ಸೋಮವಾರ, ಮಾರ್ಚ್ 1, 2021
29 °C
ಅರಿವು ಹರಿವು

ಸವಾಲಿನ ಚೆಸ್‌

ಸೂರ್ಯ Updated:

ಅಕ್ಷರ ಗಾತ್ರ : | |

ಸವಾಲಿನ ಚೆಸ್‌

ವಿಶ್ವನಾಥನ್‌ ಆನಂದ್. ಈ ಹೆಸರು ಕೇಳದಿರುವವರು ವಿರಳ. ಕ್ರೀಡಾ ಪ್ರಕಾರವಾಗಿರುವ ಚೆಸ್‌ನಲ್ಲಿ ಇವರ ಖ್ಯಾತಿ ಜಗದಗಲ. ಚೆಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದವರಲ್ಲಿ ಪ್ರಮುಖರು. ಚೆಸ್‌ ಎಂದಾಕ್ಷಣ ವಿವಿಧ ರಾಷ್ಟ್ರಗಳ ಜನರು ಭಾರತದತ್ತ ದೃಷ್ಟಿ ಹಾಯಿಸುವಂತೆ ಮಾಡಿದ್ದರಲ್ಲಿ ಆನಂದ್ ಕೊಡುಗೆ ಹೆಚ್ಚಿದೆ.ಇಲ್ಲಿ ಹೇಳ ಹೊರಟಿರುವುದು ಆನಂದ್‌ ಬಗ್ಗೆ ಅಲ್ಲ. ಅವರಿಗೆ ಹೆಸರು ತಂದು ಕೊಟ್ಟ ಚೆಸ್‌ ಬಗ್ಗೆ. ವ್ಯಕ್ತಿಯ ಕುಶಾಗ್ರಮತಿ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವ ಈ ಆಟ, ಅದು ನಡೆದು ಬಂದ ಹಾದಿ ಕುರಿತು ಬಹುತೇಕರಿಗೆ ಮಾಹಿತಿ ಇಲ್ಲ. ಲಭ್ಯವಿರುವ ಮಾಹಿತಿಗಳನ್ನು ಹೆಣೆಯುವ ಸಣ್ಣ ಪ್ರಯತ್ನ ಇದು.ಇಂಗ್ಲಿಷ್‌ನ ಚೆಸ್‌, ಕನ್ನಡದಲ್ಲಿ ಚದುರಂಗ ಆಟ. ಮೂಲತಃ ಸಂಸ್ಕೃತದಿಂದ ಬಂದಿರುವ ಈ ಪದ ಸೇನೆಯ ನಾಲ್ಕು ಅಂಗಗಳನ್ನು ಉಲ್ಲೇಖಿಸುತ್ತದೆ. ಕಾಲಾಳು, ಅಶ್ವ ಸೈನ್ಯ, ಹಸ್ತಿ ಸೈನ್ಯ ಮತ್ತು ರಥ. ಕಪ್ಪು ಮತ್ತು ಬಿಳಿ ಬಣ್ಣದ ತಲಾ 16 ಕಾಯಿಗಳ (ಒಟ್ಟು 32) ನಡುವೆ 64 ಚೌಕಾಕಾರದ ಕೋಣೆಗಳಲ್ಲಿ ನಡೆಯುವ ಯುದ್ಧದ ಆಟವೇ ಚದುರಂಗದಾಟ. ಬಿಳಿ ಮತ್ತು ಕಪ್ಪು ಬಣ್ಣದ ಕಾಯಿಗಳು ಎರಡು ಸೇನೆಗಳನ್ನು ಪ್ರತಿನಿಧಿಸುತ್ತವೆ. ಎರಡೂ ಕಡೆಗಳಲ್ಲಿ ತಲಾ ಒಬ್ಬೊಬ್ಬ ರಾಜ, ಮಂತ್ರಿ,  ತಲಾ ಎರಡು ರಥ, ಕುದುರೆ ಮತ್ತು ಆನೆಗಳಿವೆ.ಇವರ ಬೆಂಬಲಕ್ಕೆ ಎಂಟೆಂಟು ಕಾಲಾಳುಗಳೂ ಇರುತ್ತಾರೆ. ಒಂದು ಕಡೆಯ ರಾಜನನ್ನು ಬಂಧಿಸಿದರೆ (ಚೆಕ್‌ಮೇಟ್‌) ಇನ್ನೊಂದು ಪಡೆ ಗೆದ್ದಂತೆ. ವಿರೋಧಿಗಳನ್ನು ಹಿಮ್ಮೆಟ್ಟಿಸಲು ಸೈನ್ಯದ ನಡೆ ನಿರ್ಧರಿಸುವುದೇ ಈ ಆಟದಲ್ಲಿರುವ ಸವಾಲು. ಅದಕ್ಕೆ ಬುದ್ಧಿವಂತಿಕೆ ಬೇಕು. ಹೀಗೆ ಮಾಡಿದರೆ ಮುಂದೇನಾಗುತ್ತದೆ ಎಂಬುದರ ಬಗ್ಗೆ ದೂರಾಲೋಚನೆ ಬೇಕು. ಇದೇ ಕಾರಣಕ್ಕೆ ಇದು ಬುದ್ಧಿವಂತರ ಆಟ ಎಂದು ಕರೆಸಿಕೊಳ್ಳುವುದು. ಈ ಆಟ ಕೆಲವರಿಗೆ ಚಟವಾಗಿಯೂ ಕಾಡುವುದುಂಟು. ಇದನ್ನು ಜೂಜಾಟವನ್ನಾಗಿ ಪರಿಗಣಿಸುವವರೂ ಇದ್ದಾರೆ.ಜಗತ್ತಿನೆಲ್ಲೆಡೆ ಪಸರಿಸಿರುವ ಈ ಆಟದ ಮೂಲ ಎಲ್ಲಿ ಎಂಬುದರ ಬಗ್ಗೆ ಸಂಶಯಗಳಿವೆ. ಹೆಚ್ಚಿನವರು ಭಾರತ ಎಂದರೆ, ಇನ್ನು ಕೆಲವರು ಚೀನಾ, ಪರ್ಷಿಯಾ ಎಂದು ವಾದಿಸುತ್ತಾರೆ. ಆದರೆ, ಬಹುತೇಕ ಇತಿಹಾಸ ತಜ್ಞರು, ಚದುರಂಗದಾಟ ಹುಟ್ಟಿದ್ದು ಭಾರತದಲ್ಲಿ ಎಂದು ಹೇಳುತ್ತಾರೆ. ಗುಪ್ತರ ಆಡಳಿತಾವಧಿಯಲ್ಲಿ ಕ್ರಿ.ಶ. ಆರನೇ ಶತಮಾನಕ್ಕೂ ಮೊದಲೇ ಚೆಸ್‌ ಭಾರತೀಯರಿಗೆ ಪರಿಚಯವಾಗಿತ್ತು ಎಂಬುದು ತಜ್ಞರ ಅಂಬೋಣ. (ನಮ್ಮ ಪೌರಾಣಿಕ ಕಥೆಗಳಲ್ಲಿ ಚದುರಂಗ ಆಟದ ಪ್ರಸ್ತಾಪಗಳಿವೆ.ಇದನ್ನು ಪಗಡೆಯಾಟದ ಮುಂದುವರಿದ ರೂಪ ಎಂದು ಹೇಳುವವರೂ ಇದ್ದಾರೆ). ಭಾರತದ ಮೂಲ ಚೆಸ್‌ ಫಲಕ (ಬೋರ್ಡ್‌), ಗಣಿತಶಾಸ್ತ್ರದ ಉತ್ಕೃಷ್ಟ ಲೆಕ್ಕಾಚಾರಕ್ಕೆ ಉತ್ತಮ ಉದಾಹರಣೆಯಾಗಿತ್ತಂತೆ! ಸಿಂಧೂನಾಗರಿಕತೆಯ ಜನರು 100 ಚೌಕಾಕಾರದ ಕೋಣೆಗಳನ್ನು ಹೊಂದಿದ್ದ ಫಲಕದಲ್ಲಿ ಆಟವಾಡುತ್ತಿದ್ದರು. ಇದರ ಸುಧಾರಿತ ರೂಪದ ಚೆಸ್‌ ಎಂದು ಹೇಳಲಾಗುತ್ತಿದೆ. ಭಾರತದಿಂದ ಈ ಆಟವು ಪರ್ಷಿಯಾಕ್ಕೆ (ಈಗಿನ ಇರಾನ್‌) ಹರಡಿತು. ಅಲ್ಲಿಂದ ಅರಬರು ಚೆಸ್‌ ಅನ್ನು ಮುಸ್ಲಿಂ ಜಗತ್ತಿಗೆ ಪರಿಚಯಿಸಿದರು. ನಂತರ ದಕ್ಷಿಣ ಯೂರೋಪ್‌ಗೆ ಕಾಲಿಟ್ಟಿತು. 10ನೇ ಶತಮಾನದ ಹೊತ್ತಿಗೆ ಯೂರೋಪಿನಾದ್ಯಂತ ಜನರು ಚದುರಂಗದಾಟದ ಸೆಳೆತಕ್ಕೆ ಒಳಗಾದರು.ಇತ್ತ ಚೀನಾದಲ್ಲೂ ಕೊಂಚ ಮಾರ್ಪಾಡುಗಳೊಂದಿಗೆ ಈ ಆಟ ಚಾಲ್ತಿಯಲ್ಲಿತ್ತು. ಚೀನಾದಲ್ಲಿ ಚೆಸ್‌ ಕಾಯಿಗಳನ್ನು ಚೌಕಾಕಾರದ ಕೋಣೆಯಲ್ಲಿ ಇಡುವ ಬದಲು ಗೆರೆಗಳು ಸಂಧಿಸುವ ಜಾಗದಲ್ಲಿ ಇಡುತ್ತಿದ್ದರು. (ಕ್ರಿ.ಪೂ 4ನೇ ಶತಮಾನದಲ್ಲಿ ‘ಗೊ’ ಎಂದು ಕರೆಯಲಾಗುತ್ತಿದ್ದ ಆಟ ಚೀನಾದಲ್ಲಿ ಜಾರಿಯಲ್ಲಿತ್ತು. ಅದರಲ್ಲೂ ಕಾಯಿಗಳನ್ನು ಗೆರೆಗಳು ಸಂಧಿಸುವ ಜಾಗದಲ್ಲಿ ಇರಿಸುತ್ತಿದ್ದರು. ಈಗಿನ ಚೆಸ್‌, ‘ಗೊ’ ಆಟದ ಪ್ರೇರಣೆಯಿಂದ ರೂಪುಗೊಂಡಿದ್ದು ಎಂಬುದು ಕೆಲವು ಇತಿಹಾಸಕಾರರ ವಾದ). ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ಆಟಕ್ಕೆ ಬೇರೆ ಬೇರೆ ಹೆಸರುಗಳಿದ್ದವು. ಕಾಯಿಗಳನ್ನು ಗುರುತಿಸುತ್ತಿದ್ದ, ಹೆಸರಿಸುತ್ತಿದ್ದ ವಿಧಾನಗಳೂ ಭಿನ್ನವಾಗಿದ್ದವು. ಕಾಯಿಗಳ ನಡೆ, ಆಟದ ನಿಯಮಗಳಲ್ಲೂ ವ್ಯತ್ಯಾಸಗಳಿದ್ದವು.15ನೇ ಶತಮಾನದಲ್ಲಿ ಆಧುನಿಕ ಚೆಸ್‌ ರೂಪು ತಳೆಯಿತು. ಆಟದ ನಿಯಮಗಳಲ್ಲಿ, ಕಾಯಿಗಳ ನಡೆಗಳಲ್ಲಿ ಭಾರಿ ಬದಲಾವಣೆಗಳಾದವು. ಈ ಎಲ್ಲ ಬೆಳವಣಿಗೆಗಳು ಜರುಗಿದ್ದು ಇಟಲಿಯಲ್ಲಿ. ಈಗ ಜಾರಿಯಲ್ಲಿರುವ ನಿಯಮಗಳು ಬಂದಿದ್ದು 19ನೇ ಶತಮಾನದಲ್ಲಿ. ಈ ಅವಧಿಯಲ್ಲಿ ಈ ಆಟಕ್ಕೆ ಹೊಸ ದಿಕ್ಕು ದೊರೆಯಿತು.  1850ರ ನಂತರ ಚೆಸ್‌ ಟೂರ್ನಿಗಳು ಆರಂಭವಾದವು. 1886ರಲ್ಲಿ ಮೊದಲ ಬಾರಿಗೆ ಚೆಸ್‌ ವಿಶ್ವ ಚಾಂಪಿಯನ್‌ಶಿಪ್‌ ನಡೆಯಿತು. ಜಗತ್ತಿನ ನಡೆಯಲ್ಲಿರುವ ನಡೆಯುತ್ತಿರುವ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕಾಗಿ 1924ರಲ್ಲಿ ‘ಫಿಡೆ’ (ವಿಶ್ವ ಚೆಸ್‌ ಒಕ್ಕೂಟ) ಆರಂಭವಾಯಿತು. ಚೆಸ್‌ ಕ್ರೀಡಾ ಕ್ಷೇತ್ರದಲ್ಲಿ ಇದು ಮಹತ್ವದ ಮೈಲಿಗಲ್ಲು.ಕಂಪ್ಯೂಟರ್‌, ಮಾಹಿತಿ ತಂತ್ರಜ್ಞಾನದ ಆವಿಷ್ಕಾರಗಳನ್ನೂ ಚೆಸ್‌ ಕೂಡ ಬಳಸಿಕೊಂಡಿತು. ಆಟದ ಕೂಲಕಂಷ ವಿಶ್ಲೇಷಣೆ ಕಂಪ್ಯೂಟರ್‌ನಿಂದ ಸಾಧ್ಯವಾಯಿತು. ನಂತರ ಕಂಪ್ಯೂಟರ್‌ ಮಾಸ್ಟರ್‌ಗಳೂ ಬಂದವು. ಅತ್ಯುತ್ತಮ ಆಟಗಾರರನ್ನು ಸೋಲಿಸುವ ಸಾಮರ್ಥ್ಯವನ್ನೂ ಇವು ಹೊಂದಿದ್ದವು! 1990ರ ದಶಕದಲ್ಲಿ ಆನ್‌ಲೈನ್‌ ಚೆಸ್‌ ಆರಂಭವಾಯಿತು. ಸ್ಮಾರ್ಟ್‌ಫೋನ್‌ಗಳ ಈಗಿನ ಕಾಲದಲ್ಲಿ ಚೆಸ್‌ ಅಪ್ಲಿಕೇಷನ್‌ಗಳೂ ಬಂದಿವೆ. ವಯಸ್ಸಿನ ಭೇದವಿಲ್ಲದೆ ಎಲ್ಲರ ಮೊಬೈಲ್‌ಗಳಲ್ಲೂ ಅನುಸ್ಥಾಪನೆಗೊಂಡಿರುವ ಚೆಸ್‌ ಆ್ಯಪ್‌ಗಳು ಮೊಬೈಲ್‌ ಬಳಕೆದಾರರ ಬುದ್ಧಿಗೆ ಸವಾಲೊಡ್ಡುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.