ಸಲಿಂಗ ಕಾಮ ಗೊಂದಲ

7

ಸಲಿಂಗ ಕಾಮ ಗೊಂದಲ

Published:
Updated:

ನವದೆಹಲಿ (ಪಿಟಿಐ): ಸಲಿಂಗ ಕಾಮ ಅನೈತಿಕ ಮತ್ತು ಸಮಾಜದ ನೀತಿ ನಿಯಮಗಳಿಗೆ ವಿರುದ್ಧವಾದುದು. ಆದ್ದರಿಂದ ಈ ಕ್ರಿಯೆಯನ್ನು ನಿರಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತು. ಆದರೆ ನಂತರ ಈ ವಿಚಾರದಲ್ಲಿ ಸಚಿವಾಲಯ ಯಾವುದೇ ನಿಲುವು ತಳೆದಿಲ್ಲ ಎಂದೂ ಕೋರ್ಟ್‌ಗೆ ಹೇಳಿಕೆ ನೀಡಲಾಯಿತು.

ಭಾರತದ ಸಮಾಜವು ಇತರ ರಾಷ್ಟ್ರಗಳ ಸಮಾಜಕ್ಕಿಂತ ಭಿನ್ನವಾದುದು ಮತ್ತು ಇಂತಹ ವಿಚಾರಗಳಲ್ಲಿ ವಿದೇಶಿ ಸಂಸ್ಕೃತಿಯನ್ನು ಅನುಕರಿಸಲಾಗದು ಎಂದು ಗೃಹ ಸಚಿವಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ. ಪಿ. ಮಲ್ಹೋತ್ರಾ ವಾದಿಸಿದರು.

ಸಲಿಂಗ ಕಾಮ ಅನೈತಿಕವೊಂದೇ ಅಲ್ಲ, ಈ ಕ್ರಿಯೆಯಿಂದ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅವರು ನ್ಯಾಯಮೂರ್ತಿ ಜಿ. ಎಸ್. ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.

`ನಮ್ಮ ಸಂವಿಧಾನ, ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳು ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿರುವುದರಿಂದ ಹಾಗೂ ಸಾಮಾಜಿಕವಾಗಿ ಸಲಿಂಗ ಕಾಮಕ್ಕೆ ಒಪ್ಪಿಗೆ ಇಲ್ಲವಾಗಿರುವುದರಿಂದ ನಾವು ಅಪರಾಧವೆಂದೇ ಪರಿಗಣಿಸಬೇಕಾಗುತ್ತದೆ~ ಎಂದು ಮಲ್ಹೋತ್ರಾ ತಿಳಿಸಿದರು. ಮಲ್ಹೋತ್ರಾ ಅವರು ವಾದ ಮಂಡಿಸುವುದನ್ನು ಮುಗಿಸಿದ ಬೆನ್ನಲ್ಲೇ ತರಾತುರಿಯಿಂದ ನ್ಯಾಯಪೀಠದ ಎದುರು ಹಾಜರಾದ ಇನ್ನೊಬ್ಬ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಜೈನ್ ಅವರು `ಸಲಿಂಗ ಕಾಮದ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ನಿಲುವು ತಳೆದಿಲ್ಲ ಎಂದು ತಿಳಿಸುವಂತೆ ತಮಗೆ ಸೂಚಿಸಲಾಗಿದೆ~ ಎಂದು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದರು.

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು `ಸರ್ಕಾರದ ಪರವಾಗಿ ಈಗಾಗಲೇ ವಾದ ಮಂಡಿಸಲಾಗಿರುವುದರಿಂದ ನಿಮ್ಮ ಹೇಳಿಕೆ  ಈಗ ಪರಿಗಣಿಸಲು ಸಾಧ್ಯವಿಲ್ಲ~ ಎಂದರು.

ಸರ್ಕಾರ ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲಿದೆ ಎಂದು ಜೈನ್ ತಿಳಿಸಿದಾಗ, ಸಿಟ್ಟಿಗೆದ್ದ ನ್ಯಾಯಮೂರ್ತಿಗಳು ಅರ್ಜಿಯ ಬಗ್ಗೆ ಅಂತಿಮ ವಾದ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ನಲ್ಲಿ  ಮಲ್ಹೋತ್ರಾ ಸಲಿಂಗ ಕಾಮಕ್ಕೆ ಸರ್ಕಾರದ ವಿರೋಧವಿದೆ ಎಂದು ವಾದಿಸುತ್ತಿದ್ದರೆ,  ಗೃಹ ಸಚಿವಾಲಯದ ಅಧಿಕಾರಿಗಳು ತರಾತುರಿಯಲ್ಲಿ ಹೇಳಿಕೆ ಹೊರಡಿಸಿ, `ಸಲಿಂಗ ಕಾಮದ ಬಗ್ಗೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಮ್ಮ ಇಲಾಖೆ ಅಥವಾ ಕೇಂದ್ರ ಸರ್ಕಾರ ಯಾವುದೇ ನಿಲುವು ತಾಳಿಲ್ಲ~ ಎಂದು ತಿಳಿಸಿ ಗೊಂದಲ ಮೂಡಿಸಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ. ಪಿ. ಮಲ್ಹೋತ್ರಾ ಅವರಿಗೆ ಗೃಹ ಸಚಿವಾಲಯ ಯಾವುದೇ ನಿಲುವನ್ನು ತಿಳಿಸಿಲ್ಲ. ಬದಲಿಗೆ ಸಚಿವ ಸಂಪುಟದ ತೀರ್ಮಾನವನ್ನು ತಿಳಿಸಿ ಪ್ರಕರಣದ ಇತ್ಯರ್ಥಕ್ಕೆ ಕೋರ್ಟ್‌ಗೆ ನೆರವಾಗುವಂತೆ ಸೂಚಿಸಲಾಗಿತ್ತು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧಮೇಲ್ಮನವಿ ಸಲ್ಲಿಸದಿರಲು ಸಂಪುಟ ತೀರ್ಮಾನ ತೆಗೆದುಕೊಂಡಿತ್ತು.

ಹಿನ್ನೆಲೆ: ಭಾರತೀಯ ದಂಡ ಸಂಹಿತೆ ಕಲಂ 377ರ ಪ್ರಕಾರ ಸಲಿಂಗ ಕಾಮ ಅಪರಾಧ. ಆದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಮಲ್ಹೋತ್ರಾ ಅವರು ದೆಹಲಿ ಹೈಕೋರ್ಟ್‌ನ ಅಭಿಪ್ರಾಯ ತಪ್ಪು ಎಂದು ಅವರು ವಾದಿಸಿದರು.

ಇತರ ರಾಷ್ಟ್ರಗಳಲ್ಲಿ ಸಲಿಂಗ ಕಾಮದ ಬಗ್ಗೆ ಇರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಸಲಿಂಗ ಕಾಮವನ್ನು ಕೇವಲ ದೈಹಿಕ ತೃಪ್ತಿಗಷ್ಟೇ ಸೀಮಿತಗೊಳಿಸದೆ ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕು ಎಂದು ನ್ಯಾಯಪೀಠ ಸಲಿಂಗಕಾಮ ವಿರೋಧಿ ಸಂಘಟನೆಗೆ ತಿಳಿಸಿತ್ತು.

ಸಲಿಂಗ ಕಾಮ ಅಪರಾಧವಲ್ಲ ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಧಾರ್ಮಿಕ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಯ  ಹಿರಿಯ ಮುಖಂಡ ಬಿ. ಪಿ. ಸಿಂಘಾಲ್ ಮತ್ತು ಕೆಲವು ಸಂಘಟನೆಗಳು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಪ್ರಕರಣದ ಮುಂದಿನ ವಿಚಾರಣೆ ಫೆ. 28ಕ್ಕೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry