ಮಂಗಳವಾರ, ಮೇ 11, 2021
26 °C

ಸಲ್ಮಾನ್ ಮೇಲ್ಮನವಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ಕೊಲೆ ಮಾಡುವ ಉದ್ದೇಶವಿರದ ಹತ್ಯೆ'ಯ ಆಪಾದನೆಯನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿರುವ ಮೆಟ್ರೋಪಾಲಿಟಿನ್ ನ್ಯಾಯಾಲಯದ ಕ್ರಮವನ್ನು  ಪ್ರಶ್ನಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ವಜಾ ಮಾಡಿರುವುದರಿಂದ ಅಪಘಾತವೆಸಗಿ ಪರಾರಿಯಾದ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಲಿದೆ. ಸಲ್ಮಾನ್ ವಿರುದ್ಧ ಅಪಘಾತವೆಸಗಿ ಪರಾರಿಯಾದ ಪ್ರಕರಣವನ್ನು 2002ರಲ್ಲಿ ದಾಖಲಿಸಲಾಗಿದೆ. ಅವರ ವಿರುದ್ಧ ಐಪಿಸಿ ಕಲಂ 304 ಎ ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಕಲಂನಡಿ ಆಪಾದನೆ ಸಾಬೀತಾದರೆ ಗರಿಷ್ಠ ಎರಡು ವರ್ಷಗಳಷ್ಟು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ.ಆದರೆ ಮೆಟ್ರೋಪಾಲಿಟಿನ್ ನ್ಯಾಯಾಲಯವು ಸಲ್ಮಾನ್ ವಿರುದ್ಧ ಕೊಲೆ ಮಾಡುವ ಉದ್ದೇಶವಿರದ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು. ಈ ಸೆಕ್ಷನ್‌ನಡಿ ಆಪಾದನೆ ಸಾಬೀತಾದರೆ ಗರಿಷ್ಠ 10 ವರ್ಷಗಳ ಶಿಕ್ಷೆ ನೀಡಲು ಅವಕಾಶವಿರುತ್ತದೆ. ಇದನ್ನು ಪ್ರಶ್ನಿಸಿ ಸಲ್ಮಾನ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈಗ ಅವರ ಅರ್ಜಿ ತಿರಸ್ಕೃತಗೊಂಡಿರುವುದರಿಂದ ವಿಚಾರಣೆ ಮತ್ತೆ ಆರಂಭವಾಗಲಿದೆ.ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಧೀಶ ಯು. ಬಿ. ಹೆಜಿಬ್ ಜುಲೈ 19ರಿಂದ ಸಲ್ಮಾನ್ ಅವರ ವಿಚಾರಣೆ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಸೆಷನ್ಸ್ ನ್ಯಾಯಾಲಯದ ಆದೇಶಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಸಲ್ಮಾನ್ ಪರ ವಕೀಲ ಅಶೋಕ್ ಮುಂಡರಗಿ ತಿಳಿಸಿದ್ದಾರೆ.17 ಸಾಕ್ಷಿಗಳ ಹೇಳಿಕೆ ಪಡೆದ ನಂತರ ಬಾಂದ್ರಾ ಮೆಟ್ರೋಪಾಲಿಟಿನ್ ನ್ಯಾಯಾಲಯವು ಸಲ್ಮಾನ್ ವಿರುದ್ಧ `ಕೊಲೆ ಮಾಡುವ ಉದ್ದೇಶವಿರದ ಹತ್ಯೆ ಪ್ರಕರಣ' ದಾಖಲಿಸಿಕೊಂಡಿತ್ತು.ಇಂತಹ ಪ್ರಕರಣಗಳ ವಿಚಾರಣೆ ಸೆಷನ್ಸ್ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.