ಸಲಿಂಗ ಕಾಮದ ವ್ಯಾಖ್ಯಾನ ಬದಲಾಗಲಿ

7

ಸಲಿಂಗ ಕಾಮದ ವ್ಯಾಖ್ಯಾನ ಬದಲಾಗಲಿ

Published:
Updated:

ನವದೆಹಲಿ (ಪಿಟಿಐ): ಸಲಿಂಗ ಕಾಮವನ್ನು ಸಾಮಾಜಿಕ ಬದಲಾವಣೆಯ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ ಎಂದು ಗುರುವಾರ ಸುಪ್ರೀಂಕೋರ್ಟ್ ಹೇಳಿದೆ.ಹಿಂದೆ ತಿರಸ್ಕೃತಗೊಂಡಿದ್ದ ಅದೆಷ್ಟೋ ಸಂಗತಿಗಳು ಕಾಲಕ್ರಮೇಣ ಒಪ್ಪಿತ ಮೌಲ್ಯಗಳಾಗಿ ಬದಲಾಗಿವೆ. ಆದ ಕಾರಣ ಸಲಿಂಗ ಕಾಮವನ್ನೂ ಈ ದೃಷ್ಟಿಯಿಂದಲೇ ವ್ಯಾಖ್ಯಾನಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಹಾಗೂ ಎಸ್. ಜಿ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠ ಹೇಳಿದೆ.ಸಲಿಂಗ ಕಾಮವನ್ನು ತುಚ್ಛವಾಗಿ ಪರಿಗಣಿಸುವುದರ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು, ಗಂಡು-ಹೆಣ್ಣು ಮದುವೆಯ ಚೌಕಟ್ಟಿಲ್ಲದೆಯೇ ಒಟ್ಟಿಗೇ ಬದುಕುವುದು, ಕೃತಕ ಗರ್ಭಧಾರಣೆ, ಸಿಂಗಲ್ ಪೇರೆಂಟ್, ಬಾಡಿಗೆ ತಾಯ್ತನ... ಇತ್ಯಾದಿ  ಪರಿಕಲ್ಪನೆಗಳನ್ನು ನಾವು ಈಗ ಒಪ್ಪಿಕೊಂಡಿದ್ದೇವೆ. ಹಾಗಾಗಿ ಸಲಿಂಗ ಕಾಮವನ್ನೂ ಇದೇ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ ಎಂದು ಹೇಳಿದೆ.30-40 ವರ್ಷಗಳ ಹಿಂದೆ ಪ್ರಕೃತಿಗೆ ವಿರುದ್ಧವಾದುದು ಎಂದು ಭಾವಿಸಲಾದ ಸಂಗತಿಗಳು ಇಂದು ಸಹಜ ಪ್ರಕ್ರಿಯೆ ಎನಿಸಿಕೊಂಡಿವೆ. 20 ವರ್ಷಗಳ ಹಿಂದೆ ಅನೈತಿಕ ಎಂದು ಪರಿಗಣಿಸಲಾಗಿದ್ದ ಅದೆಷ್ಟೋ ವಿಷಯಗಳನ್ನು ಇಂದು ಸಮಾಜ ಒಪ್ಪಿಕೊಂಡಿದೆ. 1860ಕ್ಕೆ ಮುನ್ನ ಸಲಿಂಗ ಕಾಮ ನಿಷಿದ್ಧವಾಗಿರಲಿಲ್ಲ ಎನ್ನುವುದಕ್ಕೆ ಖಜುರಾಹೊ ಶಿಲ್ಪಗಳು ಹಾಗೂ ವರ್ಣಚಿತ್ರಗಳೇ ಸಾಕ್ಷಿ. ಸಮಾಜ ಬದಲಾಗುತ್ತಿದೆ. ಬದಲಾವಣೆಯ ಹಿನ್ನೆಲೆಯಲ್ಲಿ ಸರಿ ತಪ್ಪುಗಳನ್ನು ವಿಮರ್ಶಿಸಬೇಕಾಗುತ್ತದೆ ಎಂದು ಪೀಠವು ಹೇಳಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry