ಸಹಕಾರಿ ಸಂಘಗಳ ಬಲವರ್ಧನೆಗೆ ಕ್ರಮ

7
ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್‌ ‘ಅಮೃತ ಮಹೋತ್ಸವ’ ಸಮಾರಂಭದಲ್ಲಿ ಸಚಿವ ಮಹದೇವ ಪ್ರಸಾದ್

ಸಹಕಾರಿ ಸಂಘಗಳ ಬಲವರ್ಧನೆಗೆ ಕ್ರಮ

Published:
Updated:

ಹೊನ್ನಾಳಿ:  ‘ಸಹಕಾರಿ ಸಂಘಗಳಿಗೆ ವಿವಿಧ ಸವಲತ್ತು ನೀಡುವ ಮೂಲಕ ಅವುಗಳ ಬಲವರ್ಧನೆಗೆ ಶ್ರಮಿಸಲಾಗುವುದು’ ಎಂದು ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ತಿಳಿಸಿದರು.ಇಲ್ಲಿನ ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡ ಪಿಕಾರ್ಡ್‌ ಬ್ಯಾಂಕ್‌ನ ‘ಅಮೃತ ಮಹೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರಕಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಿ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಸಹಕಾರಿ ಸಂಘಗಳ ಮೂಲಕ ನಿತ್ಯವೂ 10 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಆ ಪೈಕಿ ಹೆಚ್ಚಿನ ಪ್ರಮಾಣದ ಹಾಲು ಖರ್ಚಾಗದೇ ಉಳಿಯುತ್ತಿತ್ತು. ಕೆಎಂಎಫ್‌ ನಷ್ಟದ ಭೀತಿಯಲ್ಲಿತ್ತು. ಸರ್ಕಾರ ಮಧ್ಯ ಪ್ರವೇಶಿಸಿ, ಅಂಗನವಾಡಿ, ಪ್ರಾಥಮಿಕ–ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಕೆಎಂಎಫ್‌ ಅನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿರ್ಧಾರ ಕೈಗೊಂಡಿತು ಎಂದು ವಿವರಿಸಿದರು.ಅನೇಕ ಅಡೆತಡೆಗಳ ಮಧ್ಯೆಯೂ ಹೊನ್ನಾಳಿ ಪಿಕಾರ್ಡ್ ಬ್ಯಾಂಕ್‌ ಸಾಲ ವಸೂಲಾತಿಯಲ್ಲಿ ‘ಎ’ ಗ್ರೇಡ್‌ ಪಡೆದು ಮುಂಚೂಣಿಯಲ್ಲಿದೆ. ಇದು ಸಂತಸದ ವಿಷಯ. ಬದ್ಧತೆ ಇರುವ ಬ್ಯಾಂಕ್‌ನ ಪದಾಧಿಕಾರಿಗಳು ಇದಕ್ಕೆ ಕಾರಣ. ಹೊನ್ನಾಳಿ ಪಿಕಾರ್ಡ್ ಬ್ಯಾಂಕ್‌ ರಾಜ್ಯದ ಇತರ ಬ್ಯಾಂಕ್‌ಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.ಹೊನ್ನಾಳಿ ತಾಲ್ಲೂಕಿನ ಚೀಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈಚೆಗೆ ಶತಮಾನೋತ್ಸವ ಆಚರಿಸಿಕೊಂಡಿದೆ. ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘ, ಹೊನ್ನಾಳಿ ಅರ್ಬನ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ, ಟಿಎಪಿಸಿಎಂಎಸ್‌, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶಿವ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಸೇರಿದಂತೆ ಎಲ್ಲಾ ಸಹಕಾರಿ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ. ಸಹಕಾರಿ ರಂಗ ಈ ಭಾಗದಲ್ಲಿ ಯಶಸ್ಸು ಗಳಿಸಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ವೇಳೆ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ‘ಹೊನ್ನಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ನೇತೃತ್ವ ವಹಿಸಿದ್ದ ಹಿರೇಕಲ್ಮಠದ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ಎಚ್‌.ಎಂ.ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಡಾ.ಆರ್‌.ಎಂ.ಮಂಜುನಾಥಗೌಡ, ಕಾಸ್ಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎ.ಆರ್‌.ಶಿವರಾಂ, ಉಪಾಧ್ಯಕ್ಷ ಬಿ.ರಾಮಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶಗೌಡ ಮಾತನಾಡಿದರು. ಕೆ.ಸುಬ್ರಹ್ಮಣ್ಯ ಮತ್ತು ಚಟ್ನಹಳ್ಳಿ ಮಹೇಶ್‌ ಉಪನ್ಯಾಸ ನೀಡಿದರು.ಸಹಕಾರ ಸಂಘಗಳ ಉಪ ನಿಬಂಧಕ ಎಚ್‌.ಎಸ್‌.ಬೆಲ್ಲದ್‌, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್‌, ಮಾಜಿ ಶಾಸಕ ಎಚ್‌.ಬಿ.ಕೃಷ್ಣಮೂರ್ತಿ, ಪಿಕಾರ್ಡ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಶಂಕರಮೂರ್ತಿ, ನಿರ್ದೇಶಕರಾದ ಕೆ.ವಿ.ನಾಗರಾಜ್‌, ಎಸ್‌.ಪಿ.  ಬಸವನಗೌಡ, ಕೆ.ಶಿವಮೂರ್ತಿ, ಕೆ.ಟಿ.ಪ್ರತಿಭಾ, ಎಚ್‌.ಪಿ.ವೇದಮೂರ್ತಿ, ಕೆ.ಇ.ನಾಗರಾಜ್‌, ಬಿ.ಜಿ.ಶಿವಕುಮಾರ್‌, ಟಿ.ನಾಗರಾಜ್‌, ಕೆ.ಕರಿಬಸಪ್ಪ ಹಾಜರಿದ್ದರು.ವಿನುತಾ ಪ್ರಕಾಶ್‌ ಪ್ರಾರ್ಥಿಸಿದರು. ಪಿಕಾರ್ಡ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಶಂಕರಮೂರ್ತಿ ಸ್ವಾಗತಿಸಿದರು. ನಿರ್ದೇಶಕ ಎಸ್‌.ಪಿ.ಬಸವನಗೌಡ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಆರ್‌.ಗಂಗಾಧರ್‌ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry