ಶುಕ್ರವಾರ, ಜೂನ್ 18, 2021
27 °C

ಸಲಹಾ ಬೆಲೆ ನೀಡದಿದ್ದಲ್ಲಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಬ್ಬು ಬೆಲೆ ನಿಗದಿಪಡಿಸುವ ಉದ್ದೇಶದಿಂದ ಸರ್ಕಾರ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಕಾಯ್ದೆ ಜಾರಿಗೊಳಿಸಲು ಮುಂದಾಗದಿದ್ದಲ್ಲಿ ಬಜೆಟ್ ಮಂಡನೆ ದಿನದಂದು ವಿಧಾನಸೌಧದ ಎದುರು ಸಾವಿರಾರು ರೈತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲು ರಾಜ್ಯ ಕಬ್ಬು ಬೆಳೆಗಾರರ ಸಂಘವು ತೀರ್ಮಾನಿಸಿದೆ.ನಗರದ ಕೃಷಿಕ ಸಮಾಜದಲ್ಲಿ ಸೋಮವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, `ರಾಜ್ಯ ಸಲಹಾ ಬೆಲೆ ಕಾಯ್ದೆ ಜಾರಿಗೊಳಿಸುವುದರಿಂದ ರಾಜ್ಯದ ಲಕ್ಷಾಂತರ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ. ಸಕ್ಕರೆ ಕಾರ್ಖಾನೆಗಳಿಂದ ಬೆಳೆಗಾರರಿಗೆ ಆಗಲಿರುವ ಶೋಷಣೆಯೂ ತಪ್ಪಲಿದೆ. ಆದರೆ, ಕಾಯ್ದೆ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ~ ಎಂದು ಆರೋಪಿಸಿದರು.`ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕದಲ್ಲಾಗುವ ಮೋಸ ತಡೆಗಟ್ಟಲು ಸರ್ಕಾರವೇ ಎಪಿಎಂಸಿಗಳ ಮೂಲಕ ಕಾರ್ಖಾನೆಗಳ ಬಳಿ ತೂಕದ ಯಂತ್ರ ಅಳವಡಿಸಬೇಕು. ಆಕಸ್ಮಿಕ ಬೆಂಕಿ, ವನ್ಯ ಜೀವಿಗಳ ಹಾವಳಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾದಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ವಿವಿಧ ವಲಯಗಳಿಂದ ಶೇ 1ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಿಸಿ ರೈತರ ಸಂಕಷ್ಟ ನಿಧಿ ಸ್ಥಾಪಿಸುವ ಮೂಲಕ ನೆರವಿಗೆ ಮುಂದಾಗಬೇಕು. ಕೃಷಿ ಕ್ಷೇತ್ರವನ್ನು ರಕ್ಷಿಸಲು ಚೀನಾ ಮಾದರಿಯಲ್ಲಿ ಬಡ್ಡಿರಹಿತ ಸಾಲ ನೀಡುವ ಯೋಜನೆ ಜಾರಿಗೊಳಿಸುವಂತೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು~ ಎಂದು ಅವರು ವಿವರಿಸಿದರು.`ರಾಜ್ಯ ಸರ್ಕಾರ ಕಳೆದ ವರ್ಷ ಸುಮಾರು 17 ಸಾವಿರ ಕೋಟಿ ರೂಪಾಯಿಗಳ ಕೃಷಿ ಬಜೆಟ್ ಮಂಡಿಸಿದರೂ ಇದುವರೆಗೆ ಕ್ಷೇತ್ರಕ್ಕೆ ಕೇವಲ 450 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಮೀಸಲಿಡಬೇಕು. ಸರ್ಕಾರ ರೈತರನ್ನು ಮರೆತಲ್ಲಿ ಮುಂದಿನ ದಿನಗಳಲ್ಲಿ ಆಹಾರಕ್ಕಾಗಿ ಬಹುರಾಷ್ಟ್ರೀಯ ಕಂಪೆನಿಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿಯಬೇಕಾಗುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು~ ಎಂದು ಕಿವಿಮಾತು ಹೇಳಿದರು.`ಅರಿಶಿನ, ಶುಂಠಿ, ಈರುಳ್ಳಿ, ಆಲೂಗೆಡ್ಡೆ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದು, ಉತ್ಪಾದನಾ ವೆಚ್ಚ ಪರಿಗಣಿಸಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸಲು ಮುಂದಾಗಬೇಕು. ಒಣ ಭೂಮಿ ಪ್ರದೇಶದ ರೈತರ ರಕ್ಷಣೆಗಾಗಿ ಸಹಕಾರಿ ಸಾಮೂಹಿಕ ಬೇಸಾಯ ಸಂಘಗಳ ಮೂಲಕ ಸಣ್ಣ ಏತ ನೀರಾವರಿ ಯೋಜನೆ ಕೈಗೊಳ್ಳಲು ವಿಶೇಷ ಪ್ರೋತ್ಸಾಹ ನೀಡಬೇಕು~ ಎಂದು ಆಗ್ರಹಿಸಿದರು.ಪತ್ರಕರ್ತರ ಮೇಲೆ ಹಲ್ಲೆಗೆ ಖಂಡನೆ:

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿದ ಸಮಿತಿಯು, ತಪ್ಪಿತಸ್ಥ ವಕೀಲರ ನೋಂದಣಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ನಿರ್ಧರಿಸಿತು ಎಂದು ಶಾಂತಕುಮಾರ್ ತಿಳಿಸಿದರು.ರೈತ ಮುಖಂಡರಾದ ಬಾಬು ಬರ್ಮಪ್ಪ, ಎಂ.ಬಿ. ಉಪಾಸಿ, ಎಂ.ಬಿ. ಚೇತನ್, ಸೈಯದ್ ಕರೀಂ, ವಿ.ಆರ್. ಪಾಟೀಲ್, ಸೋಮಶೇಖರ್, ಅತ್ತಹಳ್ಳಿ ದೇವರಾಜ್, ದೇವಕುಮಾರ್, ತಮ್ಮಯ್ಯ, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.