ಭಾನುವಾರ, ಜನವರಿ 26, 2020
28 °C

ಸಲ್ಮಾನ್ ರಶ್ದಿ ವಿವಾದ: ಲೇಖಕರು, ಸಂಘಟಕರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ):  ಸಲ್ಮಾನ್ ರಶ್ದಿ ಅವರ ನಿಷೇಧಿತ `ಸೆಟಾನಿಕ್ ವರ್ಸಸ್~ ಕೃತಿಯ ಕೆಲವು ಭಾಗಗಳನ್ನು ಇಲ್ಲಿನ ಸಾಹಿತ್ಯ ಉತ್ಸವದಲ್ಲಿ ಓದಿದ ನಾಲ್ವರು ಲೇಖಕರ ವಿರುದ್ಧ ಜೈಪುರ ಮತ್ತು ಅಜ್ಮೀರ್ ನ್ಯಾಯಾಲಯಗಳಲ್ಲಿ ಸೋಮವಾರ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.ಅಖಿಲ ಭಾರತ ಮಿಲ್ಲಿ ಮಂಡಳಿಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಎಂಬುವವರು ಹರಿ ಕುಂಜ್ರು, ಅಮಿತಾವ್ ಕುಮಾರ್, ಜೀತ್ ಥಾಯಿಲ್ ಮತ್ತು ರುಚಿರ್ ಜೋಶಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಜತೆಗೆ ಉತ್ಸವದ ಸಂಘಟಕರಾದ ನಮಿತಾ ಗೋಖಲೆ, ವಿಲ್ಲಯಂ ಡಾಲ್‌ರಿಂಪಲ್ ಮತ್ತು ಸಂಜಯ್ ರಾಯ್ ಅವರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಸ್ಥಳೀಯ ಮುಸ್ಲಿಂ ಸಂಘಟನೆಯೊಂದರ ಪದಾಧಿಕಾರಿ ಮುಜಾಫರ್ ಭಾರ್ತಿ ಎಂಬುವವರು ಅಜ್ಮೀರ್ ನ್ಯಾಯಾಲಯದಲ್ಲಿ ನಾಲ್ವರು ಲೇಖಕರ ವಿರುದ್ಧ ದೂರು ನೀಡಿದ್ದಾರೆ.ಈ ನಡುವೆ ನಾಲ್ವರೂ ಲೇಖಕರು ಸೋಮವಾರದ ಉತ್ಸವದಲ್ಲಿ ಕಾಣಿಸಿಕೊಳ್ಳಲಿಲ್ಲ. ಸಂಘಟಕರು ಅವರನ್ನು ದೂರ ಇಟ್ಟಿದ್ದಾರೆ ಎನ್ನಲಾಗಿದೆ. ಹರಿ ಕುಂಜ್ರು ಭಾರತದಿಂದ ತೆರಳಿದ್ದು, ರಶ್ದಿ ವಿಡಿಯೊ ದೃಶ್ಯಾವಳಿ ಕುರಿತು ಬ್ಲಾಗ್‌ನಲ್ಲಿ ಬರೆದಿದ್ದಾರೆ. ಸ್ವಾಮಿ ಅಗ್ನಿವೇಶ್ ಉತ್ಸವದ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವಿವಾದದ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದರು. ಮ್ಯಾಚ್ ಫಿಕ್ಸಿಂಗ್: ಬಿಜೆಪಿ ಟೀಕೆ

ನವದೆಹಲಿ (ಪಿಟಿಐ):
ಇದೇ ಮೊದಲ ಬಾರಿಗೆ ಸಲ್ಮಾನ್ ರಶ್ದಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ವಿವಾದವನ್ನು ಗುಪ್ತಚರ ಇಲಾಖೆ ಮತ್ತು ಜಿಹಾದಿಗಳ ನಡುವಿನ `ಮ್ಯಾಚ್ ಫಿಕ್ಸಿಂಗ್~ ಎಂದು ಲೇವಡಿ ಮಾಡಿದೆ.`ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಈ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಮ್ಯಾಚ್ ಫಿಕ್ಸಿಂಗ್‌ನಲ್ಲಿ ರಾಜಸ್ತಾನ ಕಾಂಗ್ರೆಸ್ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ~ ಎಂದು ಪಕ್ಷದ ಮುಖ್ಯ ವಕ್ತಾರ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.`ಮಹಾರಾಷ್ಟ್ರ ಪೊಲೀಸ್ ಇಲಾಖೆ, ರಾಜಸ್ತಾನ ಸರ್ಕಾರ ಹಾಗೂ ಗುಪ್ತಚರ ಇಲಾಖೆಗಳು ಭೂಗತ ಪಾತಕಿಗಳಿಂದ ರಶ್ದಿ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿವೆ. ಯಾರು ನಿಜ ಹೇಳುತ್ತಿದ್ದಾರೆ ಎನ್ನುವ ಗೊಂದಲ ಉಂಟಾಗಿದೆ. ಈ ಬಗ್ಗೆ ನಿಜ ಸಂಗತಿ ಹೊರಬರಬೇಕು~ ಎಂದು ಅವರು ಒತ್ತಾಯಿಸಿದ್ದಾರೆ.`ಒಟ್ಟಾರೆ ಈ ವಿವಾದ ಗುಪ್ತಚರ ಕಾರ್ಯವೈಖರಿ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ಹುಟ್ಟುಹಾಕಿದೆ~ ಎಂದು ಅವರು ಹೇಳಿದ್ದಾರೆ.ಈ ಮೊದಲು ಅನೇಕ ಬಾರಿ ಈ ಲೇಖಕ ಭಾರತಕ್ಕೆ ಭೇಟಿ ನೀಡಿದಾಗ ಉದ್ಭವಿಸದ ವಿವಾದ ಈಗ ಹಠಾತ್ತನೇ ತಲೆ ಎತ್ತಿದೆ. ಇದರ ಹಿಂದೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಕಾಂಗ್ರೆಸ್ ತಂತ್ರ ಅಡಗಿದೆ~ ಎಂದು ಅವರು ಆರೋಪಿಸಿದ್ದಾರೆ.

`ಜೀವ ಬೆದರಿಕೆ ಸಂಚು ರೂಪಿಸುವ ಮೂಲಕ ರಶ್ದಿ ಅವರನ್ನು ಉತ್ಸವದಿಂದ ದೂರ ಇಡುವಲ್ಲಿ ರಾಜಸ್ತಾನ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದ್ದ ಸರ್ಕಾರ ಅವರನ್ನು ಉತ್ಸವದಿಂದ ದೂರ ಇಟ್ಟಿದೆ~ ಎಂದು ಬಿಜೆಪಿ ಧುರೀಣ ಅರುಣ್ ಜೇಟ್ಲಿ ಲೂಧಿಯಾನದಲ್ಲಿ ಆರೋಪಿಸಿದ್ದಾರೆ.

 

ಪ್ರತಿಕ್ರಿಯಿಸಿ (+)