಷಾ 87 ರನ್ ಗಳಿಸಿ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಅವರಿಗೆ ಶಿತಾಂಶು ಕೋಟಕ್    ಹಾಗೂ ಶೆಲ್ಡೊನ್ ಜಾಕ್ಸನ್ ಉತ್ತಮ ನೆರವು ನೀಡಿದರು. ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಹರಭಜನ್ ಸಿಂಗ್ 1 ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್: ಮುಂಬೈ: ಮೊದಲ ಇನಿಂಗ್ಸ್ 78 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 (ಸಚಿನ್ ತೆಂಡೂಲ್ಕರ್ 56, ಅಭಿಷೇಕ್ ನಾಯರ್ 70; ಸೂರಜ್ ಯಾದವ್ 42ಕ್ಕೆ2, ಶದಾಬ್ ನಜರ್ 45ಕ್ಕೆ2).ಸೌರಾಷ್ಟ್ರ: ಮೊದಲ ಇನಿಂಗ್ಸ್ 87 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 274 (ಶಿತಾಂಶು ಕೋಟಕ್ 54, ಜಯದೇವ್ ಷಾ 87, ಶೆಲ್ಡೊನ್ ಜಾಕ್ಸನ್ ಬ್ಯಾಟಿಂಗ್ 87; ಸಿದ್ದಾರ್ಥ್ ಕೌಲ್ 64ಕ್ಕೆ2, ಹರಭಜನ್ ಸಿಂಗ್ 59ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry