ಸಹಕಾರಿ ಬ್ಯಾಂಕಿಗೂ ಎಟಿಎಂ

7

ಸಹಕಾರಿ ಬ್ಯಾಂಕಿಗೂ ಎಟಿಎಂ

Published:
Updated:

ಗದಗ: ಪಟ್ಟಣ ಸಹಕಾರಿ ಬ್ಯಾಂಕುಗಳು ಇನ್ನು ಮುಂದೆ ತಮ್ಮ ಗ್ರಾಹಕರಿಗೆ ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯಗಳನ್ನು ನೀಡಲು ತಯಾರಿ ನಡೆಸಿವೆ.ದೊಡ್ಡ, ಮಧ್ಯಮ, ಸಣ್ಣ ಪಟ್ಟಣಗಳಲ್ಲಿ ವ್ಯವಹಾರಿಕವಾಗಿ ಜೀವನಾಡಿಯಾಗಿರುವ ಪಟ್ಟಣ ಸಹಕಾರಿ ಬ್ಯಾಂಕುಗಳು ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಪಡೆದರೆ, ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕ್ರಾಂತಿಕಾರಕ ಬದಲಾವಣೆ ಮಾಡಿದ ಹೆಗ್ಗಳಿಕೆ ಸಲ್ಲುತ್ತದೆ. ರಾಜ್ಯದಲ್ಲಿ 300ಕ್ಕೂ ಅಧಿಕ ಪಟ್ಟಣ ಸಹಕಾರಿ ಬ್ಯಾಂಕುಗಳು ಇವೆ. ಪ್ರಸ್ತುತ ಸ್ಥಿತಿಯಲ್ಲಿ ಇವುಗಳು ತಮ್ಮ-ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಅನುಷ್ಠಾನಕ್ಕೆ ಬಂದರೆ ಸಣ್ಣ ಪಟ್ಟಣದ ಸಹಕಾರಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕ ದೇಶದ ಯಾವುದೇ ಮೂಲೆಯಲ್ಲಾದರೂ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅದು ಎಟಿಎಂ ಆಗಿರಬಹುದು. ನೇರವಾಗಿ ಬ್ಯಾಂಕಿನಿಂದ ಆಗಿರಬಹುದು. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳ ಎಟಿಎಂನಲ್ಲೂ ಹಣ ಪಡೆಯಬಹುದು. ಆ ಬ್ಯಾಂಕಿನ ಗ್ರಾಹಕರೂ ಕೂಡಾ ಸಹಕಾರಿ ಬ್ಯಾಂಕಿನ ಎಟಿಎಂನಲ್ಲಿ ಹಣ ಪಡೆದುಕೊಳ್ಳಬಹುದು.ರಾಜ್ಯದಲ್ಲಿ ಸ್ಥಾಪನೆಯಾಗಿರುವ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಬ್ಯಾಂಕುಗಳು ‘ಎ’ ಮತ್ತು ‘ಬಿ’ ಗ್ರೇಡ್ ಹೊಂದಿವೆ. ಇವುಗಳಲ್ಲಿ ನೂರು ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಂಡು ಮೊದಲ ಹಂತದಲ್ಲಿ ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಅಳವಡಿಸಲಾಗುತ್ತದೆ. ಎಲ್ಲವೂ ಅಂದುಕೊಂಡತೆ ಆದರೆ ಇನ್ನು ಮೂರು ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ ಎಂದು ಪಟ್ಟಣ ಸಹಕಾರಿ ಬ್ಯಾಂಕುಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಎಚ್.ಕೆ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.ಕೋರ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿಗೂ ಮಾಹಿತಿ ನೀಡಲಾಗಿದೆ. ಅಲ್ಲಿಂದಲೂ  ಬೆಂಬಲ ವ್ಯಕ್ತವಾಗಿದೆ. ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡಿರುವ ಬ್ಯಾಂಕುಗಳಲ್ಲಿ ಈ ಸೌಲಭ್ಯ ಅನುಷ್ಠಾನಗೊಂಡ ನಂತರ ಮಿಕ್ಕ ಬ್ಯಾಂಕುಗಳಲ್ಲೂ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಅಂತಿಮವಾಗಿ ವ್ಯವಹಾರದಲ್ಲಿ ಕೆಳಮಟ್ಟದಲ್ಲಿ ಇರುವ ಬ್ಯಾಂಕುಗಳನ್ನು ಆದಷ್ಟು ಸದೃಢಗೊಳಿಸಿ, ಅವುಗಳಲ್ಲೂ ಈ ಸೌಲಭ್ಯ ಅಳವಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry