ಸವಾಲಿಗೆ ಸಿದ್ಧರಾಗಲು ಶಿಬಿರ

7
ಕ್ರಿಕೆಟ್: ಮೊದಲ ದಿನ ಬ್ಯಾಟಿಂಗ್ ಅಭ್ಯಾಸಕ್ಕೆ ಒತ್ತು ನೀಡಿದ ಭಾರತ ಆಟಗಾರರು

ಸವಾಲಿಗೆ ಸಿದ್ಧರಾಗಲು ಶಿಬಿರ

Published:
Updated:
ಸವಾಲಿಗೆ ಸಿದ್ಧರಾಗಲು ಶಿಬಿರ

ಬೆಂಗಳೂರು: ಉದ್ಯಾನ ನಗರಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಚಿನ್ ತೆಂಡೂಲ್ಕರ್ ಕೇಂದ್ರ ಬಿಂದುವಾಗಿದ್ದರು. ಏಕೆಂದರೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮೊದಲ ಬಾರಿ ಸಹ ಆಟಗಾರರೊಂದಿಗೆ ಅವರು ಬೆರೆತಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಸಿದ್ಧರಾಗಲು ಇಲ್ಲಿ ಆರಂಭವಾದ ಭಾರತ ತಂಡದ ಶಿಬಿರದಲ್ಲಿ ಸಚಿನ್ 130 ನಿಮಿಷ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮುಖ್ಯ ಪಿಚ್‌ನಲ್ಲಿ ಬೆಳಿಗ್ಗೆ 40 ನಿಮಿಷ ಹಾಗೂ ಮಧ್ಯಾಹ್ನ 20 ನಿಮಿಷ ಬ್ಯಾಟ್ ಮಾಡಿದರು. ಆಮೇಲೆ ನೆಟ್ಸ್‌ನಲ್ಲಿ  70 ನಿಮಿಷ ಅಭ್ಯಾಸ ನಡೆಸಿದರು.ಎಲ್ಲಾ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯ ಕೋಚ್ ಡಂಕನ್ ಫ್ಲೆಚರ್, ಬೌಲಿಂಗ್ ಕೋಚ್ ಜೊ ಡೇವ್ಸ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆವೊರ್ ಪೆನ್ನಿ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭವಾಯಿತು.ಕೆಲವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರೆ, ಇನ್ನು ಕೆಲವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯೊಳಗೆ (ಎನ್‌ಸಿಎ) ದೈಹಿಕ ಕಸರತ್ತು ನಡೆಸಿದರು. ಬೆಳಿಗ್ಗೆ ಒಟ್ಟುಗೂಡಿದ ಆಟಗಾರರು ಮೊದಲು ಲಘು ವ್ಯಾಯಾಮ ನಡೆಸಿದರು. ಬಳಿಕ ಮುಖ್ಯ ಪಿಚ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಮುಂದಾದರು.ಕಾಂಗರೂ ಪಡೆ ವಿರುದ್ಧದ ಸರಣಿಯಲ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇರುವ ವೀರೇಂದ್ರ ಸೆಹ್ವಾಗ್ ಹಾಗೂ ಮುರಳಿ ವಿಜಯ್‌ಗೆ ಮೊದಲ ಆದ್ಯತೆ. ಬಳಿಕ ಚೇತೇಶ್ವರ ಪೂಜಾರ, ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಸರದಿ. ಸಚಿನ್ ಆರಂಭದಲ್ಲಿ  ಒಂಟಿ ಹಾಗೂ ಎರಡು ರನ್ ತೆಗೆಯುತ್ತಿದ್ದರು. ಆಮೇಲೆ ಚೆಂಡನ್ನು ಸ್ವೀಪ್ ಮಾಡಲಾರಂಭಿಸಿದರು. ಕೆಲವೊಮ್ಮೆ ಚೆಂಡನ್ನು ಜೋರಾಗಿ ಅಟ್ಟುತ್ತಿದ್ದರು. ಇವರಿಗೆ ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಅಶೋಕ್ ದಿಂಡಾ, ಆರ್.ಅಶ್ವಿನ್, ಹರಭಜನ್ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಬೌಲ್ ಮಾಡಿದರು. ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತಿರುವ ಎಲ್.ಬಾಲಾಜಿ ಹಾಗೂ ಇರ್ಫಾನ್ ಪಠಾಣ್ ಕೂಡ ಇದ್ದರು. ಈ ಶಿಬಿರಕ್ಕೆಂದು ವಿವಿಧ ರಾಜ್ಯಗಳ ಯುವ ಬೌಲರ್‌ಗಳನ್ನು ಕರೆ ತರಲಾಗಿದೆ. ಈ ಬೌಲರ್‌ಗಳು ಇನ್ನೂ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಆಡಿಲ್ಲ.ಇದೇ ಸಂದರ್ಭದಲ್ಲಿ ಬಿಸಿಸಿಐನ ಜಾಹೀರಾತಿಗಾಗಿ ಶೂಟಿಂಗ್ ಕೂಡ ನಡೆಯಿತು. ಇದರಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಸೆಹ್ವಾಗ್ ಸೇರಿದಂತೆ ಕೆಲ ಆಟಗಾರರು ಪಾಲ್ಗೊಂಡಿದ್ದರು. ರಾಜ್‌ಕೋಟ್‌ನಲ್ಲಿ ಪೂಜಾರ ಅವರ ಮದುವೆ ಸಮಾರಂಭ ಶುಕ್ರವಾರವಷ್ಟೇ ಮುಗಿದಿತ್ತು. ಆದರೆ ಮಾರನೆ ದಿನವೇ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.ಕ್ರೀಡಾಂಗಣದಲ್ಲಿ ಬೆಂಕಿ

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಕಾಣಿಸಿಕೊಂಡ ಬೆಂಕಿ ಒಮ್ಮೆಲೇ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಬೆಳಿಗ್ಗೆ 11.45ರ ಸುಮಾರಿಗೆ `ಮೆಂಬರ್ ಸ್ಟ್ಯಾಂಡ್' ಬಳಿ ಈ ಅನಾಹುತ ನಡೆಯಿತು. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ಅವರು ಕೂಡ ಒಮ್ಮೆಲೇ ಕಕ್ಕಾಬಿಕ್ಕಿಯಾದರು.

ಕಾಮಗಾರಿ ನಡೆಯುತ್ತಿದ್ದ ಈ ಸ್ಥಳದಲ್ಲಿ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಸೈಟ್‌ಸ್ಕ್ರೀನ್‌ನ ಬಿಳಿ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಜೋರು ಗಾಳಿ ಇದ್ದ ಕಾರಣ ಅದು ಇಡೀ ಬಟ್ಟೆಯನ್ನು ವ್ಯಾಪಿಸಿ ಜೋರಾಗಿ ಉರಿಯಲಾರಂಭಿಸಿತು. ತಕ್ಷಣವೇ ಕ್ರೀಡಾಂಗಣದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.ಆಟಗಾರರು ಅಭ್ಯಾಸವನ್ನು ಮುಂದುವರಿಸಿದರು. ಹೊಸ ಸೈಟ್‌ಸ್ಕ್ರೀನ್ ವ್ಯವಸ್ಥೆ ಮಾಡಲಾಯಿತು. ವೆಲ್ಡಿಂಗ್ ಮಾಡುತ್ತಿದ್ದಾಗ ಸಿಡಿದ ಬೆಂಕಿಯ ಕಿಡಿ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.ತರಬೇತಿಗೆ `ಮಾಸ್ಕ್' ಬಳಕೆ

ತಂಡದ ಆಡಳಿತ ಮೊದಲ ಬಾರಿ ಹೊಸ ಪದ್ಧತಿಗೆ ಮೊರೆ ಹೋಗ್ದ್ದಿದು ಶನಿವಾರ ಕಂಡುಬಂತು. ಅದು ಮಾಸ್ಕ್ ಬಳಕೆ. ಅಭ್ಯಾಸದ ವೇಳೆ ಶ್ವಾಸಕೋಶ ಚಟುವಟಿಕೆ ಸಾಮರ್ಥ್ಯ ಹೆಚ್ಚಿಸಲು ಇದನ್ನು ಕ್ರೀಡೆಯಲ್ಲಿ ಬಳಸಲಾಗುತ್ತದೆ.ಜೊತೆಗೆ ಆಟಗಾರರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಮಟ್ಟವೂ ವೃದ್ಧಿಸುತ್ತದೆ. ಅಭ್ಯಾಸದತ್ತ ಹೆಚ್ಚು ಗಮನ ಹರಿಸಲು ಈ ಮಾಸ್ಕ್ ನೆರವಾಗುತ್ತದೆ. ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಈ ಮಾಸ್ಕ್ ಧರಿಸಿ ದೈಹಿಕ ಕಸರತ್ತು ನಡೆಸಿದರು. ಇದನ್ನು `ಹೈ ಆಲ್ಟಿಟೂಡ್ ಮಾಸ್ಕ್' ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry