ಸವಾಲಿನ ಹಾದಿ ಮುಂದಿದೆ

7

ಸವಾಲಿನ ಹಾದಿ ಮುಂದಿದೆ

Published:
Updated:

ಹಂಬಂಟೋಟಾ (ಪಿಟಿಐ): ಕೆನಡಾ ವಿರುದ್ಧದ ಪಂದ್ಯದಲ್ಲಿ ವಿಜಯ ಸಾಧಿಸಿದ್ದರೂ ಭಾರಿ ಸಂಭ್ರಮಪಡುವ ಅಗತ್ಯವಿಲ್ಲವೆಂದಿರುವ ಶ್ರೀಲಂಕಾದ ಮಾಹೇಲ ಜಯವರ್ಧನೆ ಅವರು ‘ನಿಜವಾದ ಸವಾಲಿನ ಹಾದಿ ಮುಂದಿದೆ’ ಎಂದು ತಮ್ಮ ತಂಡದ ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.ಆರಂಭದಲ್ಲಿಯೇ ಅತಿಯಾದ ಸಂತಸದಿಂದ ಬೀಗುವುದು ಅಪಾಯಕಾರಿ. ವಿಶ್ವಕಪ್‌ನಲ್ಲಿ ಗುಂಪಿನ ಎಲ್ಲ ಲೀಗ್ ಪಂದ್ಯಗಳು ಮುಗಿಯುವರೆಗೆ ಅಪಾಯ ಇದ್ದೇ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಮುಂದಿರುವ ಪಂದ್ಯಗಳ ಕುರಿತು ಯೋಚನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.‘ಕೊಲಂಬೊದಲ್ಲಿ ಫೆಬ್ರುವರಿ 26ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಬೇಕು. ಅದೊಂದು ಭಾರಿ ಸವಾಲಿನ ಪಂದ್ಯ. ನಮ್ಮ ತಂಡದ ಸತ್ವಪರೀಕ್ಷೆ ಅದೇ ಪಂದ್ಯದಲ್ಲಿ ನಡೆಯಲಿದೆ’ ಎಂದು ಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ ಹೇಳಿದರು.‘ಕೆನಡಾ ವಿರುದ್ಧದ ಪಂದ್ಯಕ್ಕೆ ಮುನ್ನ ತಂಡದ ಆಟಗಾರರು ಒತ್ತಡದಲ್ಲಿದ್ದರು. ಸ್ವಂತ ನೆಲದ ಪ್ರೇಕ್ಷಕರ ಎದುರು ಯಾವುದೇ ರೀತಿಯ ಆಘಾತಕ್ಕೆ ಅವಕಾಶ ಇರಕೂಡದು ಎನ್ನುವುದು ಪ್ರತಿಯೊಬ್ಬರ ಉದ್ದೇಶವಾಗಿತ್ತು. ಅದಕ್ಕೆ ತಕ್ಕ ಆಟವನ್ನು ಅಂಗಳದಲ್ಲಿ ನಮ್ಮ ಕ್ರಿಕೆಟಿಗರು ಪ್ರದರ್ಶಿಸಿದರು’ ಎಂದ ಅವರು ‘ಯಾವುದೇ ಟೂರ್ನಿಯ ಮೊದಲ ಪಂದ್ಯ ಅತ್ಯಂತ ಮಹತ್ವದ್ದಾಗಿರುತ್ತದೆ.ದುರ್ಬಲವೆನಿಸಿದ ತಂಡದ ವಿರುದ್ಧ ಆಡುತ್ತಿದ್ದರೂ ಒತ್ತಡದ ಅನುಭವ ಸಹಜ. ಹೊಸದಾಗಿ ವಿಶ್ವಕಪ್‌ನಲ್ಲಿ ಆಡುವವರು ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ’ ಎಂದು ವಿವರಿಸಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry