ಸರ್ವೆ ಕಾರ್ಯ: 1600 ಭೂಮಾಪಕರ ನೇಮಕ

7

ಸರ್ವೆ ಕಾರ್ಯ: 1600 ಭೂಮಾಪಕರ ನೇಮಕ

Published:
Updated:

ಬೆಂಗಳೂರು: ಪಹಣಿ, ಪೋಡಿ, ಹಕ್ಕು ಬದಲಾವಣೆ ಮತ್ತು ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಮೇ ತಿಂಗಳ ಒಳಗೆ 1600 ಮಂದಿಯನ್ನು ಭೂಮಾಪಕರ ಹುದ್ದೆಗೆ ನೇಮಕ ಮಾಡಿಕೊಳ್ಳುವುದಾಗಿ ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಸೋಮವಾರ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ನಿಯಂತ್ರಣಾ ಪ್ರಾಧಿಕಾರ ನಡೆಸುತ್ತಿದೆ. ಅದರ ನಂತರ ಪಹಣಿ, ಪೋಡಿ, ಹಕ್ಕು ಬದಲಾವಣೆ ಮತ್ತು ಸರ್ವೆಕಾರ್ಯಗಳನ್ನು ತ್ವರಿತಗೊಳಿಸಲಾಗುವುದು ಎಂದರು.ಬಿಜೆಪಿಯ ಸಿ.ಟಿ.ರವಿ ಸೇರಿದಂತೆ ಇತರರು ಮಾತನಾಡಿ, ಪಹಣಿ, ಪೋಡಿ ಸೇರಿದಂತೆ ಇತರ ಸಮಸ್ಯೆಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದ್ದು, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು ಎಂದರು.ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ‘ಖಾತೆ ಬದಲಾವಣೆ ಅವಧಿಯನ್ನು ಈಗಿನ 82 ದಿನಗಳ ಬದಲು ಮತ್ತಷ್ಟು ಕಡಿಮೆ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.ಪುನರ್‌ರಚನೆ: ಜನಗಣತಿ ಮುಗಿದ ನಂತರ ಹೊಸ ತಾಲ್ಲೂಕುಗಳ ರಚನೆ ಸಂಬಂಧ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮಾರಿಹಾಳ್ ಸುರೇಶ ಶಿವರುದ್ರಪ್ಪ ಅವರ ಪ್ರಶ್ನೆಗೆ ‘ಕಿತ್ತೂರನ್ನು ತಾಲ್ಲೂಕು ಮಾಡಲು ಸರ್ಕಾರ ನೇಮಿಸಿದ್ದ ಎಲ್ಲ ಸಮಿತಿಗಳೂ ಶಿಫಾರಸು ಮಾಡಿವೆ. ಆದರೆ, ಜನಗಣತಿ ಮುಗಿಯುವವರೆಗೂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಬಂಧ ಇದೆ. ಇದರ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.ಭೂಮಿ ಸವಳು: 600 ಕೋಟಿ

ರಾಜ್ಯದಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಮಿ ಸವಳು- ಜವುಳು ಬಿದ್ದು ಬರಡಾಗಿದ್ದು, ಇದನ್ನು ಸರಿ ಮಾಡಲು 600 ಕೋಟಿ ರೂ ಖರ್ಚು ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿದ್ದುಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರದ ಕಾಡಾ ಈ ಹಣ ನೀಡುತ್ತಿದ್ದು, ಈ ಸಂಬಂಧ ಸದ್ಯದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಮಾ.11ರಂದು ಕಾಡಾ ಆಯುಕ್ತರು ಸಭೆ ಕರೆದಿದ್ದು, ಅಲ್ಲಿ ಯೋಜನೆಗೆ ಅಂತಿಮ ಒಪ್ಪಿಗೆ ಸಿಗಲಿದೆ ಎಂದರು.ಸವಳು, ಜೌಗು, ಜವುಳು ನಿವಾರಣೆಗೆ ಇದೇ ವೊದಲು ಸರ್ಕಾರ ಯೋಜನೆ ರೂಪಿಸುತ್ತಿದ್ದು, ನಬಾರ್ಡ್ ವತಿಯಿಂದಲೂ 80 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಮಲಪ್ರಭಾ, ಘಟಪ್ರಭಾ ಭಾಗದಲ್ಲಿನ ಈ ಸಮಸ್ಯೆ ನಿವಾರಣೆಗೆ 80 ಕೋಟಿ ಖರ್ಚು ಮಾಡಲಾಗುವುದು ಎಂದು ತಿಳಿಸಿದರು.806 ರೈತರ ಆತ್ಮಹತ್ಯೆ

‘ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 806 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕೃಷಿ ಸಚಿವ ಉಮೇಶ್ ವಿ.ಕತ್ತಿ ವಿಧಾನಸಭೆಗೆ ತಿಳಿಸಿದರು.ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ‘2008ರಿಂದ 2011ರ ಫೆ.15ರವರೆಗೆ ಇಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ರೈತರ ಆತ್ಮಹತ್ಯೆ ಪರಿಶೀಲನಾ ಸಮಿತಿಯು ಅರ್ಹ ಪ್ರಕರಣವೆಂದು ತೀರ್ಮಾನಿಸಿದ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry