ಸಲಹೆಗಾರರನ್ನು ಬದಲಿಸಿ

7

ಸಲಹೆಗಾರರನ್ನು ಬದಲಿಸಿ

Published:
Updated:

ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಕಟು ಟೀಕೆಗೆ ಮತ್ತೊಮ್ಮೆ ಪ್ರಧಾನಿ ಕಾರ್ಯಾಲಯ ಗುರಿಯಾಗಿದೆ. ದೂರಸಂಪರ್ಕ ಖಾತೆ ಸಚಿವ ಎ. ರಾಜಾ ಅವರ ವಿಚಾರಣೆಗೆ ಅನುಮತಿ ನೀಡುವುದಕ್ಕೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಂಡ ವಿಳಂಬ ಧೋರಣೆ ನ್ಯಾಯಮೂರ್ತಿಗಳು ಅಸಮಾಧಾನಕ್ಕೆ ಕಾರಣವಾಗಿದೆ.ಈ ವಿಳಂಬಕ್ಕೆ ಕಾರಣ ಪ್ರಧಾನಿ ಅವರಲ್ಲ; ಅವರಿಗೆ ಪ್ರಕರಣದ ಮಾಹಿತಿಯನ್ನು ಸರಿಯಾಗಿ ನೀಡಿದ್ದರೆ ತಡಮಾಡದೆ ಅನುಮತಿ ನೀಡುತ್ತಿದ್ದರು ಎಂದು ಹೇಳುವ ಮೂಲಕ ನ್ಯಾಯಮೂರ್ತಿಗಳು ಪ್ರಧಾನಿ ಅವರ ಆಡಳಿತಾತ್ಮಕ ನಿರ್ಣಯವನ್ನು ಪರೋಕ್ಷವಾಗಿ ಶ್ಲಾಘಿಸಿದ್ದಾರೆ.

 

ಆದರೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದ ಕಾರಣ ಅದರ ಹೊಣೆಯನ್ನು ಪ್ರಧಾನಿ ಅವರು ಹೊರುವಂತಾಗಿದೆ. ಪ್ರಧಾನಿ ಅವರ ನಿರ್ಧಾರಗಳು, ಹೀಗೆ ಸುಪ್ರೀಂಕೋರ್ಟ್ ನ್ಯಾಯಪೀಠದ ಟೀಕೆಗೆ ಗುರಿಯಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣ ಮತ್ತು ಕೇಂದ್ರ ಜಾಗೃತ ಆಯೋಗದ ಮುಖ್ಯ ಆಯುಕ್ತರನ್ನಾಗಿ ಪಿ.ಜೆ.ಥಾಮಸ್ ಅವರ ನೇಮಕದ ಸಂದರ್ಭದಲ್ಲಿಯೂ ಪ್ರಧಾನಿ ನಿರ್ಧಾರ ಮುಖಭಂಗಕ್ಕೆ ಒಳಗಾಗಿದೆ.

 

ಪದೇ ಪದೇ ತಮ್ಮನ್ನು ಹಾದಿ ತಪ್ಪಿಸಿ ನ್ಯಾಯಾಲಯ ಟೀಕೆಗೆ ಗುರಿಯಾಗುವಂತೆ ಮಾಡುತ್ತಿರುವ ಅಧಿಕಾರಿಗಳ ಎದುರು ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅಸಹಾಯಕರಾಗಿದ್ದಾರೆಯೇ? ದೇಶದ ಅತ್ಯುನ್ನತ ಆಡಳಿತ ಕೇಂದ್ರವಾದ ಪ್ರಧಾನಿ ಕಾರ್ಯಾಲಯಕ್ಕೆ ದಕ್ಷ ಅಧಿಕಾರಿಗಳ ಕೊರತೆ ಬರುವಷ್ಟು ಕಾರ್ಯಾಂಗ ದಿವಾಳಿ ಎದ್ದಿದೆಯೇ? ಅಥವಾ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗದಷ್ಟು ಪ್ರಧಾನಿ ದುರ್ಬಲರಾಗಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಈ ಘಟನೆಗಳು ಹುಟ್ಟುಹಾಕಿವೆ.ಪ್ರಧಾನಿ ಅವರು ಆಡಳಿತಕ್ಕೆ ಹೊಸಬರೇನೂ ಅಲ್ಲ. ಹಣಕಾಸು ತಜ್ಞರಾಗಿ ಯೋಜನಾ ಆಯೋಗ, ರಿಜರ್ವ್ ಬ್ಯಾಂಕ್‌ಗಳಲ್ಲಿ ವರಿಷ್ಠ ಹುದ್ದೆಗಳನ್ನು ನಿರ್ವಹಿಸಿದ್ದಲ್ಲದೆ ಹಣಕಾಸು ಸಚಿವರಾಗಿ ದೇಶದಲ್ಲಿ ಉದಾರೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ್ದವರು.ಹೀಗೆ ಸುಪ್ರೀಂ ಕೋರ್ಟ್‌ನ ಆಕ್ಷೇಪಕ್ಕೆ ಪದೇ ಪದೇ ಗುರಿಯಾಗುವಂಥ ಸ್ಥಿತಿಯನ್ನು ತಂದುಕೊಂಡಿರುವುದು ವಿಷಾದಕರ. ಈ ಪರಿಸ್ಥಿತಿ ಬದಲಾವಣೆಗೆ ಪ್ರಧಾನಿ ಅವರೇ ಕಾರ್ಯೋನ್ಮುಖರಾಗಬೇಕು. ತಮ್ಮನ್ನು ಹಾದಿ ತಪ್ಪಿಸುವಂಥ ಅಧಿಕಾರಿಗಳನ್ನು ಬದಲಿಸಿ ವಿಶ್ವಾಸಕ್ಕೆ ಪಾತ್ರರಾದ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಬೇಕು.ಆಡಳಿತಕ್ಕೆ ನೆರವಾಗುವ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ದೇಶದಲ್ಲಿ ಕೊರತೆ ಇಲ್ಲ. ಸ್ವಭಾವದಿಂದ ರಾಜಕಾರಣಿಯೇ ಅಲ್ಲದ ಮನಮೋಹನ್ ಸಿಂಗ್ ತಾವು ಕೈಗೊಳ್ಳುವ ಆಡಳಿತಾತ್ಮಕ ನಿರ್ಧಾರಗಳು ಪಕ್ಷ ರಾಜಕಾರಣದ ಅಗತ್ಯಗಳನ್ನು ಪೂರೈಸುವುದಕ್ಕಿಂತ ಕಾನೂನಿಗೆ ಅನುಗುಣವಾಗಿರುವಂತೆ ಎಚ್ಚರವಹಿಸಬೇಕು.

 

ರಾಜಕೀಯವಾಗಿ ಅವರ ಸ್ಥಾನಮಾನ ಏನೇ ಇರಬಹುದು, ಆದರೆ ಅವರು ಕೂತಿರುವ ಪ್ರಧಾನಿ ಕುರ್ಚಿ ಸಂವಿಧಾನದತ್ತ ಅಧಿಕಾರವನ್ನು ಹೊಂದಿದೆ.ಇದನ್ನು ಪ್ರಧಾನಿಯವರು ಮರೆಯಬಾರದು. ಪಕ್ಷದ ವರಿಷ್ಠರ ಔದಾರ್ಯಕ್ಕೆ ಕಟ್ಟುಬಿದ್ದು ಜವಾಬ್ದಾರಿ ನಿರ್ವಹಣೆಯಲ್ಲಿ ರಾಜಿಮಾಡಿಕೊಳ್ಳದೆ ದಕ್ಷ ಆಡಳಿತ ನೀಡಲು ಆ ಅಧಿಕಾರವನ್ನು ಅವರು ಬಳಸಿಕೊಳ್ಳಬೇಕು. ಇಲ್ಲದೆ ಹೋದರೆ ವಿರೋಧಪಕ್ಷಗಳು ದೂರುತ್ತಿರುವಂತೆ ಅವರೊಬ್ಬ ದುರ್ಬಲ ಪ್ರಧಾನಿಯಾಗಿಯೇ ಉಳಿಯುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry