ಗುರುವಾರ , ನವೆಂಬರ್ 21, 2019
22 °C

`ಸವಾಲು ಎದುರಿಸುವ ಮನೋಧರ್ಮ ಬೇಕು'

Published:
Updated:

ಬೆಂಗಳೂರು: `ಉನ್ನತ ಶಿಕ್ಷಣ ಪಡೆಯಲು ನೂರಾರು ಸವಾಲುಗಳಿದ್ದು, ಅದನ್ನು ಸಮರ್ಥವಾಗಿ ಸ್ವೀಕರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನೋಧರ್ಮ ರೂಪುಗೊಳ್ಳಬೇಕು' ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಕುಲಪತಿ ಪ್ರೊ.ಆರ್.ವೆಂಕಟರಾವ್ ಅಭಿಪ್ರಾಯಪಟ್ಟರು.ನಗರದಲ್ಲಿ ಶುಕ್ರವಾರ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ)  ಘಟಿಕೋತ್ಸವದಲ್ಲಿ ಮಾತನಾಡಿದರು.`ವಿಶ್ವದಾದ್ಯಂತ ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ದೊರೆಯುತ್ತಿರುವುದರಿಂದ ಸಿಗುವ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಳ್ಳಬೇಕು. ದೂರಶಿಕ್ಷಣ ವ್ಯವಸ್ಥೆಯು ಉನ್ನತ ಶಿಕ್ಷಣ ಕನಸನ್ನು ಸಾಕಾರಗೊಳಿಸುವ ಮೂಲಕ ಜನರ ನಡುವೆ ಸೇತುವೆಯಾಗಿದೆ' ಎಂದು ಹೇಳಿದರು. `ಹೊಸ ಕನಸುಗಳು ಮತ್ತು ಆಶಯದೊಂದಿಗೆ ವಿದ್ಯಾರ್ಥಿ ಜೀವನದ ಪ್ರತಿ ಹಂತವನ್ನು ಅನುಭವಿಸಿ. ಕೇವಲ ಹಣಗಳಿಸುವ ಸಲುವಾಗಿಪದವಿ ಪಡೆಯುವುದು ಬೇಡ. ಆತ್ಮವಿಶ್ವಾಸ ಹಾಗೂ ಜೀವನ ಕ್ರಮವನ್ನು ಸಮರ್ಪಕವಾಗಿ ರೂಪಿಸಿಕೊಳ್ಳುವಲ್ಲಿ ವಿದ್ಯೆ ಸಹಕಾರಿಯಾಗಲಿ' ಎಂದು ಆಶಿಸಿದರು.`ಇಗ್ನೊ' ಪ್ರಾದೇಶಿಕ ನಿರ್ದೇಶಕ ಡಾ.ಎಂ.ಎಸ್. ಪಾರ್ಥಸಾರಥಿ, `ಇಗ್ನೊ ಸಂಸ್ಥೆ ಕಲೆ, ಸಾಹಿತ್ಯ, ಆಡಳಿತ ನಿರ್ವಹಣೆ, ಕಂಪ್ಯೂಟರ್ ವಿಜ್ಞಾನ, ವಾಣಿಜ್ಯ, ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ವಿಭಿನ್ನ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಸದ್ಯದಲ್ಲೇ ನರ್ಸಿಂಗ್ (ಆಯುರ್ವೇದ), ಮಾನವಶಾಸ್ತ್ರ (ಸ್ನಾತಕೋತ್ತರ) ಪದವಿಯನ್ನು ಆರಂಭಿಸಲಿದೆ' ಎಂದು ಮಾಹಿತಿ ನೀಡಿದರು.ವೈದೇಹಿ ಶರಣ್ ಪಾಳ್ಯ, (ಎಂಎಸ್ಸಿ), ಸಿಮಿ ಕುರಿಯನ್ (ಎಂಎ) ಸೋನಿಯಾ (ಎಂಎ), ಎ.ನ್ಯಾನ್ಸಿ (ಎಂಎ), ಹರೀಶ್ ಸಿಂಗ್       (ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಅಂಡ್ ಮೆಕ್ಯಾನಿಕಲ್ ಎಂಜಿನಿಯರಿಂಗ್), ಇ.ಎನ್.ಸ್ವಾಮಿನಾಥನ್ (ಕಂಪ್ಯೂಟ್ ಇಂಟಿಗ್ರೇಟೆಡ್ ಮ್ಯಾನುಫ್ಯಾಕ್ಚರಿಂಗ್). ಎಸ್.ರಮೇಶ್ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಅವರು ಚಿನ್ನದ ಪದಕ ಪಡೆದರು.ಇಗ್ನೋ ಕಾರ್ಯ ಶ್ಲಾಘನೀಯ

ದೆಹಲಿಯಲ್ಲಿ ನಡೆದ `ಇಗ್ನೊ'ದ ಘಟಿಕೋತ್ಸವದ ತುಣುಕನ್ನು ಎಲ್‌ಸಿಡಿ ಪರದೆಯ ಮೂಲಕ ಪ್ರಸಾರ ಮಾಡಲಾಯಿತು.  `ಟೆಲಿ ಕಾನ್ವೊಕೇಷನ್' ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, `  ದೇಶದಾದ್ಯಂತ 30ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ಶೈಕ್ಷಣಿಕ ಆಸೆಗಳನ್ನು ಪೂರೈಸುವಲ್ಲಿ ಇಗ್ನೊ ಯಶಸ್ವಿಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿರುವುದು ಸಂತೋಷದ ವಿಚಾರ' ಎಂದು ಹರ್ಷ ವ್ಯಕ್ತಪಡಿಸಿದರು.

`ಶಿಕ್ಷಣದ ಹಕ್ಕು ಎಲ್ಲರಿಗೂ ದೊರೆಯಬೇಕು. ಉನ್ನತ ಶಿಕ್ಷಣ ಪಡೆಯುವಲ್ಲಿ ಕೆಳ ಹಾಗೂ ಮಧ್ಯಮವರ್ಗ ಮುಂದಾಗಬೇಕು' ಎಂದು ಪ್ರತಿಪಾದಿಸಿದರು.

ಪ್ರತಿಕ್ರಿಯಿಸಿ (+)