ಬುಧವಾರ, ಮೇ 12, 2021
24 °C

`ಸವಳು ಭೂಮಿ ಪುನಶ್ಚೇತನಕ್ಕೆ ಸೂಚನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಜನರಿಗೆ ಅನ್ಯಾಯವೆಸಗಿದರೆ ಸಹಿಸುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಎಚ್ಚರಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ತಾಲ್ಲೂಕು ಪ್ರದೇಶದಲ್ಲಿ ಜಮೀನಿನ ಸವಳು-ಜವಳು ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆಯೊಂದನ್ನು ಸಲ್ಲಿಸಿ. ಇದಕ್ಕೆ ಅಗತ್ಯವಾದ ಹಣಕಾಸನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಲು ಸಿದ್ಧ ಎಂದು ಹೇಳಿದರು.ಇಂದಿರಾ ಆವಾಸ್ ಯೋಜನೆಯ ಪ್ರಗತಿಯ ಬಗೆಗೆ ತೃಪ್ತಿ ಇಲ್ಲ. ಈ ಕುರಿತಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲನೆ ನಡೆಸಿ, ಮನೆಗಳ ನಿರ್ಮಾಣ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.ಇಂದಿರಾ ಆವಾಸ್ ಯೋಜನಾಧಿಕಾರಿ ನಿಂಗಪ್ಪ ಮಾತನಾಡಿ, ಇಂದಿರಾ ಆವಾಸ್ ಮನೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಜಾಪುರ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಗೆ 4975 ಮನೆಗಳನ್ನು ನಿಗದಿಪಡಿಸಿದ್ದು, ಈ ಪೈಕಿ 7451 ಮನೆಗಳಿಗೆ ಅನುಮೋದನೆ ದೊರೆತಿದೆ. ಮಾರ್ಚ್ 31ಕ್ಕೆ 786 ಮನೆಗಳನ್ನು ಪೂರ್ಣಗೊಳಿಸಲಾಗಿದೆ. 5058 ಮನೆಗಳು ವಿವಿಧ ಹಂತದಲ್ಲಿವೆ. 1007 ಮನೆಗಳನ್ನು ಆರಂಭಿಸಬೇಕಾಗಿದೆ ಎಂದು ವಿವರಿಸಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 678, ಲೋಕಸಭಾ ಸದಸ್ಯರ ಅನುದಾನದಲ್ಲಿ 220, ರಾಜ್ಯಸಭಾ ಸದಸ್ಯರ ಅನುದಾನದಡಿ 35 ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ವಿವರಿಸಿದರು.ಸ್ವರ್ಣಜಯಂತಿ ಸ್ವರೋಜಗಾರ ಯೋಜನೆಯಡಿ 146 ಗುಂಪುಗಳನ್ನು 2099 ಸ್ವರೋಜಗಾರಿಗಳಿವೆ. ಮಾರ್ಚ್ ಅಂತ್ಯದ ವರೆಗೆ 299 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಯೋಜನಾ ನಿರ್ದೇಶಕರು ಸಭೆಗೆ ವಿವರಿಸಿದರು.ನೇರ ಹಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಎಲೆಕ್ಟ್ರಾನಿಕ್ ಫಂಡ್ ಮಾನಿಟರಿಂಗ್ ಸಿಸ್ಟಮ್ ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಆರ್.ಡಿ.ಪಿ.ಆರ್.ನಿಂದ ನೇರವಾಗಿ ಕೂಲಿಕಾರರಿಗೆ ಹಣ ಜಮಾವಾಗಲಿದೆ.ಹಾಲಿ  ಗ್ರಾಮ ಪಂಚಾಯ್ತಿ ಖಾತೆಯಲ್ಲಿರುವ ಹಣವನ್ನು ತಕ್ಷಣ ವಿನಿಯೋಗಿಸಬೇಕೆಂದು ಎಲ್ಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ತಪ್ಪಿದರೆ ಇದರ ಪರಿಣಾಮವನ್ನು ಪಿಡಿಒಗಳೇ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಸೂಚಿಸಿದದರು.ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಸಿಂದಗಿ ಮತ್ತು ಇಂಡಿ ತಾಲ್ಲೂಕುಗಳಲ್ಲಿ ತೀವ್ರ ಸಮಸ್ಯೆ ಇದೆ. ವರ್ಷದ ಕೊನೆಯ ಮಾರ್ಚ್ ತಿಂಗಳಲ್ಲಿ 50ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಇಂತಹ ಗ್ರಾಮ ಪಂಚಾಯ್ತಿಗಳ ಕಾಮಗಾರಿಗಳ ವಿವರ ಕುರಿತು ತಪಾಸಣಾ ಕಾರ್ಯ ಪರಿಶೀಲನೆಯಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.ಕಳೆದ ವರ್ಷದ ಕೂಲಿ ಹಣ ಪಾವತಿ ಮಾಡುವ 87 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳುತ್ತೀರಿ. ಆದರೆ ಈವರೆಗೆ ನಿಮಗೆ ಯಾರೂ ಕೂಲಿ ಹಣ ಕೇಳಿಲ್ಲವೇ? ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ ಎಂದು ಹೇಳುತ್ತೀರಿ, ಹಾಗಾದರೆ ಜನ ಗುಳೆ ಹೋಗಬಾರದಲ್ಲವೇ? ಈ ಲೋಪಗಳನ್ನು ಸರಿಪಡಿಸಿಕೊಳ್ಳಿ. ಕೆಲವರು ಮಾಡುವ ತಪ್ಪಿಗೆ ಇಡೀ ಜಿಲ್ಲೆಗೆ ತೊಂದರೆಯಾಗುತ್ತದೆ. ಇದನ್ನು ಎಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕರು ಅರ್ಥಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.ಸ್ಮಶಾನ ಭೂಮಿ: ಜಿಲ್ಲೆಯ ಹೆಚ್ಚಿನ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ರುದ್ರಭೂಮಿ ಇಲ್ಲದೇ ತೀವ್ರ ತೊಂದರೆ ಉಂಟಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸಿ ರುದ್ರಭೂಮಿ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಶಾರದಾ, ಬಸವರಾಜ ಹಿರೇಮಠ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಮರೇಶ ನಾಯಕ, ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.