`ಸವಲತ್ತು ಪಡೆಯಲು ನಮ್ಮಿಂದಲೇ ಸಾಧ್ಯವಾಗಿಲ್ಲ'

7

`ಸವಲತ್ತು ಪಡೆಯಲು ನಮ್ಮಿಂದಲೇ ಸಾಧ್ಯವಾಗಿಲ್ಲ'

Published:
Updated:

ಗಂಗಾವತಿ: `ಜನಸಂಖ್ಯಾ ದೃಷ್ಟಿಯಿಂದ ಮುಸಲ್ಮಾನರು ಅಧಿಕ ಸಂಖ್ಯೆಯಲ್ಲಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದ ಬಡವರೇ ಅಧಿಕವಾಗಿದ್ದರಿಂದ ನಮ್ಮನ್ನು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಗುಂಪಿಗೆ ಸೇರಿಸಿದೆ' ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘವು ಆಯೋಜಿಸಿದ ಸಮುದಾಯಗಳ 3ನೇ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಅಲ್ಪಸಂಖ್ಯಾತರ ಗುಂಪಿಗೆ ಸೇರಿದ ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ನೀಡಿವೆ. ಆದರೆ ಅವುಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ನಮ್ಮಿಂದಲೇ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಅನಕ್ಷರತೆ, ಜಾಗೃತಿ ಕೊರತೆ ಮತ್ತು ಮೂಡ ನಂಬಿಕೆ. ಇವೆಲ್ಲವೂಗಳ ಜೊತೆಗೆ ಸಂಘಟಿತ ಹೋರಾಟಕ್ಕೆ ನಾವು ಅಣಿಯಾಗದಿರುವುದು ನಮ್ಮ ಹಿಂದುಳಿವಿಕೆಗೆ ಮುಖ್ಯ ಕಾರಣ ಎಂದು ಅನ್ಸಾರಿ ವಿಶ್ಲೇಷಿಸಿದರು.    ಮೂಢನಂಬಿಕೆಗಳ ಕಂದಕದಿಂದ ಹೊರ ಬಂದು ನಮ್ಮ ಮನ ಪರಿವರ್ತಿಸಿಕೊಂಡು ನಾವು, ನಮ್ಮಂದಿಗೆ ನಮ್ಮ ಸಹೋದರರನ್ನು ಅಭಿವೃದ್ಧಿಯತ್ತ ಒಯ್ಯುವ ಕಾರ್ಯ ಪ್ರತಿಯೊಬ್ಬ ಪಿಂಜಾರ ಬಂಧುಗಳಿಂದಾಗಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಯಾವುದೇ ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಕೇವಲ ತನ್ನೊಂದರಿಂದ ಮಾತ್ರವೆ ಸಾಧ್ಯವಿಲ್ಲ. ಸಮಾಜದ ಇತರ ವರ್ಗಗಳನ್ನು ಸೌಹಾರ್ದಯುತವಾಗಿ ಅಪ್ಪಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.ಎಲ್ಲ ಸಮಾಜಗಳಲ್ಲಿಯೂ ಒಳಿತು-ಕೆಡುಕು ಇರುವುದು ಸಹಜ. ಆದರೆ ಕೆಡಕನ್ನು ನಿರಾಕರಿಸಿ, ಒಳಿತನ್ನು ಸ್ವೀರಿಸಿ ಹಿರಿಯರ ಮಾರ್ಗದರ್ಶನದಲ್ಲಿ ಒಳ್ಳೆಯ ರೀತಿಯಿಂದ ಸಂಘಟಿತವಾದರೆ ಸಮಾಜಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದರು.ಸಮಾಜದ ಹಿರಿಯ ಮುಖಂಡ ಎಚ್. ಇಬ್ರಾಹಿಂ ಸಾಬ್, ಸಂಸದ ಎಸ್. ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಉಪನ್ಯಾಸಕ ಮುನೀರ್ ಮಾತನಾಡಿದರು. ಮಾಜಿ ಶಾಸಕ ಹಸನ್‌ಸಾಬ ದೋಟಿಹಾಳ, ಮುಖಂಡ ಕೆ.ಎಂ. ಸೈಯಿದ್ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry