ಸವೆದ ಕೊಂಡಿ ಕಳಚಿಕೊಂಡಿರುವ ದಲಿತ ಸಂಘಟನೆಗಳು

7

ಸವೆದ ಕೊಂಡಿ ಕಳಚಿಕೊಂಡಿರುವ ದಲಿತ ಸಂಘಟನೆಗಳು

Published:
Updated:

ಸಾಮಾಜಿಕ ಬದುಕಿನ ಪರಿಕಲ್ಪನೆಯೇ ಇಲ್ಲದ ಅಸ್ಪೃಶ್ಯ ಜನಾಂಗಕ್ಕೆ ಅರ್ಥವಿಲ್ಲದ ಸಮಾಜದಲ್ಲಿ ಬದುಕುವ ಬದಲು ಅದರ ಅವಶೇಷಕ್ಕೆ ಜೀವ ತುಂಬುವ ಶಕ್ತಿ ಸಂಘಟನಾ ಶಕ್ತಿಯಿಂದ ಮಾತ್ರ ಸಾಧ್ಯ.

 

ಸಂಘಟನೆಯ ಕೊರತೆಯನ್ನು ಹಾಗೂ ಈ ಅಸ್ತಿತ್ವವನ್ನು ಎಲ್ಲಿಯವರೆಗೆ ಉಳಿಸಿಕೊಂಡಿರುವುದೋ ಅಲ್ಲಿಯವರೆಗೂ ಹೋರಾಟಕ್ಕೆ ಬೆಲೆ ಸಿಗುವುದಿಲ್ಲ. ನಿಜ ಸಂಗತಿಯ ಅರಿವು ಆದಾಗ ಮಾತ್ರ ಸಂಘಟನೆಗಳು ಪರಿವರ್ತನೆ ಹೊಂದಿ ದೀರ್ಘಕಾಲದ ಅಸ್ತಿತ್ವವನ್ನು ಉಳಿಸಿಕೊಳ್ಳುವವು.

 

ಇಲ್ಲದಿದ್ದರೆ, ಎಷ್ಟೇ ಸಂಘಟನೆಗಳು ಇದ್ದರೂ ಇಲ್ಲದಂತಾಗುವುವು. ತಾವು ಒಪ್ಪಿರುವ ಸಂವಿಧಾನ ಬದ್ಧವಾದ ಚಿಂತನೆಗಳಿಗೆ ಪೂರಕವಾದ ಜೀವ ತುಂಬ ಬೇಕಾದ ಸಂದರ್ಭಗಳನ್ನು ಸೃಷ್ಟಿ ಮಾಡಬೇಕಾಗಿದೆ. ಇತಿಹಾಸದಲ್ಲಿ ಮಾಡಿದ ಘೋರ ತಪ್ಪುಗಳನ್ನು ಮತ್ತು ಸಂದೇಶಗಳನ್ನು (ಅಸ್ಪೃಶ್ಯತೆ) ಕಿತ್ತು ಹಾಕಬೇಕು.

 

ಸ್ವಾತಂತ್ರ್ಯವಿಲ್ಲದ ತುಳಿತಕ್ಕೆ ಒಳಗಾಗಿರುವ ಜನಸಮುದಾಯದ ಕಷ್ಟ ಕಾರ್ಪಣ್ಯಗಳ ವಿಮೋಚನೆಯ ದಿಕ್ಕಿನಲ್ಲಿ ಪ್ರತಿಯೊಬ್ಬ ದಲಿತನು ಹೋರಾಡ ಬೇಕಾಗಿರುತ್ತದೆ. ಸ್ವಾತಂತ್ರ್ಯವಿಲ್ಲದ ಈ ಜನಾಂಗದ ಬದುಕು ಅರ್ಥಹೀನವಾದುದ್ದು. ಈ ವಿಚಾರವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಎಲ್ಲರಲ್ಲೂ ಸ್ವಾಭಿಮಾನದ ಅಲೆಯನ್ನು ಸೃಷ್ಟಿಸಬೇಕಾಗಿದೆ.ಒಪ್ಪೊತ್ತಿನ ಗಂಜಿಗೋಸ್ಕರ ಹೆತ್ತ ತಾಯಿಯು ತನ್ನ ಕರುಳ ಬಳ್ಳಿಯನ್ನೇ ಮಾರಾಟ ಮಾಡುವ ಇಂದಿನ ದಿನಗಳಲ್ಲಿ ಬಡತನದ ಕರಾಳ ಬದುಕು ಹಸಿವಿನಿಂದ ರುದ್ರ ನರ್ತನ ಮಾಡುತ್ತಿದೆ.ನಿಶ್ಚಲ ಬದುಕಿನ ನಿಸ್ತೇಜವಾದ ದೇಹಗಳಿಗೆ ಉಸಿರನ್ನು ತುಂಬುವವರು ಯಾರು? ಭವಿಷ್ಯಕ್ಕಾಗಿ ಅಸಹಾಯಕತೆಯಿಂದ ಅಷ್ಟ ದಿಕ್ಕುಗಳನ್ನು ನೋಡುತ್ತಿರುವ ಅಸ್ಪೃಶ್ಯರಿಗೆ ದಿಕ್ಕು ತೋರುವವರು ಯಾರು? ಯುವ ಜನಾಂಗದ ಕೈಗಳನ್ನು ಬಲಪಡಿಸಿ ಸಂಘಟನೆಗಳನ್ನು ಸದೃಢಗೊಳಿಸಿ ಚೈತನ್ಯ ತುಂಬಿ ವೈಯಕ್ತಿಕ ಆಸೆ ಆಕಾಂಶೆಗಳನ್ನು ಮತ್ತು ವ್ಯಕ್ತಿಗತ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಹೋರಾಟ ಮಾಡಿದರೆ ಮಾತ್ರ ಎಲ್ಲಾವಿಧವಾದ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಾಗುತ್ತದೆ.

 

ಜನಸಾಮಾನ್ಯರ ಹೃದಯಕ್ಕೆ ಹತ್ತಿರವಿದ್ದು ಹೃದಯದ ಬಾಗಿಲನ್ನು ತಟ್ಟಬೇಕು. ಸಂಘಟನೆಗಳು ಅವಿರತವಾಗಿ ಬಡವರ, ದೀನ ದಲಿತರ, ಹಿತಕ್ಕಾಗಿ ಶೋಷಿತರ ಕಂಬನಿಯನ್ನು ಒರೆಸುವ ಶುದ್ಧ ಹಸ್ತಗಳಾಗಬೇಕು. ಹಾಗಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಅಸ್ಪೃಶ್ಯರನ್ನು ಕೊಂದು ಕೂಗುವ ಅಮಾನವೀಯ, ಕ್ರೂರ ಜೀವಿಗಳ ಕೆಟ್ಟ ಆದರ್ಶಗಳನ್ನು ಅಧಃಪತನಗೊಳಿಸುವ ಕಹಳೆಯನ್ನು ಮೊಳಗಿಸುವ ಯುವ ಸಂಘಟನೆಗಳು ಎದ್ದೇಳಬೇಕಾಗಿದೆ. ಈ ಎಲ್ಲಾ ಹಕ್ಕುಗಳನ್ನು ಪಡೆಯಲು ಸಂಘಟನೆಯ ಮೂಲಕ ಹೋರಾಟವನ್ನು ಮಾಡುವುದು ಅನಿವಾರ್ಯವಾಗಿದೆ.ಅಸ್ಪೃಶ್ಯ ಜನಾಂಗವು ವೇದನೆಗಳನ್ನು ಅನುಭವಿಸುತ್ತಾ ಬದುಕುಳಿದಿದೆ. ದಾಸ್ಯ ಮತ್ತು ಸ್ವಾತಂತ್ರ್ಯದ ವ್ಯತ್ಯಾಸಗಳನ್ನು ಅರಿಯದ ಈ ಸಮುದಾಯವು ಜಾತಿ ಎಂಬ ಸಂಕೋಲೆಯಲ್ಲಿ ಬಂಧಿತವಾಗಿದೆ.ಗೊಂದಲ ಹಾಗೂ ಸಮಸ್ಯೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಲ್ಲಲ್ಲಿ ಶಾಂತಿಯನ್ನು ಕದಡುವ ವಿಚ್ಛಿದ್ರಕಾರಕ ಶಕ್ತಿಗಳು ಹಾಗೂ ಸಮಾಜದ ಕಂಟಕಪ್ರಾಯರಾಗಿರುವವರೇ ಅಸ್ಪೃಶ್ಯತೆಯ ಮಹಾ ಆರಾಧಕರು ಕೂಡ ಆಗಿದ್ದಾರೆ.1992ರ ನಂತರ ರಾಜ್ಯಮಟ್ಟದಲ್ಲಿ ದಲಿತ ಸಂಘಟನೆಗಳು ಹೋಳುಗಳಾಗಿ ವಿಭಜಿಸಿ ಬೇರ್ಪಟ್ಟವು. ದಲಿತ ಚಳವಳಿಗಳ ಬೆಳವಣಿಗೆ ಮತ್ತು ಕಾರ್ಯಪ್ರವೃತ್ತಿಯಲ್ಲಿ ಅನೇಕ ಏಳುಬೀಳುಗಳನ್ನು ಅನುಭವಿಸಿದವು. ಚಳವಳಿಗಳು ಮತ್ತು ಧ್ಯೇಯಧೋರಣೆಗಳು ದಾರಿ ತಪ್ಪಿದವು.

 

ಇಂದಿಗೂ ದಲಿತ ಸಂಘಟನೆಗಳ ಮಾನವೀಯ ಗುಣಲಕ್ಷಣಗಳ ಕೊಂಡಿಗಳು ದಿನೇ ದಿನೇ ಸವೆದು ಕಳಚಿ ಬೀಳುತ್ತಲಿವೆ. ವಿದ್ಯಾವಂತರ ಸಂಖ್ಯೆ ದ್ವಿಗುಣವಾಗುತ್ತಾ ಬರುತ್ತಿದ್ದರೂ ವೈಯಕ್ತಿಕ ಆಸೆ ಆಮಿಷಗಳಿಗೆ ಬಲಿಯಾಗಿ ಸಮುದಾಯದ ಬೆಳವಣಿಗೆಗೆ ಮಾರಕ ಉಂಟಾಗುವ ಸ್ಥಿತಿಗೆ ಬರುತ್ತಿವೆ.ಈ ತಲೆಮಾರಿನ ಅಸ್ಪೃಶ್ಯರು ಸ್ಪಷ್ಟವಾದ ವಿಚಾರಧಾರೆ ಹಾಗೂ ನಿರ್ಣಾಯಕವಾದ ನಿರ್ಧಾರಗಳನ್ನು ಹೊಂದಿ ಅವೈಜ್ಞಾನಿಕವಾದ ಅಸಂಬದ್ಧವಾದ ತಿಳುವಳಿಕೆಗಳಿಂದ ಹೊರ ಬಂದು ವೈಜ್ಞಾನಿಕ ಮನೋಧರ್ಮದ ತಳಹದಿಯನ್ನು ನಿರ್ಮಿಸಬೇಕಾಗಿದೆ.

 

ಜಡಗಟ್ಟಿ ನಿಂತಿರುವ ಈ ಅಸಮಾನತೆಯ ವಿಷ ವೃಕ್ಷಗಳ ಬೇರುಗಳನ್ನು ನಾಶಪಡಿಸಿದರೆ ಮಾತ್ರ ಬಹುಜನರ ಬದುಕು ಹಸನಾಗಲು ಸಾಧ್ಯ. ಬಡತನದ ಬದುಕು ಮರು ಹುಟ್ಟು ಆಗದಿರಲಿ.ಹುಟ್ಟುವ ಪ್ರತಿಯೊಂದು ಮಗುವು ಬಡತನವೆಂಬ ಬೇಗೆಯಿಂದ ದೂರವಿರಲಿ. ದೃಢ ವಿಶ್ವಾಸ ವಿವೇಚನಾ ಪೂರ್ಣ ಕಾರ್ಯ, ಸ್ವಾವಲಂಬನೆ, ಸ್ವಾಭಿಮಾನ ಮುಂತಾದ ತತ್ವಗಳ ಆಧಾರದ ಮೇಲೆ ಅರ್ಥಪೂರ್ಣ ಸಮಾಜವನ್ನು ನಿರ್ಮಾಣ ಮಾಡಬೇಕಾದ ಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ.

 

ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಎಂಬಂತೆ ಛಿದ್ರ ಛಿದ್ರವಾಗಿರುವ ದಲಿತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರಬೇಕಾಗಿದೆ. ಇದಕ್ಕೆ ಸಮರ್ಥ ನಾಯಕರ ಅವಶ್ಯಕತೆ ಇದೆ. ಕಂಠಪೂರ್ತಿ ಕುಡಿದು ನಿದ್ರೆ ಮಾಡುತ್ತಿರುವ ಜನರನ್ನು ಬಡಿದು ಎಬ್ಬಿಸುವಂತೆ ಶ್ರಮ ಪಡಬೇಕಾಗಿದೆ.

ದಲಿತ ಸಂಘಟನೆಯ ಸಂಸ್ಥಾಪಕರು, ಚಿಂತಕರು, ಸಾಹಿತಿಗಳು ಹಾಗೂ ರಾಜಕಾರಣಿಗಳು ಇನ್ನಾದರೂ ಎಚ್ಚೆತ್ತುಕೊಂಡು ಹೆಚ್ಚು ಜವಾಬ್ದಾರಿಯನ್ನು ಹೊತ್ತು ವಿಘಟಿತಗೊಂಡಿರುವ ಹಲವಾರು ಬಣಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಮಾಡಿದರೆ ಮಾತ್ರ ದಲಿತ ಸಂಘಟನೆಗಳಿಗೆ ಅರ್ಥ ಉಂಟಾಗುತ್ತದೆ. ಅವುಗಳಿಗೆ ಶಕ್ತಿ ತುಂಬಿದಂತಾಗಿ ಶೋಷಿತರು ಸಮಾಜದಲ್ಲಿ ನೆಲೆಯೂರಲು ಅವಕಾಶವಾಗುತ್ತದೆ.ಖಾಸಗೀಕರಣದಲ್ಲಿ ದಲಿತರಿಗೆ ಮೀಸಲಾತಿ ಸೌಲಭ್ಯಗಳು ದೊರೆಯದಿದ್ದರೆ, ಸಮಾಜದಿಂದ ಕಿತ್ತು ಹೊರಕ್ಕೆ ಎಸೆಯಲ್ಪಟ್ಟ ಈ ಜನಾಂಗವು ದೇಶದಾದ್ಯಂತ ಊರ ಹೊರಗೆ ಖಾಯಂ ಸತ್ತು ಬದುಕಬೇಕಾಗುತ್ತದೆ.ಮತ್ತೆ ಅಸ್ಪೃಶ್ಯತೆ ಎಂಬ ಹೊಂಡದಲ್ಲಿ ಬಿದ್ದು ಬೆಂದು ಹೋಗಬೇಕಾಗುತ್ತದೆ. ಆದ್ದರಿಂದ ಸವೆದ ಸರಪಳಿಯ ಕೊಂಡಿಗಳಂತಾಗಿ ಕಳಚಿಕೊಂಡಿರುವ ದಲಿತ ಸಂಘಟನೆಗಳು ಮತ್ತೆ ಒಂದಾಗಿ ಹೋರಾಟವನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry