ಸವಾಲಿನ ಪಾತ್ರಗಳೇ ಇಷ್ಟ

7

ಸವಾಲಿನ ಪಾತ್ರಗಳೇ ಇಷ್ಟ

Published:
Updated:
ಸವಾಲಿನ ಪಾತ್ರಗಳೇ ಇಷ್ಟ

`ಅಯ್ಯಾ'ದಲ್ಲಿ ಕನಸುಕಂಗಳ ಚೆಲುವೆಯಾಗಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ, `ತಲಾಶ್'ನಲ್ಲಿ ಮಾತ್ರ ಖಿನ್ನತೆಗೊಳಗಾದ ಹೆಂಡತಿ, ಮಗನ ಸಾವಿನ ನೋವನ್ನು ಭರಿಸಲಾಗದ ಅಮ್ಮನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಆಯ್ಕೆಯನ್ನು ಅವರೇ ಮಾಡಿಕೊಂಡಿದ್ದಂತೆ. 17 ವರ್ಷಗಳ ಸಿನಿ ಅನುಭವದಲ್ಲಿ ಒಂದೇ ರೀತಿಯ ಪಾತ್ರಗಳನ್ನು ಮಾಡುವುದಾದರೆ, ನಟನೆಗೆ ಅರ್ಥ ಏನಿದೆ ಎನ್ನುವ ಪ್ರಶ್ನೆ ಈ ಬೆಂಗಾಲಿ ಬೆಡಗಿಯದು.`ಸವಾಲೆನಿಸುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ನಟಿಯಾಗಿ ಈ ಕ್ಷೇತ್ರದಲ್ಲಿ ಉಳಿಯಬಹುದು. ಹಾಗಾಗಿ ಇದೀಗ ಚೂಸಿಯಾಗಿದ್ದೇನೆ. ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ. ಒಂದೇ ಬಗೆಯ ಪಾತ್ರಗಳು ನನಗೇ ಬೇಸರ ಹುಟ್ಟಿಸುತ್ತಿರುವಾಗ. ಪ್ರೀಕ್ಷಕರು ಹೇಗೆ ಆನಂದಿಸಬಲ್ಲರು? 17 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಕಳೆದ ನಂತರ ಯಾವುದೇ ಪಾತ್ರವನ್ನಾದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಅದೇ ಕಾರಣದಿಂದಾಗಿ ಇನ್ನು ಸವಾಲೆನಿಸುವ ಪಾತ್ರಗಳನ್ನೇ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ' ಎಂದು ರಾಣಿ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.`ಕುಛ್ ಕುಛ್ ಹೋತಾ ಹೈ' ಚಿತ್ರದ ವಿದ್ಯಾರ್ಥಿನಿಯ ಪಾತ್ರ, `ಬ್ಲ್ಯಾಕ್' ಚಿತ್ರದ ದೃಷ್ಟಿಹೀನ ವಿದ್ಯಾರ್ಥಿನಿ, `ವೀರ್ ಝಾರಾ' ಚಿತ್ರದ ವಕೀಲೆ, `ನೋ ಒನ್ ಕಿಲ್ಡ್ ಜೆಸ್ಸಿಕಾ' ಚಿತ್ರದ ಪತ್ರಕರ್ತೆ, `ಸಾಥಿಯಾ' ಚಿತ್ರದ ವೈದ್ಯೆ, `ಯುವಾ' ಚಿತ್ರದಲ್ಲಿ ಮಹತ್ವಾಕಾಂಕ್ಷೆಯುಳ್ಳ ಹೆಂಡತಿಯ ಪಾತ್ರ ಹೀಗೆ ಹತ್ತು ಹಲವು ಪಾತ್ರಗಳನ್ನು ನಿಭಾಯಿಸಿರುವ ಅನುಭವ ರಾಣಿಗಿದೆ.`ಏಕತಾನತೆಯಿಂದಾಚೆ ಬರಲು ಇಂಥ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಪ್ರತಿ ಪಾತ್ರದಿಂದಲೂ ಬದುಕಿನ ಒಂದು ಹೊಸ ಆಯಾಮವನ್ನು ಕಾಣುವಂತಿರಬೇಕು. ಒಂದೇ ಬಗೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರೆ ಕಲಿಕೆಗೇನು ಅರ್ಥವಿದೆ? ಕ್ಯಾಮೆರಾ ಮುಂದೆ ನಿಂತು ಸುಮ್ಮನೇ ಕೈ ಕಾಲು ಆಡಿಸಿದರೆ ಅಭಿನಯವಾಗುತ್ತದೆಯೇ' ಎನ್ನುವುದು ರಾಣಿಯ ಪ್ರಶ್ನೆ.ಕೆಲವೊಮ್ಮೆ ಮಹತ್ವದ ಪಾತ್ರಗಳಿದ್ದರೂ ಸ್ಕ್ರಿಪ್ಟ್ ಪೇಲವ ಎನಿಸಿದರೆ ಅವುಗಳನ್ನೂ ಕೈಬಿಟ್ಟಿದ್ದಿದೆಯಂತೆ. ಸಿನಿಮಾ ಗ್ರೇಟ್ ಎನಿಸಿ, ಪಾತ್ರಕ್ಕೇನು ಮಹತ್ವವಿಲ್ಲ ಎನಿಸಿದಾಗಲೂ ಅವಕಾಶಗಳನ್ನು ನಿರಾಕರಿಸಿದ್ದಿದೆ. ಒಟ್ಟಾರೆಯಾಗಿ ಸ್ಕ್ರಿಪ್ಟ್ ಮತ್ತು ಪಾತ್ರಗಳೆರಡೂ ಪ್ರಬಲವಾಗಿದ್ದರೆ, ಯಾವುದೇ ಅವಕಾಶಗಳನ್ನೂ ಬಾಚಿ ತಬ್ಬಿಕೊಳ್ಳುತ್ತೇನೆ ಎಂದು 34ರ ಹರೆಯದ ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry