ಗುರುವಾರ , ಜೂನ್ 24, 2021
23 °C

ಸವಣೂರ ಪುರಸಭೆ: ಸದಸ್ಯರ ಆರೋಪ-ಪ್ರತ್ಯಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಸದಸ್ಯರ ನಡುವಿನ ಜಗಳ-ಕಿತ್ತಾಟಗಳ ನಡುವೆಯೇ ಪುರಸಭೆಯ 2012-13ನೇ ಸಾಲಿಗೆ 63.94 ಲಕ್ಷ ರೂಗಳ ಉಳಿತಾಯ ಬಜೆಟ್‌ಗೆ ಅನುಮೋದನೆ ದೊರೆಯಿತು.  ಮಂಗಳವಾರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಕಳೆದ ತಿಂಗಳ ಖರ್ಚು-ವೆಚ್ಚದ ಬಗ್ಗೆ ಅಪಸ್ವರ ಎತ್ತಿದ ಕೆಲವು ಸದಸ್ಯರು, ಮಹಿಳಾ ಅಧ್ಯಕ್ಷರಾದ ಲಕ್ಷ್ಮವ್ವ ಕಲಘಟಗಿ ಅಮಾಯರಾಗಿದ್ದು, ಪುರಸಭೆಯಲ್ಲಿ ಅವರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.ಅವರ ಹೆಸರಿನಲ್ಲಿ ಅನ್ಯ ಸದಸ್ಯರು ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಭೆಯಲ್ಲಿನ ಪ್ರಶ್ನೆಗಳಿಗೆ ಉಪಾಧ್ಯಕ್ಷರು ಉತ್ತರಿಸಿದ್ದೂ ವಿವಾದ ಸೃಷ್ಠಿಸಿತು.  ಸವಣೂರಿನ ಆಸಾರ ಜಾತ್ರಾ ಮೈದಾನಕ್ಕೆ ಟ್ಯಾಂಕರ್ ಮೂಲಕ ನೀರು ಸಿಂಪಡಿಸಲು 16 ಸಾವಿರ ವೆಚ್ಚ ಮಾಡಲಾಗಿದೆ. ಜಾತ್ರಾ ಸಮಿತಿಯ ಲಿಖಿತ ಕೋರಿಕೆಯೂ ಇಲ್ಲದೆ ಈ ನೀರು ಸಿಂಪರಣೆ ಮಾಡಲಾಗಿದೆ. ಜಾತ್ರಾ ಸಮಿತಿ ಮಾತ್ರ 6-7 ಟ್ರ್ಯಾಕ್ಟರ್ ನೀರು ಹಾಕಲಾಗಿದೆ ಎಂದು ದಾಖಲೆ ನೀಡಿದ್ದಾರೆ ಎಂದು ಆರೋಪಿಸಿದ ಸದಸ್ಯರು, ಈ ಅವ್ಯವಹಾರಕ್ಕೆ ಮುಖ್ಯಾಧಿಕಾರಿಗಳೇ ಹೊಣೆ ಎಂದರು. ನೈರ್ಮಲ್ಯ ನಿರ್ವಹಣೆಗಾಗಿ ಪುರಸಭೆಯಲ್ಲಿಯೇ 3 ಟ್ರ್ಯಾಕ್ಟರ್‌ಗಳಿದ್ದರೂ ಖಾಸಗಿ ಟ್ರ್ಯಾಕ್ಟರ್‌ಗಳಿಗೆ 32 ಸಾವಿರ ಪಾವತಿಸಲಾಗಿದೆ. ಸ್ವಂತ ಜೆಸಿಬಿ ಇದ್ದರೂ 35 ಸಾವಿರ ರೂಗಳನ್ನು ಖಾಸಗಿ ಜೆಸಿಬಿಗೆ ನೀಡಲಾಗಿದೆ. ಇದರಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ, ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಸದಸ್ಯರಿಂದ ವ್ಯಕ್ತವಾಯಿತು. ಪುರಸಭೆಯ ಈ ಸಾಮಾನ್ಯ ಸಭೆಯೇ ಕಾನೂನು ಬಾಹಿರವಾಗಿದೆ ಎಂದು ದೂರಿದ ಸದಸ್ಯರು, ಅಧ್ಯಕ್ಷರ ಜಾತಿ ಪ್ರಮಾಣ ಪತ್ರ ತಹಶೀಲ್ದಾರರ ನ್ಯಾಯಾಲಯದಲ್ಲಿ ರದ್ದುಗೊಂಡಿದ್ದು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಬರುವುದಿಲ್ಲ. ಈ ಬಗ್ಗೆ ಸಭೆಗೂ ಮುಂಚಿತವಾಗಿಯೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅದನ್ನು ಕಡೆಗಣಿಸಿ ಸಭೆ ಜರುಗಿಸಲಾಗಿದೆ ಎಂದು ಆಕ್ಷೇಪಿಸಿದರು.ಪುರಸಭೆಯ ಕಾಯ್ದಿರಿಸಲಾದ ಅನುದಾನದ ನಿರ್ವಹಣೆಗಾಗಿ ರಚಿಸಲಾದ ಸಮಿತಿಯಲ್ಲಿ ಎಸ್.ಸಿ ವರ್ಗದ ಸದಸ್ಯರನ್ನು ದೂರ ಇಡಲಾಗಿದೆ. ಅರ್ಹ ಸದಸ್ಯರನ್ನು ಸಮಿತಿಯಿಂದ ಹೊರಗಿಟ್ಟು, ಸಾಮಾಜಿಕ ನ್ಯಾಯ ಸಮಿತಿಯನ್ನು ರಚಿಸಲಾಗಿದೆ ಎಂಬ ಆಕ್ಷೇಪ ಸದಸ್ಯರಿಂದ ವ್ಯಕ್ತವಾಯಿತು.ಪುರಸಭೆಯ ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಂದ ಸಂಗ್ರಹಿಸಲಾಗುವ ಎ.ಎಂ.ಡಿ (ಭದ್ರತಾ ಠೇವಣಿ) ಮೊತ್ತವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಮರುಪಾವತಿ ಮಾಡಬೇಕಾದ ಈ ಮೊತ್ತವನ್ನು ವೆಚ್ಚ ಮಾಡಲಾಗಿದ್ದು, 30 ರಿಂದ 40 ಲಕ್ಷ ರೂಗಳ ಮರುಪಾವತಿ ಬಾಕಿ ಉಳಿದುಕೊಂಡಿದೆ ಎಂದು ಸದಸ್ಯರು ದೂರಿದರು.  ಪುರಸಭೆಯ ತುರ್ತು ಅಗತ್ಯಗಳಿಗೆ ಈ ಹಣವನ್ನು ವೆಚ್ಚಮಾಡಲಾಗಿದೆ ಎಂಬ ಸ್ಪಷ್ಟೀಕರಣವೂ ಸದಸ್ಯರಿಗೆ ಸಮಾಧಾನ ನೀಡಲಿಲ್ಲ. ಪುರಸಭೆಯ ಈ ಹಿಂದಿನ ಮುಖ್ಯಾಧಿಕಾರಿಗಳ ಅವಧಿಯಲ್ಲಿ ಎ.ಎಂ.ಡಿ ಮೊತ್ತವನ್ನು ಬಳಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳೂ ಸರಿಯಾಗಿಲ್ಲ ಎಂಬ ವಿಷಯ ಅಧಿಕಾರಿಗಳಿಂದ ಬಹಿರಂಗಗೊಂಡಿತು.ಉಳಿತಾಯ ಬಜೆಟ್:  ಮುಂಬರುವ ಆರ್ಥಿಕ ವರ್ಷದ ಪುರಸಭಾ ಬಜೆಟ್ ಪ್ರಕಟಗೊಂಡಿದ್ದು, 63.94 ಲಕ್ಷ ರೂಗಳ ಅನುದಾನದ ಉಳಿಕೆಯನ್ನು ಅಂದಾಜಿಸಲಾಗಿದೆ.ವಿವಿಧ ಮೂಲಗಳಿಂದ 18.05 ಕೋಟಿ ರೂಗಳ ಆದಾಯ ನಿರೀಕ್ಷಿಸಲಾಗಿದೆ. 17.41 ಕೋಟಿ ರೂಗಳ ವೆಚ್ಚ ಅಂದಾಜಿಸಲಾಗಿದೆ.

 

ಇದಲ್ಲದೆ 13 ನೇ ಹಣಕಾಸು ಯೋಜನೆಯ ಅಡಿ 69.86 ಲಕ್ಷ ಹಾಗೂ ಎಸ್.ಜೆ.ಎಸ್.ಆರ್.ವೈ ಅಡಿ 28 ಲಕ್ಷ ರೂಗಳ ಅನುದಾನ ಲಭ್ಯತೆ ಇದೆ. ಶೇ. 22.75 ರ ಅಡಿ 1.54 ಲಕ್ಷ ಹಾಗೂ ಶೇ. 7.5 ಅಡಿ 49 ಸಾವಿರ ಹಾಗೂ ಶೇ. 3 ರ ಅಡಿ ಅಂಗವಿಕಲರ ಕಲ್ಯಾಣಕ್ಕಾಗಿ 20 ಸಾವಿರ ಕಾಯ್ದಿರಿಸಲಾಗಿದೆ.  ಪುರಸಭೆಯ ಹೊಸ ಕಟ್ಟಡಕ್ಕಾಗಿ 87 ಲಕ್ಷ, ರಸ್ತೆಗಳಿಗಾಗಿ 1.5 ಕೋಟಿ, ಚರಂಡಿಗಾಗಿ 1 ಕೋಟಿ, ಯಂತ್ರೋಪಕರಣ ಖರೀದಿಗಾಗಿ 10.48 ಲಕ್ಷ, ಕಸಾಯಿಖಾನೆಗೆ 20 ಲಕ್ಷ, ಬೀದಿ ದೀಪಕ್ಕಾಗಿ 20 ಲಕ್ಷ, ನೀರು ಪೂರೈಕೆಗಾಗಿ 18.97 ಲಕ್ಷ, ಪೈಪ್ ಲೈನ್‌ಗಾಗಿ 28 ಲಕ್ಷ ಇತ್ಯಾದಿಗಳು ವೆಚ್ಚದ ವಿಭಾಗದಲ್ಲಿವೆ.

ಪುರಸಭೆಯ ಅಧ್ಯಕ್ಷೆ ಲಕ್ಷ್ಮವ್ವ ಕಲಘಟಗಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಉಪಾಧ್ಯಕ್ಷ ಶಿವಪ್ಪ ಜಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜು ಭೋವಿ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.