ಭಾನುವಾರ, ಏಪ್ರಿಲ್ 11, 2021
22 °C

ಸವಲತ್ತು ಕೇಳಿದರೆ ಸಬೂಬು ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಲಿ (ಬೆಳ್ತಂಗಡಿ ತಾ.): `ಈ ಹಿಂದೆ ನೀಡಿದ್ದ ಸೋಲಾರ್ ದೀಪಗಳು ಉರಿಯುತ್ತಿಲ್ಲ. ಅದನ್ನು ದುರಸ್ತಿ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಅದಕ್ಕೆ ಪರ್ಯಾಯವಾಗಿ ನಮ್ಮ ಗ್ರಾಮಕ್ಕೆ ವಿದ್ಯುತ್ ವ್ಯವಸ್ಥೆಯನ್ನಾದರೂ ಮಾಡಿ....~`ರಸ್ತೆ ಸಂಪರ್ಕಕ್ಕೆ ಅನುಮತಿ ಕೇಳಿದರೆ ಅರಣ್ಯ ಇಲಾಖೆಯವರು ತಾಂತ್ರಿಕ ಕಾರಣ ನೀಡಿ ನಿರಾಕರಿಸುತ್ತಾತೆ. ಎಳನೀರನ್ನು ನಕ್ಸಲರ ಹೆಬ್ಬಾಗಿಲು ಎನ್ನುತ್ತಾರೆ. ಆದ್ದರಿಂದ ನಮ್ಮನ್ನು ಅಲ್ಲಿಂದ ಹೊರಗೆ ಕಳುಹಿಸಿ~....

`ನನ್ನ ಮಗ ಸಂಪೂರ್ಣ ಅಂಗವಿಕಲನಾಗಿದ್ದಾನೆ. ಅವನಿಗೆ 9 ತಿಂಗಳಿನಿಂದ ಮಾಸಾಶನ ನೀಡಿಲ್ಲ. ಕೂಡಲೇ ಅದನ್ನು ನೀಡಿ~...- ಇದು ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `ನಕ್ಸಲ್ ಪೀಡಿತ ಗ್ರಾಮಗಳ ಜನ ಸಂಪರ್ಕ ಸಭೆ~ಯಲ್ಲಿ ಪಾಲ್ಗೊಂಡಿದ್ದ ನಾಗರಿಕರ ಒತ್ತಾಯ, ಅಳಲು...ನಾಗರಿಕರ ಪರವಾಗಿ ಮಾತನಾಡಿದ ಕುತ್ಲೂರಿನ ವಸಂತಿ, ನಮಗೆ ಈಗಾಗಲೇ ನೀಡಿರುವ ಸೋಲಾರ್ ದೀಪಗಳು ಉರಿಯುತ್ತಿಲ್ಲ. ಅವುಗಳ ದುರಸ್ತಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೆ, ಸಿಬ್ಬಂದಿ ಬೆಂಗಳೂರಿನಿಂದ ಬರಬೇಕಾದರೆ ಎರಡು ದಿನ ಆಗುತ್ತದೆ. ಆದ್ದರಿಂದ ನಮಗೆ ಸೋಲಾರ್ ದೀಪಗಳು ಬೇಡ ಎಂದರು.ನಕ್ಸಲ್ ಪೀಡಿತ ಪ್ರದೇಶಗಳಿಗೆಂದು ಮೀಸಲಿರುವ ಅನುದಾನವನ್ನು ಬೇರೆಡೆಗೆ ನೀಡುತ್ತಿದ್ದೀರಿ. ನಕ್ಸಲ್ ಪ್ರದೇಶದ ಅಭಿವೃದ್ಧಿಗೆಂದು ಹೇಳಿ, ಬೇರೆ ಕಡೆ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸುತ್ತೀರಿ. ಬೇರೆಯವರ ಉದ್ಧಾರ ಮಾಡುವುದಾದರೆ ಇಲ್ಲಿನ ಹೆಸರು ಯಾಕೆ?. ಒಂದು ಕಡೆ ಪೊಲೀಸರ ಭಯ, ಇನ್ನೊಂದೆಡೆ ನಕ್ಸಲರ ಭಯದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ನಕ್ಸಲ್ ಪೀಡಿತ ಪ್ರದೇಶಗಳಿಂದ ಸ್ವಇಚ್ಛೆಯಿಂದ ಹೊರ ಬರುವವರ ಜಮೀನಿಗೆ ಸೂಕ್ತ ಮೌಲ್ಯಮಾಪನ ನೀಡಿ ಪರಿಹಾರ ನೀಡಬೇಕು. ಜಮೀನಿನ ದಾಖಲೆ ಇಲ್ಲದಿದ್ದವರಿಗೆ ಮನೆ ತೆರಿಗೆ ರಸೀದಿಯನ್ನೇ ದಾಖಲೆ ಎಂದು ಪರಿಗಣಿಸಬೇಕು. ಸ್ಥಳಾಂತರ ಮಾಡಿದ ಬಳಿಕ ಕುಟುಂಬದ ಇಬ್ಬರಿಗೆ 6 ತಿಂಗಳು ಗೌರವ ಧನ ನೀಡಬೇಕು. ಆ ಪ್ರದೇಶಗಳಲ್ಲಿ ರಸ್ತೆ ನಿರ್ಮಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಈಗಲೇ ಸ್ಪಷ್ಟಪಡಿಸಬೇಕು ಎಂದು ವಸಂತಿ ಒತ್ತಾಯಿಸಿದರು.ನಾವೂರಿನಲ್ಲಿ 22 ಮನೆಗಳಿದ್ದು, ಅಲ್ಲಿ ಮೂಲ ಸವಲತ್ತುಗಳೇ ಇಲ್ಲ. ಸೇತುವೆ ಮುರಿದು ಬಿದ್ದಿದೆ. ಅದನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಹರೀಶ್ ಸಾಲಿಯಾನ್ ಮನವಿ ಮಾಡಿದರು.ಎಳನೀರಿನ  ಪ್ರಕಾಶ್ ಮಾತನಾಡಿ, ನಾವು ಅಧಿಕಾರಿಗಳಲ್ಲಿ ಸಮಸ್ಯೆ ಕುರಿತು ಭಿನ್ನವಿಸಿಕೊಂಡಾಗ ತಾಂತ್ರಿಕ ತೊಂದರೆ ಎನ್ನುತ್ತಾರೆ. ಪರಿಪೂರ್ಣವಾಗಿ ಯಾವುದೇ ಕೆಲಸ ಆಗುತ್ತಿಲ್ಲ. 2005ರಲ್ಲಿ ರೂ.30 ಲಕ್ಷದ ಕಾಮಗಾರಿ ಮಂಜೂರಾಗಿತ್ತು.

 

ಆದರೆ ಆಗಿರುವುದು ಕೇವಲ ರೂ. 5-6 ಲಕ್ಷ ವೆಚ್ಚದ ಕಾಮಗಾರಿ. ಆದ್ದರಿಂದ ನಮ್ಮ ಜಮೀನಿಗೆ ಸೂಕ್ತ ಮೌಲ್ಯಮಾಪನ ಮಾಡಿ ಪೂರಕ ಹಣ ನೀಡಿ. ಇಲ್ಲಿನ ಹೆಚ್ಚಿನ ಕುಟುಂಬಗಳು ಬೇರೆ ಕಡೆಗೆ ತೆರಳಲು ಸಿದ್ಧವಾಗಿವೆ ಎಂದರು.ಎಳನೀರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವಾಹನ ಸಂಪರ್ಕ ಒದಗಿಸಬೇಕು. ಬಸ್ ಸೌಕರ್ಯಕ್ಕೆ 8 ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಅದು ಈಡೇರಿಲ್ಲ. ಮನವಿ ಮಾಡಿದಾಗ ಸಿಗುವ ಸಿದ್ಧ ಉತ್ತರ `ಸಾರಿಗೆ ಪ್ರಾಧಿಕಾರದಿಂದ ಮಂಜೂರು ಆಗಬೇಕು~. ಆದ್ದರಿಂದ ಜನರ ಕಷ್ಟ ತಿಳಿದುಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಿ ಎಂದು ಅರುಣ್ ಕುಮಾರ್ ಒತ್ತಾಯಿಸಿದರು.ಸವಣಾಲಿಗೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್ ಇದೆ. ಅದನ್ನು ದಿನಕ್ಕೆ ಮೂರು ಬಾರಿ ಓಡಿಸಬೇಕು ಎಂದು ಸವಣಾಲು ಗ್ರಾಮಸ್ಥರು ಒತ್ತಾಯಿಸಿದರು.ಶಿರ್ಲಾಲಿನಲ್ಲಿ ಈಗಾಗಲೇ ರಸ್ತೆ ಇದೆ. ಅದನ್ನು ಅಭಿವೃದ್ಧಿಪಡಿಸಿ. ಸುಲ್ಕೇರಿಮೊಗ್ರು, ನಾವರ ಗ್ರಾಮಕ್ಕೂ ಅನುದಾನ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿತು.ನಿಮ್ಮ ಕಷ್ಟ ಅರ್ಥ ಆಗಿದೆ: ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಈ ಪ್ರದೇಶದ ನಾಗರಿಕರ ಸಮಸ್ಯೆ ಅರ್ಥ ಆಗಿದೆ. ಪ್ರಾಯೋಗಿಕ ಅನುಭವಗಳನ್ನು ಪ್ರಕಟಪಡಿಸಿದ್ದೀರಿ. ಅಭಿವೃದ್ಧಿ ಕಾಮಗಾರಿಗೆ ತಾಂತ್ರಿಕ ತೊಂದರೆ ಎಂಬ ತಡೆ, ಕಾನೂನು ತೊಡಕುಗಳನ್ನು ನಿವಾರಿಸಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲು ಆದೇಶಿಸಲಾಗುವುದು ಎಂದರು.ನಕ್ಸಲ್ ಸಮಸ್ಯೆ ನಿವಾರಣೆಗೆ, ತೊಂದರೆಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಅನುದಾನದ ಕೊರತೆ ಆಗಿಲ್ಲ. ಬದಲಾಗಿ ಅನುಷ್ಠಾನದ ಕೊರತೆ ಆಗಿದೆ. ಹಣದ ಕಣ್ಮರೆ ಆಗುವುದನ್ನು ತಡೆಯಬೇಕು. ಮುಂದಿನ ದಿನಗಳಲ್ಲಿ 3-4 ತಿಂಗಳಿಗೆ ಒಂದು ಬಾರಿ ಸಭೆ ನಡೆಸಲಾಗುವುದು. ಪ್ರತಿ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದರು.ಸಮರ್ಪಕ ಮಾಹಿತಿ ನೀಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಾಗರಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಚಾಲಕ, ನಿರ್ವಾಹಕ, ಬಸ್ ಇಲ್ಲ ಎಂಬ ಸಬೂಬು ನೀಡಬಾರದು. ಅದು ನಿಮ್ಮ ಸಮಸ್ಯೆ. ಅದನ್ನು ಪರಿಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದರು.ನಕ್ಸಲ್ ಬಾಧಿತ 11 ಗ್ರಾಮಗಳ ನಾಗರಿಕರು ಸಹಕಾರ ನೀಡಬೇಕು. ಮೂಲ ಸೌಕರ್ಯ ನೀಡಲು ಇರುವ ಸಮಸ್ಯೆಗಳನ್ನು ಮೆಸ್ಕಾಂ ಕೂಡ ಪರಿಹರಿಸಬೇಕು. ಜನರೂ ಸಹಕಾರ ನೀಡಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.ಉದ್ಘಾಟನೆ: ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.ಇದೇ ಸಂದರ್ಭ ಉದ್ಯೋಗ ಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಆತ್ಮ ಯೋಜನೆಯಲ್ಲಿ ವಿವಿಧ ಸವಲತ್ತುಗಳ ಚೆಕ್ ವಿತರಣೆ, ತೋಟಗಾರಿಕೆ ಇಲಾಖೆಯಿಂದ ಸಸಿ ವಿತರಣೆ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನದ ಚೆಕ್, ವಿವಿಧ ಇಲಾಖೆಗಳಿಂದ ಸವಲತ್ತು ವಿತರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್, ಕಾರ್ಯದರ್ಶಿ ಡಾ.ಕೆ.ವಿ.ನಾಗರಾಜ್, ಜಿಲ್ಲಾ ಅರಣ್ಯಾಧಿಕಾರಿ ಪ್ರಕಾಶ್, ಪುತ್ತೂರು ಎಎಸ್‌ಪಿ ಎಂ.ಎನ್.ಅನುಚೇತ್, ಪುತ್ತೂರು ಉಪ ವಿಭಾಗಾಧಿಕಾರಿ ಸುಂದರ ಭಟ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ರುಡ್‌ಸೆಟ್ ಪ್ರಬಂಧಕ ಡಾ.ಪ್ರಭು, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ತಹಶೀಲ್ದಾರ್ ಕುಸುಮಾ ಕುಮಾರಿ ಮತ್ತಿತರರು ಇದ್ದರು.

ಸ್ವ ಉದ್ಯೋಗ, ಸಕಾಲ ಯೋಜನೆ ಕುರಿತು ಮಾಹಿತಿ ನೀಡಲಾಯಿತು.

ಪರಿಹಾರ ನೀಡಿಲ್ಲ...

ಇಂದಬೆಟ್ಟುವಿನಲ್ಲಿ ಮೂರು ವರ್ಷಗಳ ಹಿಂದೆ ಮೂರು ವರ್ಷದ ಒಂದು ಸಾವಿರ ರಬ್ಬರ್ ಗಿಡಗಳನ್ನು ಕಡಿಯಲಾಗಿದೆ. ಇದುವರೆಗೆ ಪರಿಹಾರವನ್ನೂ ನೀಡಿಲ್ಲ. ಅಂದು ವಶಪಡಿಸಿಕೊಂಡ ಸ್ವತ್ತುಗಳನ್ನೂ ನೀಡಿಲ್ಲ. ಜಾಗವೂ ಇಲ್ಲ ಎಂದು ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡರು.

ತನಿಖೆ ಹಾದಿಯಲ್ಲಿ...

ಮಾರ್ಚ್‌ನಲ್ಲಿ ಕೊಲ್ಲಿ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದ ನಕ್ಸಲ್ ಶಿಬಿರದ ಬಗ್ಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನಿಖೆ ನಡೆಯುತ್ತಿದೆ. ಲಿಂಗಪ್ಪ ಮಲೆಕುಡಿಯ- ವಿಠಲ ಮಲೆಕುಡಿಯ ಹೊರತು ಪಡಿಸಿ ಪೊಲೀಸರಿಂದ ತೊಂದರೆ ಆಗುತ್ತಿದೆ ಎಂಬ ದೂರುಗಳು ಉಳಿದವರಿಂದ ಬಂದಿಲ್ಲ. ವಿಠಲ ಮಲೆಕುಡಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಎಸ್‌ಪಿ ಅಭಿಷೇಕ್ ಗೋಯಲ್ ಹೇಳಿದರು.ಪರಿಹಾರ ಸಿಗುತ್ತಿಲ್ಲ...

ಸಭೆಗೆ ಬಂದಿರುವ ಎಲ್ಲ ಅಧಿಕಾರಿಗಳಿಗೆ ವಾಹನ ನೀಡಿದ್ದೀರಿ. ನಾವು ಮಾತ್ರ ಆನೆಗಳಿಗೆ ಹೆದರಿಕೊಂಡು, ಕಷ್ಟಪಟ್ಟು ಈ ಗುಡ್ಡ ದಾರಿಯಲ್ಲಿ ಬರಬೇಕು. ನಾವೂ ಇದೇ ಜಿಲ್ಲೆಯ ನಾಗರಿಕರು. ಆದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

-ಪ್ರಕಾಶ್ ಎಳನೀರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.