ಮಂಗಳವಾರ, ನವೆಂಬರ್ 12, 2019
28 °C

ಸವಿತಾ ಸಾವು: ವಿಚಾರಣೆ ಆರಂಭ

Published:
Updated:

ಲಂಡನ್ (ಪಿಟಿಐ): ಐರ್ಲೆಂಡ್ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರಾಕರಿಸಿದ ಕಾರಣಕ್ಕೆ ಅತಿಯಾದ ರಕ್ತಸ್ರಾವ ಮತ್ತು  ನಿಶ್ಶಕ್ತಿಯಿಂದ ನಿಧನ ಹೊಂದಿದ ದಂತವೈದ್ಯೆ ಸವಿತಾ ಹಾಲಪ್ಪನವರ ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಅವರ ಪತಿ ಪ್ರವೀಣ್ ಹಾಲಪ್ಪನವರ ಅವರು ಸಾಕ್ಷಿ ಹೇಳಲಿದ್ದಾರೆ.  ಆರು ಪುರುಷರು ಮತ್ತು ಐವರು ಮಹಿಳೆಯರನ್ನು ಒಳಗೊಂಡ ತನಿಖಾ ಸಮಿತಿಯ ಎದುರು ಪ್ರವೀಣ್ ಅವರು ತಮ್ಮ ಸಾಕ್ಷಿಯನ್ನು ದಾಖಲಿಸಲಿದ್ದಾರೆ.ಘಟನೆಯ ವಿವರಗಳನ್ನು ತನಿಖಾ ಸಮಿತಿಯ ಎದುರು ಹೇಳುವುದು ಪ್ರವೀಣ್‌ಗೆ ಕಷ್ಟ ನಿಜ. ಆದರೆ ಅವರು ತಮ್ಮ ಪತ್ನಿಗಾದ ಅನ್ಯಾಯದ ವಿವರಗಳನ್ನು ಸಮಿತಿ ಎದುರು ಬಿಚ್ಚಿಡಲು ನಿರ್ಧರಿಸಿದ್ದಾರೆ ಎಂದು ವಕೀಲ ಗೇರಾಲ್ಡ್ ಒಡೊನೆಲ್ ಹೇಳಿದ್ದಾರೆ.ಗಾಲ್‌ವೇ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಪತ್ನಿ ಸವಿತಾ ಅನುಭವಿಸಿದ ಹಿಂಸೆಯನ್ನು ದಾಖಲಿಸಲು ಪ್ರವೀಣ ಬದ್ಧರಾಗಿದ್ದಾರೆ. ಆದ್ದರಿಂದ ಅವರು ಲಿಖಿತ ಸಾಕ್ಷಿಗೆ ಬದಲು ತಮ್ಮ ಹೇಳಿಕೆ ದಾಖಲಿಸಲು ಮುಂದಾಗಿದ್ದಾರೆ ಎಂದು ಗೇರಾಲ್ಡ್ ತಿಳಿಸಿದ್ದಾರೆ.ಸವಿತಾ ಅವರು ಗರ್ಭ ಧರಿಸಿದ ನಂತರ ನಿಯಮಿತವಾಗಿ ತಪಾಸಣೆ ನಡೆಸಿದ ವೈದ್ಯ  ಡಾ. ಹೆಲನ್ ಹೌಲೆ, ಮುಖ್ಯ ವೈದ್ಯಕೀಯ ಸಲಹೆಗಾರ, ಪ್ರಯೋಗಾಲಯದ ಸಿಬ್ಬಂದಿ ಮತ್ತು ಐರ‌್ಲೆಂಡ್ ಪೊಲೀಸರ ಸಾಕ್ಷಿಗಳನ್ನು ಮಂಗಳವಾರ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.ಪ್ರವೀಣ್ ಅವರು ತಮ್ಮ ವಕೀಲರ ಜತೆ ಭಾನುವಾರ ನಾಲ್ಕು ಗಂಟೆಗಳ ಕಾಲ ಚರ್ಚಿಸಿ ಸಮಿತಿ ಎದುರು ಯಾವ ರೀತಿ ಸಾಕ್ಷಿ ಹೇಳಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ತನಿಖಾ ಸಮಿತಿಯು ಈ ವಾರ ಮತ್ತು ಮುಂದಿನ ವಾರ ವಿಚಾರಣೆ ನಡೆಸಿ 16 ಮಂದಿಯ ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಿದೆ.ಗರ್ಭಪಾತ ಮಾಡಿಸುವುದು ಕ್ಯಾಥೋಲಿಕ್ ಸಂಪ್ರದಾಯಕ್ಕೆ ವಿರೋಧ ಎಂಬ ಕಾರಣಕ್ಕೆ ಸವಿತಾ ಅವರಿಗೆ ಗರ್ಭಪಾತ ಮಾಡದ ಕಾರಣ ಅವರ ಸಾವು ಸಂಭವಿಸಿದೆ. ಈ ಘಟನೆಗೆ ಇಡೀ ವಿಶ್ವದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದ್ದರಿಂದ ಐರ‌್ಲೆಂಡ್ ಸರ್ಕಾರ ತನಿಖಾ ಸಮಿತಿಯನ್ನು ನೇಮಿಸಿದೆ.

ಪ್ರತಿಕ್ರಿಯಿಸಿ (+)