ಗುರುವಾರ , ಜನವರಿ 23, 2020
26 °C

ಸಸ್ಯಕಾಶಿಗೆ ಬಣ್ಣ ಬಣ್ಣದ ಹೂಗಳ ಹೊದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಸ್ಯಕಾಶಿಯಲ್ಲಿ ಹಬ್ಬದ ವಾತಾವರಣ. ಮನಸ್ಸಿಗೆ ಮುದ ನೀಡುವ ಬಗೆ ಬಗೆಯ ಹೂಗಳಿಂದ ಬೌದ್ಧ ಸ್ತೂಪ, ನವಿಲು, ಕೊಕ್ಕರೆ, ಹಂಸ, ತಂಬಿಗೆಯಿಂದ ನೀರು ಹರಿಯುವ ಪ್ರತಿಕೃತಿಗಳು ಅರಳಿ ನಿಂತಿವೆ.  ಮೈಸೂರು ಮಲ್ಲಿಗೆಯಿಂದ ಅಲಂಕಾರಗೊಂಡ ಧ್ಯಾನಮಗ್ನವಾದ ಬುದ್ಧನ ಪ್ರತಿಮೆಯು ಫಲಪುಷ್ಪ ಪ್ರದರ್ಶನದ ವೈಭವಕ್ಕೆ ಮತ್ತಷ್ಟು ಮೆರಗು ನೀಡಿದೆ.ಚಿತ್ತಾಕರ್ಷಿಸುವ ವಿವಿಧ ಬಗೆಯ ಫಲ ಮತ್ತು ಪುಷ್ಪಗಳ ಮೂಲಕ ಯಕ್ಷಗಾನ, ಕೂಚುಪುಡಿ, ಬೆತ್ತದ ಕುಣಿತ, ಕಥಕ್ಕಳಿ, ಕರಗ, ಡೊಳ್ಳುಕುಣಿತ ಸೇರಿದಂತೆ ಹಲವು ಬಗೆಯ ನೃತ್ಯ ಪ್ರಕಾರಗಳು ಅನಾವರಣಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯಲು ಫಲಪುಷ್ಪಗಳನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ವಿನೂತನ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಕಂಡು ಬಂದ ಚಿತ್ರಣ.ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು `ಸದಾ ರಾಜಕೀಯದ ಒತ್ತಡದಲ್ಲಿರುವ ನನಗೆ ಈ ಸಸ್ಯಕಾಶಿಗೆ ಬಂದಾಗ ಅದ್ಭುತವಾದಂತಹ ಲೋಕಕ್ಕೆ ಕಾಲಿರಿಸಿದಂತೆ ಭಾಸವಾಗುತ್ತಿದೆ ಎಂದರು.ಮನಮೋಹಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದ ನಂತರ ರಾಜಕೀಯ ಸೇರಿದಂತೆ ಎಲ್ಲವನ್ನು ಮರೆತು ಇಲ್ಲೇ ಇರಬೇಕು ಎಂದೆನಿಸುತ್ತಿದೆ~ ಎಂದು ಹೇಳಿದರು.`ಶತಮಾನ ಆಚರಿಸುತ್ತಿರುವ ಸಂದರ್ಭದಲ್ಲಿ ಉದ್ಯಾನ ಕಲಾ ಸಂಘವು ಇಂತಹದ್ದೊಂದು ಪ್ರದರ್ಶನ ಏರ್ಪಡಿಸಿರುವುದು ನಿಜಕ್ಕೂ ಸಂತೋಷ ಉಂಟುಮಾಡಿದೆ. ಇದೊಂದು ಜಾಗತಿಕ ಮಟ್ಟದ ಪ್ರದರ್ಶನವಾಗಿದ್ದು, ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ~ ಎಂದು ಹೇಳಿದರು.`ಕಳೆದ ಬಾರಿ 6 ಲಕ್ಷ ಮಂದಿ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಈ ಬಾರಿ 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಫಲಪುಷ್ಪಗಳ ರಫ್ತಿನಿಂದ ತೋಟಗಾರಿಕೆ ಇಲಾಖೆಗೆ ಉತ್ತಮ ಆದಾಯವಿದ್ದು, ಬಾಗಲಕೋಟೆಯಲ್ಲಿ ಸ್ಥಾಪನೆಗೊಂಡಿರುವ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಶ್ರಮಿಸಲಿದೆ~ ಎಂದು ಹೇಳಿದರು.`ರಾಜ್ಯದಾದ್ಯಂತ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ವಿಸ್ತರಣೆಗೆ ಒತ್ತು ನೀಡಲಾಗಿದ್ದು, ಮಾವು ಸಂಸ್ಕರಣಾ ಘಟಕ ಸ್ಥಾಪಿಸುವ ಸಲುವಾಗಿ 10 ಲಕ್ಷ ರೂಪಾಯಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ~ ಎಂದು ಅವರು ತಿಳಿಸಿದರು.ಪ್ಲಾರೆನ್ಸ್ ಫ್ಲೋರಾ ಸಂಸ್ಥೆಯ ಸಹಕಾರದೊಂದಿಗೆ ಹಾಲೆಂಡ್‌ನ ಪುಷ್ಪವಿನ್ಯಾಸ ಕಲಾವಿದರ ತಂಡವು ವಿಶೇಷ ವಿನ್ಯಾಸದಲ್ಲಿ ಇಂಡೋ-ಅಮೆರಿಕನ್ ತಳಿಯ ಹೂಗಳನ್ನು ಅಲಂಕರಿಸಿ ಪ್ರದರ್ಶಿಸಿತು.ಶಾಸಕ ಡಾ.ಡಿ.ಹೇಮಚಂದ್ರಸಾಗರ್, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ನಿರ್ದೇಶಕಿ ಪಿ.ಹೇಮಲತಾ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)