ಗುರುವಾರ , ಮೇ 19, 2022
20 °C

ಸಹಕಾರ ಕ್ಷೇತ್ರದ ನಿರ್ಲಕ್ಷ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿಶ್ವಸಂಸ್ಥೆಯು 2012 ನ್ನು ಅಂತರರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿದ್ದರೂ ಅದನ್ನು ಆಚರಿಸಲು ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆ ಮೂಲಕ ಸಹಕಾರ ಕ್ಷೇತ್ರವನ್ನು  ನಿರ್ಲಕ್ಷಿಸಲಾಗುತ್ತಿದೆ~ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ಭಾನುವಾರ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಸ್ಥಾಪಿಸಿದ ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ 14 ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಸಹಕಾರ ಬ್ಯಾಂಕ್‌ಗಳು ದೇಶದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿವೆ ಎನ್ನುವುದನ್ನು ಮರೆಯಬಾರದು. ರಾಷ್ಟೀಕೃತ ಬ್ಯಾಂಕ್‌ಗಳು ಸಣ್ಣ ವ್ಯಾಪಾರಿಗಳನ್ನು ನಿರ್ಲಕ್ಷಿಸುತ್ತಿದ್ದು, ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾಲ ನೀಡಲು ಮುಂದಾಗುತ್ತಿವೆ. ಇದರಿಂದ ವ್ಯಾಪಾರಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಸಹಕಾರ ಬ್ಯಾಂಕ್‌ಗಳು ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಕೆಳವರ್ಗದವರಿಗೆ ಆಸರೆಯಾಗಿ ನಿಲ್ಲಬೇಕು~ ಎಂದು ಹೇಳಿದರು.`ದೇಶದಲ್ಲಿ ಬ್ಯಾಂಕ್ ವ್ಯವಹಾರದಿಂದ ವಂಚಿತರಾಗಿರುವ ಶೇ 40 ರಷ್ಟು ಜನರು ಇಂದಿಗೂ ಅಸಂಘಟಿತರಾಗಿದ್ದಾರೆ. ಅಂತಹವರನ್ನು ಗುರುತಿಸಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಕಂಪೆನಿಗಳಿಗೆ ಸಾಲ ನೀಡಬೇಕು~ ಎಂದರು.`10 ಕೋಟಿ ರೂಪಾಯಿಗೂ ಹೆಚ್ಚು ಲಾಭ ಹೊಂದಿರುವ ಸಹಕಾರ ಬ್ಯಾಂಕ್‌ಗಳು, ತಮ್ಮ ಲಾಭದ ಸ್ವಲ್ಪ ಭಾಗವನ್ನಾದರೂ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು~ ಎಂದು ಪಾಟೀಲ್ ಹೇಳಿದರು.ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಪಟ್ಟನಾಯಕನಹಳ್ಳಿ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ, ಶಾಸಕ ಕೆ.ಜೆ.ಜಾರ್ಜ್, ಬಿಬಿಎಂಪಿ ಸದಸ್ಯ ಪದ್ಮನಾಭ ರೆಡ್ಡಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸುಬ್ಬನರಸಿಂಹ, ಬ್ಯಾಂಕ್  ಅಧ್ಯಕ್ಷರಾದ ಟಿ.ಎಂ.ದೇವರಾಜ್, ಉಪಾಧ್ಯಕ್ಷ ಆಂಜನಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.