ಶನಿವಾರ, ಡಿಸೆಂಬರ್ 7, 2019
21 °C

ಸಲಗಕ್ಕೆ ವೃದ್ಧ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಲಗಕ್ಕೆ ವೃದ್ಧ ಬಲಿ

ರಾಮನಗರ: ಬಿಡದಿ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆ ಒಂಟಿ ಸಲಗವೊಂದು  ಹಠಾತ್ತನೆ ಕಾಣಿಸಿಕೊಂಡು ಒಬ್ಬ ಕೂಲಿ ಕಾರ್ಮಿಕ ಹಾಗೂ ಒಂದು ಹಸುವನ್ನು ಸಾಯಿಸಿದೆ.ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಬ್ಬನಕುಪ್ಪೆ ಬಳಿ ಪ್ರತ್ಯಕ್ಷವಾದ ಆನೆ, ಅಲ್ಲಿಂದ ಇಟ್ಟಮಡು, ಜಂಗಮ ರಪಾಳ್ಯ, ಗೋಪಳ್ಳಿ, ಬಿಲ್ಲೆದೊಡ್ಡಿ, ವಡ್ಡರದೊಡ್ಡಿ, ಮಾರುತಿಪುರ, ರಾಮನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿತು.ಕೆಲವೇ ಕ್ಷಣಗಳಲ್ಲೇ ಜನದಟ್ಟಣೆ ಹೆಚ್ಚಾಗಿ ಆನೆ ಹೋದ ಕಡೆಯೆಲ್ಲಾ ಅದನ್ನು ಹಿಂಬಾಲಿಸಿ ಬೊಬ್ಬೆ ಹಾಕಲಾರಂಭಿಸಿದರು. ಇದರಿಂದ ಮತ್ತಷ್ಟು ಕೆರಳಿದ ಆನೆ ತನ್ನ ಓಟವನ್ನು ಹೆಚ್ಚಿಸಿದರು.ಈ ವೇಳೆ ಜಂಗಮರಪಾಳ್ಯದ ಬಳಿ ಬಂದ ಆನೆ ಅಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ವೆಂಕಟರಾಮಪ್ಪ (68) ಎಂಬುವರ ಮೇಲೆ ತನ್ನ ಆಕ್ರೋಶ ಪ್ರದರ್ಶಿಸಿತು.  ತನ್ನ ಸೊಂಡಲಿನಿಂದ ಎರಡು– ಮೂರು ಬಾರಿ ವೆಂಕಟರಾಮಪ್ಪ ನನ್ನು ಎತ್ತಿ ನೆಲಕ್ಕೆ ಕುಕ್ಕಿ ಆತನ ಕಾಲನ್ನು ತುಳಿದು ಮುಂದೆ ಸಾಗಿತು’ ಎಂದು ಪ್ರತ್ಯಕ್ಷದರ್ಶಿ ಗೋಪಾಲ್‌ ತಿಳಿಸಿದರು.ಗಾಯಗೊಂಡಿದ್ದ ಅವರನ್ನು ಕೂಡಲೇ ಕುಂಬಳಗೋಡು ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ.ಸಲಗವು ಸಾಗಿದ ಮಾರ್ಗ ಮಧ್ಯದ  ಹಳ್ಳಿಗಳಲ್ಲಿ ಸಾಕಷ್ಟು ಬೆಳೆ ಹಾನಿಯನ್ನೂ ಮಾಡಿದೆ. ತನ್ನ ಆಕ್ರೋಶವನ್ನು ಮೂರು ಹಸುಗಳ ಮೇಲೂ ತೋರಿಸಿದೆ.ಬಿಲ್ಲೆದೊಡ್ಡಿಯಲ್ಲಿ ಹಸುವೊಂದನ್ನು ಸೊಂಡಿಲಿನಿಂದ ಎಳೆದಾಡಿರುವ ಆನೆ, ದಂತದಿಂದ ತಿವಿದು ಗಾಯಗೊಳಿಸಿದೆ. ಅಲ್ಲದೆ ಅದನ್ನು ಎಳೆದುಕೊಂಡು ಹೋಗಿ ವೃಷಭಾವತಿ ನಾಲೆಯ ಬಳಿ ಎಸೆದಿದೆ. ತೀವ್ರಗಾಯಗೊಂಡ ಹಸು ಸ್ಥಳದಲ್ಲಿಯೇ ಅಸುನೀಗಿದೆ.ಮಾರುತಿಪುರದ ಚಂದ್ರಪ್ಪ, ರಾಮನಹಳ್ಳಿಯ ಸಿದ್ದರಾಜು ಎಂಬುವರ ಹಸುಗಳು ಆನೆ ದಾಳಿಗೆ ಒಳಗಾಗಿ ಗಾಯಗೊಂಡಿವೆ.ನಂತರ ಜನರು ಕೇಕೆ ಹಾಕಿ ಆನೆಯನ್ನು ಓಡಿಸಿದರು. ಆನೆ ಹಂದಿಗುಂದಿ ಅರಣ್ಯ ಪ್ರದೇಶಕ್ಕೆ ಓಡಿ ಹೋಯಿತು.ಜನರ ಆಕ್ರೋಶ: ’ಬೆಳಿಗ್ಗೆ 6 ಗಂಟೆಗೆ ಈ ಭಾಗದಲ್ಲಿ ಒಂಟಿ ಸಲಗ ಕಂಡು ಬಂದಿದೆ. ಆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದರೂ ಒಂಬತ್ತು ಗಂಟೆಯವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರಲಿಲ್ಲ. ಇದರಿಂದ ಸುತ್ತಮುತ್ತಲ ಗ್ರಾಮಗಳ ಯುವಕರು, ಗ್ರಾಮಸ್ಥರೇ ಸೇರಿಕೊಂಡು ಆನೆಯನ್ನು ಅರಣ್ಯದ ಕಡೆಗೆ ಓಡಿಸಲು ಮುಂದಾದೆವು’ ಎಂದು ಇಟ್ಟಮಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಮೇಶ್‌ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.’ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಬಂದಿದ್ದರೆ ವ್ಯಕ್ತಿ ಮತ್ತು ಹಸುವಿನ ಪ್ರಾಣ ಉಳಿಯುತ್ತಿತ್ತು. ಎರಡು ಜೀವಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಅವರು ಕಿಡಿಕಾರಿದರು.’ಇಲ್ಲೇ ಓಡಾಡುತ್ತಿದೆ’: ’ಈ ಒಂಟಿ ಸಲಗ 15 ದಿನದಿಂದ ಈ ಭಾಗದ ಸುತ್ತಮುತ್ತ ಗ್ರಾಮಗಳಲ್ಲಿ ಓಡಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿಯನ್ನೂ ನೀಡಲಾಗಿದೆ. ಇದೀಗ ಎರಡು ಜೀವಗಳನ್ನು ಬಲಿ ತೆಗೆದುಕೊಂಡು ಗ್ರಾಮಸ್ಥರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ’ ಎಂದು ಗೋಪಳ್ಳಿಯ ಮೂರ್ತಿ ಮಾಹಿತಿ ನೀಡಿದರು.’ಮತ್ತೆ ಬರಬಹುದು’: ’ಗೋಪಳ್ಳಿ ಸುತ್ತಮುತ್ತ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗಳು ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಕಲ್ಲು ಹೊಡೆಯುವ ಶಬ್ದ ಬರುತ್ತಿರುತ್ತದೆ. ಅದಕ್ಕೆ ಹೆದರಿ ಒಂಟಿ ಸಲಗ ಪುನಃ ನಮ್ಮ ಗ್ರಾಮಗಳಿಗೆ ನುಗ್ಗಿ, ಜನ– ಜಾನುವಾರುಗಳ ಪ್ರಾಣಹಾನಿ ಮಾಡಬಹುದು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಬೇರೆ ಕಡೆ ಕಳುಹಿಸುವ ವ್ಯವಸ್ಥೆ ಮಾಡಬೇಕು’ ಎಂದು ಗೋಪಳ್ಳಿಯ ಬಿ. ರವಿ ಮನವಿ ಮಾಡಿದರು.’ಮೃತರ ಅಂತ್ಯಕ್ರಿಯೆ ನೆರವೇರಿಸಲು ಐದು ಸಾವಿರ ರೂಪಾಯಿಯನ್ನು ಕುಟುಂಬದವರಿಗೆ ನೀಡಲಾಗಿದೆ’ ಎಂದ ಅವರು, ’ಒಂಟಿ ಸಲಗವನ್ನು ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ 50 ಅರಣ್ಯ ಇಲಾಖೆ ಸಿಬ್ಬಂದಿ ಹಂದಿಗುಂದಿ ಅರಣ್ಯದಲ್ಲಿ ಆನೆ ಪತ್ತೆ ಕಾರ್ಯ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)