ಸವಾಲು ಎದುರಿಸುವ ಶಿಕ್ಷಣ ಬೇಕು: ಶೇಖ್

7

ಸವಾಲು ಎದುರಿಸುವ ಶಿಕ್ಷಣ ಬೇಕು: ಶೇಖ್

Published:
Updated:

ವಿಜಾಪುರ: ‘ಮಾರುಕಟ್ಟೆಯ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಗೆ ಅವರ ಕೌಶಲ ಹೆಚ್ಚಿಸಬೇಕು’ ಎಂದು ಪುಣೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ.ಆಫ್ತಾಬ್‌ ಅನ್ವರ್‌ ಶೇಖ್‌ ಹೇಳಿದರು.ಇಂಡೋ ಗ್ಲೋಬಲ್‌ ಕೃಷಿ ಮತ್ತು ವಾಣಿಜ್ಯೋ­ದ್ಯಮ (ಐಜಿಸಿಸಿಐಎ) ಸಂಸ್ಥೆಯ ಸಹಯೋಗದಲ್ಲಿ ಇಲ್ಲಿಯ ಅಂಜುಮನ್ ಪದವಿ ಕಾಲೇಜಿನಲ್ಲಿ ‘ವಾಣಿಜ್ಯ, ನಿರ್ವಹಣೆ, ತಂತ್ರಜ್ಞಾನ, ಸಾಮಾಜಿಕ–ಭೌತ– ಪರಿಸರ ವಿಜ್ಞಾನ ಹಾಗೂ ಭಾಷೆ’ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.‘ಪಠ್ಯಕ್ರಮದ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಇಂಡೋ ಗ್ಲೋಬಲ್‌ ಕೃಷಿ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಶಿಕ್ಷಕರು–ವಿದ್ಯಾರ್ಥಿಗಳಿಗೆ ನಿರ್ವಹಣಾ ಶಿಕ್ಷಣದ ಮೂಲಕ ಕೌಶಲ್ಯಾಧಾರಿತ ತರಬೇತಿ ನೀಡುವ ಗುರಿ ಹೊಂದಲಾಗಿದೆ’ ಎಂದರು.‘ಸಂಸ್ಥೆಯಲ್ಲಿ ಸದಸ್ಯರು ಸೌಹಾರ್ದಯುತವಾಗಿ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುವ ವಾತಾವರಣ ನಿರ್ಮಿಸಬೇಕು. ಮುಖ್ಯಸ್ಥರು ಧನಾತ್ಮಕ ಸಲಹೆಗಳನ್ನು ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಆಗ ಮಾತ್ರ ಸಂಸ್ಥೆ ಪ್ರಗತಿಯತ್ತ ಸಾಗಲು ಸಾಧ್ಯ. ಉಸಿರು­ಗಟ್ಟಿಸುವ ವಾತಾವರಣ ಇದ್ದರೆ ಅದರ ಪ್ರಗತಿ ಕುಸಿಯು­ತ್ತದೆ’ ಎಂದು ಇಂಡೋ ಗ್ಲೋಬಲ್ ಕೃಷಿ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಡಾ.ಫೋತೆ ಮೋತಿಫೋನಾ ಹೇಳಿದರು.ವಿವಿಧ ವಿಷ­ಯ­ಗಳಿಗೆ ಸಂಬಂಧಿಸಿದ ಐಆರ್‌ಜೆ ಬಿಎಸ್ಎಸ್ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಐ. ಮುಶ್ರೀಫ್, ಪ್ರಾಚಾರ್ಯ ಪ್ರೊ.ಎ.ಡಿ. ನವಲಗುಂದ, ಪ್ರೊ.ಎ.ಎ. ಖಿಜಮತಗಾರ, ಡಾ.ಡ್.ಎಸ್. ಖುರೇಶಿ, ಡಾ.ಎಸ್.ಎಂ. ದೇಸಾಯಿ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry