ಶುಕ್ರವಾರ, ಜೂನ್ 5, 2020
27 °C

ಸರ್ವ ಪಕ್ಷದ ನಿಯೋಗ ಹೋಗಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಹೈದರಬಾದ್ ಕರ್ನಾಟಕದ ಮಹತ್ವಾಕಾಂಕ್ಷಿ ರೈಲ್ವೆ ಮಾರ್ಗಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಣಕಾಸಿನ ನೆರವು ನೀಡಬೇಕು. ನೂತನ ರೈಲ್ವೆ ಮಾರ್ಗಗಳ ಸರ್ವೇ ಕಾರ್ಯಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಅದಕ್ಕಾಗಿ ಫೆಬ್ರುವರಿ ಮೊದಲ ವಾರದಲ್ಲಿ ದೆಹಲಿಗೆ ಸರ್ವಪಕ್ಷಗಳ ಸದಸ್ಯರ ನಿಯೋಗ ಕರೆದೊಯ್ಯಲು ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.ಸೋಮವಾರ ಪಟ್ಟಣದಲ್ಲಿ ಯಾದಗಿರಿ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳ ಸರ್ವ ಪಕ್ಷಗಳ  ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ವಿಶೇಷ ಸಭೆ ಕರೆಯಲಾಗಿತ್ತು. ಸಭೆ ಉದ್ದೇಶಿಸಿ ಮಾಜಿ ಸಂಸದ ಬಸವರಾಜ ರಾಯರೆಡ್ಡಿ ಮಾತನಾಡಿದರು.ಗದಗ ವಾಡಿ ರೈಲ್ವೆ ಮಾರ್ಗವು ಯಲಬುರ್ಗಾ, ಕುಷ್ಟಗಿ, ಲಿಂಗಸುಗೂರ, ಸುರಪುರ, ಶಹಾಪುರ ಮಾರ್ಗವಾಗಿ ವಾಡಿ ತಲುಪಲಿದೆ. ಇದು ಅನುಷ್ಠಾನಗೊಳ್ಳುವುದರಿಂದ ಹುಬ್ಬಳ್ಳಿ, ಗೋವಾ, ಗುಲ್ಬರ್ಗ, ಹೈದರಾಬಾದ್, ಬೆಂಗಳೂರನಂಥ ಪಟ್ಟಣ ಪ್ರದೇಶಗಳಿಗೆ ಸಂಪರ್ಕಿಸಲು ಸಹಕಾರಿ ಆಗುತ್ತದೆ. ಅಲ್ಲದೆ, ಹಿಂದುಳಿದ ಪ್ರದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗೆ ಸ್ಫೂರ್ತಿ ತುಂಬಲಿರುವ ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದೆ ಬರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕರಾದ ಮಾನಪ್ಪ ವಜ್ಜಲ, ಅಮರೆಗೌಡ ಪಾಟೀಲ ಬಯಾಪೂರ, ಮಾಜಿ ಶಾಸಕರಾದ ಎಂ.ಗಂಗಣ್ಣ, ಹಂಪನಗೌಡ ಬಾದರ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಜೊತೆಗೆ ಹೈಕ ಪ್ರದೇಶದ ಅಭಿವೃದ್ಧಿಗೆ ಸಹಕಾರಿ ಆಗಲಿರುವ ರೈಲ್ವೆ ಮಾರ್ಗಗಳ ಅನುಷ್ಠಾನಕ್ಕೆ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುಸು. ಪಕ್ಷಾತೀತವಾಗಿ ಹೋರಾಟ ಚುರುಕುಗೊಳಿಸಲು ಸಮ್ಮತಿ ಸೂಚಿಸಿದರು.ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡುವಂತೆ ರಾಜ್ಯ ಸರ್ಕಾರದ ಮೇಲೂ ಒತ್ತಡ ಹೇರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ, ರಾಯಚೂರು ದೇವದುರ್ಗ ವಿಜಾಪುರ. ರಾಯಚೂರು ಬೆಳಗಾವಿ, ಕೊಪ್ಪಳ ಆಲಮಟ್ಟಿ ರೈಲ್ವೆ ಮಾರ್ಗಗಳ ಸರ್ವೇ ಕಾರ್ಯ ಕೈಗೆತ್ತಿಕೊಳ್ಳುವ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಯಿತು.ಮಿನಿ ವಿಮಾನ ನಿಲ್ದಾಣ: ರಾಷ್ಟ್ರದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ದೇಶದ ಏಕೈಕ ಚಿನ್ನದ ಗಣಿ  ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪಿಸಲು ಯುಪಿಎ ಸರ್ಕಾರದ ಮೇಲೆ ಒತ್ತೆ ಹೇರಬೇಕು. ರಾಯಚೂರು, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳ ಜನತೆಗೆ ಹಟ್ಟಿ ಚಿನ್ನದ ಗಣಿ ಕೇಂದ್ರ ಸ್ಥಳವಾಗಲಿದೆ ಎಂದು ಶಾಸಕ ಮಾನಪ್ಪ ವಜ್ಜಲ ಮನವಿ ಮಾಡಿಕೊಂಡರು.ವಿಶೇಷ ಸಭೆ ಅಧ್ಯಕ್ಷತೆಯನ್ನು ಮಾಜಿ ಸಂಸದ ಎ.ವೆಂಕಟೇಶ ನಾಯಕ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ಪಾಟೀಲ ಇಟಗಿ. ಶರಣಪ್ಪ ಮೇಟಿ. ಮುಖಂಡರಾದ ಶಾಂತಣ್ಣ ಮುದಗಲ್ಲ ಇತರರು ಇದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.