ಸವಾಲುಗಳೊಂದಿಗೆ ಸೆಣಸಲು ನಾವು ಸಿದ್ಧ

7

ಸವಾಲುಗಳೊಂದಿಗೆ ಸೆಣಸಲು ನಾವು ಸಿದ್ಧ

Published:
Updated:

ಯಲಹಂಕ ವಾಯುನೆಲೆ: ‘ಏಕಕಾಲದಲ್ಲಿ ಆರು ದುರ್ಘಟನೆಗಳು ಸಂಭವಿಸಿದರೂ, 600 ಮಂದಿ ಅಪಾಯದಲ್ಲಿ ಸಿಲುಕಿದರೂ ಅವರ ರಕ್ಷಣೆಗೆ ಧಾವಿಸುವ ಶಕ್ತಿ ನಮ್ಮ ತಂಡಕ್ಕೆ ಇದೆ.’

- ಇದು ಬುಧವಾರದಿಂದ ಇಲ್ಲಿ ನಡೆಯುತ್ತಿರುವ ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಪತ್ತು ನಿರ್ವಹಣಾ ತಂಡದ ನೇತೃತ್ವ ವಹಿಸಿರುವ ಕೆ.ಕೆ. ಪ್ರದೀಪ್ ಅವರ ವಿಶ್ವಾಸದ ನುಡಿ.

ಇದೇ ಮೊದಲ ಬಾರಿಗೆ ಎಂಬಂತೆ, ಪ್ರದೀಪ್ ನೇತೃತ್ವದ ವಿಪತ್ತು ನಿರ್ವಹಣಾ ತಂಡ ಭಯೋತ್ಪಾದಕರ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿದೆ. ವಿಪತ್ತು ನಿರ್ವಹಣೆಯಲ್ಲಿ ವಿಶೇಷ ಅನುಭವ ಪಡೆದಿರುವ ‘ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್’ನ (ಎನ್‌ಡಿಆರ್‌ಎಫ್) ಸಹಾಯ ಪಡೆದಿರುವ ವಿಪತ್ತು ನಿರ್ವಹಣಾ ತಂಡಕ್ಕೆ ರಾಸಾಯನಿಕ ಅಥವಾ ಜೈವಿಕ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಇದೆ.

ವೈಮಾನಿಕ ಪ್ರದರ್ಶನದ ಆರಂಭದ ದಿನವಾದ ಫೆಬ್ರವರಿ 9ರಿಂದ ತನ್ನ ಕಾರ್ಯ ಆರಂಭಿಸಿರುವ ವಿಪತ್ತು ನಿರ್ವಹಣಾ ತಂಡ ಇದುವರೆಗೆ ಹತ್ತಕ್ಕೂ ಹೆಚ್ಚು ಬೆಂಕಿ ಅವಗಢಗಳನ್ನು (ಎಲ್ಲವೂ ವಾಯುನೆಲೆಯ ಹೊರಭಾಗದಲ್ಲಿ ಸಂಭವಿಸಿದ್ದು) ಯಶಸ್ವಿಯಾಗಿ ಎದುರಿಸಿದೆ. 600 ಮಂದಿ ಸದಸ್ಯರನ್ನು ಹೊಂದಿರುವ ಈ ತಂಡ 15 ಇಲಾಖೆಗಳ ಸದಸ್ಯರನ್ನು ಹೊಂದಿದೆ.

ಪೊಲೀಸ್, ಅಗ್ನಿಶಾಮಕ ದಳದ ಸದಸ್ಯರನ್ನಲ್ಲದೆ ಈ ತಂಡದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯೂ (ಆರ್‌ಟಿಒ) ಇದ್ದಾರೆ. ವಾಯುನೆಲೆಯ 8 ಮತ್ತು 9ನೇ ಪ್ರವೇಶದ್ವಾರ, ಗಂಟಗಾನಹಳ್ಳಿ, ಚಿಕ್ಕಜಾಲ ಪೊಲೀಸ್ ಠಾಣೆ ಮತ್ತು ವಾಯುನೆಲೆಯ ಹೊರಗಿರುವ ನಿಯಂತ್ರಣ ಕೊಠಡಿ ಸೇರಿದಂತೆ ಒಟ್ಟು ಐದು ಕಡೆ ಈ ತಂಡದ ತುಕಡಿಗಳು ಇವೆ. ಎಲ್ಲ ಕಡೆಗಳಿಂದ ಬರುವ ಮಾಹಿತಿಯನ್ನು ಒಂದೇ ನಿಯಂತ್ರಣ ಕೊಠಡಿಯಲ್ಲಿ ಸಂಸ್ಕರಿಸಿ, ವಿಪತ್ತಿನ ಸಂದರ್ಭದಲ್ಲಿ ಕಾರ್ಯಾಚರಣೆ ಆರಂಭಿಸಲು ಸಂಬಂಧಪಟ್ಟ ತಂಡಕ್ಕೆ ಸೂಚನೆ ನೀಡಲಾಗುತ್ತದೆ.

ದುರ್ಘಟನೆ ಸಂಭವಿಸಿದಲ್ಲಿ, ತಂಡಕ್ಕೆ ಸೂಚನೆ ಸಿಕ್ಕ ಮೂರೇ ನಿಮಿಷಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ಆರಂಭವಾಗಿರುತ್ತದೆ. ಅಲ್ಲದೆ, ದುರ್ಘಟನೆಯ ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಲು ಅನುಕೂಲ ಆಗುವಂತೆ ಪ್ರತ್ಯೇಕ ಮಾರ್ಗ ಕೂಡ ಇದೆ. 11 ಸರ್ಕಾರಿ ಆಸ್ಪತ್ರೆಗಳು ಮತ್ತು 30 ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಟ್ಟು 1,200 ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಪ್ರದೀಪ್  ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry