ಗುರುವಾರ , ಅಕ್ಟೋಬರ್ 17, 2019
21 °C

ಸವಣೂರು ತತ್ತರ; ಸಿಗದ ಉತ್ತರ

Published:
Updated:
ಸವಣೂರು ತತ್ತರ; ಸಿಗದ ಉತ್ತರ

ಸವಣೂರ: ಈ ನಗರ ಜಿಲ್ಲೆಯ ಅತಿ ದೊಡ್ಡ ಸ್ಲಂ ಎಂದು ಪರಿಗಣಿಸಲು ಎಲ್ಲ ಅರ್ಹತೆ ಹೊಂದಿದೆ.  ಸವಣೂರ ನಗರಕ್ಕೆ ಸಾಮೂಹಿಕ ಅಸ್ವಸ್ಥತೆ ಸುನಾಮಿ ಅಪ್ಪಳಿಸಿದೆ. ರೋಗ ಭೀತಿಯಿಂದ  ಜನಜೀವನ ತತ್ತರಿಸಿಹೋಗಿದೆ. ನಗರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲ ಖಾಸಗಿ ದವಾಖಾನೆಗಳೂ ರೋಗಿಗಳಿಂದ ತುಂಬಿ ತುಳುಕಾಡುತ್ತಿದೆ.ಇದು ಅನಿರೀಕ್ಷಿತವಾದರೂ ವಾಸ್ತವವಾಗಿ ನಗರದ ಅನೈರ್ಮಲ್ಯತೆ ಕಾಲಕಾಲಕ್ಕೆ ರೋಗಭೀತಿಯ ತನ್ನ ಅಸ್ಥಿತ್ವವನ್ನು ತೋರಿದೆ. ತನ್ನನ್ನು ಕಡೆಗಣಿಸಬಾರದು ಎಂಬ ಎಚ್ಚರಿಕೆಯನ್ನು ಹಲವು ರೂಪದಲ್ಲಿ ತೋರುತ್ತಲೇ ಬಂದಿದೆ. ಆದರೂ ಜಿಡ್ಡುಗಟ್ಟಿದ ಸ್ಥಳೀಯ ಪುರಸಭೆ, ಆಡಳಿತ ಯಂತ್ರ ಪ್ರಕೃತಿಯ ಎಲ್ಲ ಸೂಚನೆಗಳನ್ನೂ ಕಡೆಗಣಿ ಜನರನ್ನು ನರಕಕ್ಕೆ ತಳ್ಳಿವೆ.ನಗರದ ಪ್ರತಿಯೊಂದು ಓಣಿ ಓಣಿಗಳಲ್ಲಿ ಕೊಳಚೆ ತಾಂಡವ ಆಡುತ್ತಿದೆ. ಕಾಲುವೆಗಳು ತುಂಬಿ ತುಳುಕುತ್ತಿದ್ದು, ಅಲ್ಲಿನ ಕಲ್ಮಷ ರಸ್ತೆಗಳ ಮೇಲೆ ಹರಿಯುತ್ತಿದೆ. ಹಂದಿಗಳ ಹಾವಳಿ ವಿಪರೀತವಾಗಿದೆ. ನಗರದ ತುಂಬೆಲ್ಲ ಗುಂಡಿಗಳು, ತಗ್ಗುಗಳನ್ನು ತೆಗೆಯಲಾಗಿದೆ. ಕಸಾಯಿಖಾನೆಗಳಲ್ಲಿ ಸತ್ತ, ರೋಗ ಪೀಡಿತ ಪಶುಗಳನ್ನು ಸುಲಿದು, ಮಾಂಸ ಮಾರಾಟ ಮಾಡಲಾಗುತ್ತಿದೆ. ಮೀನು ಮಾರುಕಟ್ಟೆ ತನ್ನ ಮಳಿಗೆಗಳನ್ನು ತೆರೆದು ರಸ್ತೆಯನ್ನೇ ಆಕ್ರಮಿಸಿಕೊಂಡಿದೆ.ಕನಿಷ್ಠ ಪ್ರಮಾಣದ ಸ್ವಚ್ಛತೆ, ನೀರು ಇಲ್ಲದ ಹತ್ತಾರು ಹಲವಾರು ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವ ಹಿಸುತ್ತಿದೆ. ಅಂಗನಾಡಿಗಳ ಮುಂದೆ,  ಪಶುಗಳ ವಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಸಾಯಿಖಾನೆಯ ಅಕ್ಕಪಕ್ಕದ ಮನೆಗಳಲ್ಲಿ ಹುಳಗಳು ಹರಿದಾಡುತ್ತದೆ. ಬೀಡಾಡಿ ನಾಯಿಗಳ ಕ್ರೌರ್ಯ ಅಪರಿಮಿತವಾಗಿದೆ.ಕುಷ್ಠ ರೋಗದ ಅಸ್ವಿತ್ವದಲ್ಲಿಯೂ ಸವಣೂರ ತಾಲ್ಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಕುಷ್ಟ ರೋಗದ ಪ್ರಮಾಣ ಅಂಕೆಗೆ ಸಿಗದ ರೀತಿಯಲ್ಲಿದೆ.ಆರೋಗ್ಯ ಇಲಾಖೆ ಕೈಗೊಂಡಿದ್ದ ಸರ್ವೆಯೂ ಅಪೂರ್ಣಗೊಂಡಿದೆ. ಪುನಃ  ಸಮಗ್ರ ಮನೆಮನೆಗಳ ಸರ್ವೆ ಮಾಡಿ ರೋಗದ ಪ್ರಮಾಣದ ಬಗ್ಗೆ ನೈಜ ಚಿತ್ರಣ ನೀಡಿ ಎಂಬ ದಶಕಗಳ ಬೇಡಿಕೆಯೂ ಅರಣ್ಯ ರೋಧನವಾಗಿದೆ. ನೀರು ಕೊರತೆ:  ನಳಗಳ ಮೂಲಕ ನೀರು ಪೂರೈಸಿದರೆ ಜನರು ಅದನ್ನೆ ಕುಡಿಯುತ್ತಾರೆ ಎಂಬ ಅವಾಸ್ತವಿಕ ಹೇಳಿಕೆ ಅಧಿಕಾರಿಗಳದ್ದಾಗಿದೆ. ರೋಗದ ಅಸ್ಥಿತ್ವ ಇಲ್ಲದ ಬಡಾವಣೆಗಳಿಗಾದರೂ ನಳದ ನೀರನ್ನು ಪೂರೈಸಬೇಕು.  ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿದ್ದು, ಜಾಗ್ರತೆ ವಹಿಸುತ್ತಾರೆ. ಗಡಸು ನೀರನ್ನು ಕುಡಿಯಬೇಕಾದ ಅನಿವಾರ್ಯತೆ ತಪ್ಪುತ್ತದೆ ಎಂಬ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.ಮುಂಜಾಗ್ರತಾ ಕ್ರಮ: ನಗರದಲ್ಲಿ ವಾಂತಿ ಭೇದಿ ಪ್ರಕರಣ ಕಂಡುಬಂದಿರುವ ಪ್ರಯುಕ್ತ ಆರೋಗ್ಯ ಇಲಾಖೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ವಿವಿಧ ಚಟುವಟಿಕೆಗಳ ಮೂಲಕ ರೋಗದ ಹರಡುವಿಕೆಯನ್ನು ನಿಯಂತ್ರಿಸಲಾಗುತ್ತಿದೆ. ಇದೇ 5 ರಿಂದ ನಗರದಲ್ಲಿ ವಾಂತಿ-ಭೇದಿ ಪ್ರಕರಣ ಆರಂಭಗೊಂಡಿದೆ.  ಸವಣೂರಿನ ಸರಕಾರಿ ಆಸ್ಪತ್ರೆಗೆ ತಾಲ್ಲೂಕಿನ 6 ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಒಟ್ಟೂ 12 ತಂಡಗಳನ್ನು ರಚಿಸಿ, ಎಲ್ಲ ವಾರ್ಡಗಳ ಮನೆ ಮನೆಗೆ ಭೇಟಿ ನೀಡಲಾಗುತ್ತಿದೆ. ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ, ಬಿಸಿ ಆಹಾರ ಸೇವಿಸುವಂತೆ ಸೂಚನೆ ನೀಡ ಲಾಗುತ್ತಿದೆ. ಅಗತ್ಯ ಔಷಧ-ಮಾತ್ರೆ ವಿತರಿಸಲಾಗುತ್ತಿದೆ.ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು, 24/7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶುಶ್ರೂಷಕಿಯರನ್ನೂ ನಿಯೋಜನೆ ಮಾಡಲಾಗಿದೆ. ಎಲ್ಲ ಆರೋಗ್ಯ ಸಂಸ್ಥೆಗಳ ಮೇಲ್ವಿಚಾರಕರ ನೇತೃತ್ವದಲ್ಲಿ 5 ಪ್ರತ್ಯೇಕ ತಂಡ ರಚಿಸ ಲಾಗಿದೆ. ನಗರದ ಅಂಗನವಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತಾಯಂದಿರ ಸಭೆ- ಗುಂಪು ಸಭೆ ಜರುಗಿಸಲಾಗುತ್ತಿದೆ. ಆರೋಗ್ಯ ಶಿಕ್ಷಣವನ್ನು ಪ್ರತಿ ವ್ಯಕ್ತಿಗೂ ನೀಡುವ ಪ್ರಯತ್ನ ಜಾರಿಯಲ್ಲಿದೆ. ಶಾಲೆ- ಹೈಸ್ಕೂಲುಗಳಲ್ಲಿ ಮಕ್ಕಳಿಗೆ ದೃಕ್-ಶ್ರವಣ ಮಾಧ್ಯಮದ ಮೂಲಕ ಆರೋಗ್ಯ ಶಿಕ್ಷಣ ಪಾಠ ನೀಡಲಾಗುತ್ತಿದೆ.ನಗರದ ಎಲ್ಲ ವಾರ್ಡ್‌ಗಳ ಕಾಲುವೆಗಳ ಸ್ವಚ್ಛತೆ, ಪೌಡರ್ ಹಾಕುವುದಕ್ಕೆ ತಿಳಿಸಲಾಗಿದೆ. ಮೈಕ್ ಮೂಲಕ ರೋಗದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ನಗರದ ಎಲ್ಲ ಹೋಟೆಲ್ ಗ್ರಾಹಕರಿಗೆ ಬಿಸಿ ನೀರು ನೀಡಲು ಸೂಚಿಸಲಾಗಿದೆ. ತರಕಾರಿಗಳನ್ನು ಉಪ್ಪಿನ ನೀರಿನಲ್ಲಿ ತೊಳೆಯಲು ಸೂಚಿಸಲಾಗಿದೆ. ತೆರೆದಿಟ್ಟ ಆಹಾರ ಪದಾರ್ಥ, ಕರಿದ ಪದಾರ್ಥಗಳನ್ನು ಮಾರದಂತೆ ಕ್ರಮ ಜರುಗಿಸಲು ಪುರಸಭೆಗೆ ಸೂಚಿಸಲಾಗಿದೆ. ಸಾರ್ವಜನಿಕರು ಅಗತ್ಯ ಸಹಕಾರ ನೀಡುವ ಮೂಲಕ, ರೋಗದ ನಿಯಂತ್ರಣಕ್ಕೆ ನೆರವಾಗಬೇಕು ಎಂದು ಆರೋಗ್ಯಾಧಿಕಾರಿ ಡಾ. ಚಂದ್ರಕಲಾ ಕೋರಿಕೊಂಡಿದ್ದಾರೆ.   ಆಹಾರ ಸುರಕ್ಷಾ: ಸವಣೂರ ನಗರವನ್ನು ಆವರಿಸಿರುವ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕಮಾಲ ಬಂಗಡಿ ಓಣಿಯಲ್ಲಿ ಮೀನಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವಿಶ್ಲೇಷಣೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆಹಾರ ಸುರಕ್ಷಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಮಾಲ ಬಂಗಡಿ ಪ್ರದೇಶದಲ್ಲಿ ಲಭ್ಯವಾದ ಎಲ್ಲ ವಿದಧ ಆಹಾರ ಮಾದರಿ ಹಾಗೂ ಮೀನುಗಳನ್ನು ಸಂಗ್ರಹಿಸಲಾಗಿದೆ. ಇಲಾಖೆಯ ಸಿಬ್ಬಂದಿಗಳಾದ ಎಸ್.ಬಿ ಕೋರಿಶೆಟ್ಟರ ಅವರ ಮುಖಾಂತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆಹಾರ ಸುರಕ್ಷಾ ಅಧಿಕಾರಿ ಡಿ.ಎಸ್. ಅಂಗಡಿ ತಿಳಿಸಿದ್ದಾರೆ.ದನದ ಚರ್ಮ ಮಂಡಿ, ದುರ್ವಾಸನೆ...

ಸವಣೂರಿನ ಜನವಸತಿ ಪ್ರದೇಶದಲ್ಲಿ ದನದ ಚರ್ಮದ ಮಂಡಿಯನ್ನು ನಡೆಸಲಾಗುತ್ತಿದೆ. ಅನೈರ್ಮಲ್ಯತೆಯೊಂದಿಗೆ, ಅಸಹನೀಯವಾದ ದುರ್ವಾಸನೆ ನಗರದ ಬಹುತೇಕ ಸ್ಥಳಗಳನ್ನು ಆವರಿಸಿಕೊಂಡಿದೆ. ಕಸಾಯಿಖಾನೆಯ ಕಲ್ಮಶಯುಕ್ತ ಕೊಳಚೆ, ಸವಣೂರಿನ ಮೋತಿ ತಲಾಬ ಕೆರೆಯನ್ನು ಸೇರ್ಪಡೆಗೊಳ್ಳುತ್ತಿದೆ ಎಂಬ ಹತ್ತಾರು ದೂರು ಅಧಿಕಾರಿಗಳ ಎದುರಿಗಿದೆ. ನೂರಾರು ಮನವಿಗಳ ಸಲ್ಲಿಕೆ, ಪ್ರತಿಭಟನೆಗಳು ಸರ್ವೆಸಾಮಾನ್ಯವಾಗಿವೆ.ಕೆಲ  ವರ್ಷಗಳ ಹಿಂದೆ ಸವಣೂರಿನಲ್ಲಿ ಕಂಡುಬಂದ ಹಂದಿಗಳ ಸಾಮೂಹಿಕ ಸಾವಿನ ಪ್ರಕರಣ, ಚಿಕುನ್ ಗುನ್ಯಾ , ಮಲೇರಿಯಾ, ಡೆಂಘೆ,  ಶಾಲಾ ಮಕ್ಕಳ ಅನಾರೋಗ್ಯ, ನದಿನೀರಲಗಿ ಮೊದಲಾದ ಗ್ರಾಮಗಳಲ್ಲಿ ಕಂಡುಬಂದ ಕಲುಷಿತ ನೀರಿನ ಅವಾಂತರ ಸೇರಿದಂತೆ ಈಗಾಗಲೇಹಲವು ಸಮಸ್ಯೆಗಳನುನ ನಗರವನ್ನು ಅಪ್ಪಳಿಸಿದ್ದವು. ಆದರೆ ಸಮಸ್ಯೆಯ ಮೂಲಕ್ಕೆ ತೆರಳಿ ಅದನ್ನು ನಿರ್ಮೂಲನೆಗೊಳಿಸುವ  ಯಾವ ಪ್ರಯತ್ನವೂ ನಡೆಯಲಿಲ್ಲ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವಾಂತಿ-ಬೇಧಿ ಪ್ರಕರಣ ಪ್ರತಿನಿತ್ಯವೂ ದಾಖಲಾಗುತ್ತದೆ. ಈ ಬಾರಿ ಅದರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ.

ಮತ್ತೆ 30 ಮಂದಿ ಅಸ್ವಸ್ಥ...

ಅಸ್ವಸ್ಥರ ಸಂಖ್ಯೆ ಮುಂದುವರಿಯುತ್ತಲೇ ಇದ್ದು, ಶುಕ್ರವಾರ ಮತ್ತೆ 30 ಮಂದಿ ಅಸ್ವಸ್ಥರಾಗಿರುವ ವರದಿಯಾಗಿದೆ.ನೀರಿನ ಜಪ: ಮೊದಲೇ ನೀರಿನ ಕೊರತೆಗೆ ಹೆಸರುವಾಸಿಯಾದ ಸವಣೂರಿನಲ್ಲಿ ವಾಂತಿ-ಬೇಧಿ ಪ್ರಕರಣ ಇನ್ನಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಏಕಾಏಕಿ ನಗರದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ಪ್ರತಿಯೊಂದು ಕುಟುಂಬಕ್ಕೂ ಇದರ ಬಿಸಿಯನ್ನು ತಟ್ಟುವಂತೆ ಮಾಡಿದೆ. ನಳಗಳ ಮೂಲಕ ಪೂರೈಕೆಗೊಳ್ಳುವ ಪ್ರಮಾಣದಲ್ಲಿ, ಟ್ಯಾಂಕರ್ ಮೂಲಕ ನೀರಿನ ವಿತರಣೆ ಸಾಧ್ಯವೆ  ಎಂಬ ಪ್ರಶ್ನೆ ಎದುರಾಗಿದೆ. ನಗರದ ಎಲ್ಲ ಬಡಾವಣೆಗಳಲ್ಲಿಯೂ ಕೊಡಗಳ ಸಾಲು ಪ್ರತ್ಯಕ್ಷವಾಗಿವೆ. ಮನೆಯಲ್ಲಿನ ಮಕ್ಕಳು-ಮುದುಕರು ಉಳಿದೆಲ್ಲ ಕೆಲಸ ಬಿಟ್ಟು, ನೀರಿನ ಜಪ ಆರಂಭಿಸಿದ್ದಾರೆ.ನೀರಿನ ಕೃತಕ ಅಭಾವ ಸೃಷ್ಟಿಸುವಲ್ಲಿ ನಿಷ್ಣಾತವಾದ ಪುರಸಭೆ,   ಮನೆಯಿಂದ ದೂರದಲ್ಲಿ ನಿಲ್ಲುವ ಟ್ಯಾಂಕರ್‌ಗಳಿಗೆ ಸಾಲುಗಟ್ಟಬೇಕು. ಒಂದು ಕೊಡ ನೀರಿಗಾಗಿಯೂ ಪರದಾಡಬೇಕು. ಅದನ್ನು ಹೊತ್ತುಕೊಂಡು ಮನೆಗೆ ತರಬೇಕು.

Post Comments (+)