ಬುಧವಾರ, ಮೇ 25, 2022
31 °C

ಸಹಕಾರ ಸಾರಿಗೆ 20ರ ಸಾಧನೆ

ಅಮಿತ್ ಮೃಗವಧೆ Updated:

ಅಕ್ಷರ ಗಾತ್ರ : | |

ಸಹಕಾರ ಸಾರಿಗೆ 20ರ ಸಾಧನೆ

ಅದು 1991ರ ಫೆಬ್ರವರಿ 23.  ಕೊಪ್ಪದ ಶಂಕರ್ ಮೋಟಾರ್ಸ್‌ ಕಂಪೆನಿ ನಷ್ಟದಲ್ಲಿದೆ ಎಂದು ಘೋಷಿಸಿ  ಬೀಗ ಮುದ್ರೆ ಘೋಷಿಸಿದ (ಲಾಕ್‌ಔಟ್) ಮಾಡಿದ ದಿನವದು. ವೇತನ ಹೆಚ್ಚಿಸಬೇಕೆಂಬ ನೌಕರರ 74 ದಿನಗಳ ಮುಷ್ಕರಕ್ಕೆ ಮಾಲೀಕರು ಲಾಭದಲ್ಲಿದ್ದ ಸಾರಿಗೆ ಕಂಪೆನಿಯನ್ನು ನಷ್ಟದಲ್ಲಿದೆ ಎಂದು ಮುಚ್ಚುವ ಮೂಲಕ ಅಂತ್ಯ ಹಾಡಿದರು.ಈ ಕಂಪೆನಿಯನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಮುಂದೇನು ಎಂಬ ಆತಂಕದೊಡನೆ ಹೆಜ್ಜೆ ಹಾಕಿದಾಗ, ಆ ಗುಂಪಿನಲ್ಲಿದ್ದ 130 ಚಾಲಕ ಮತ್ತು ನಿರ್ವಾಹಕ ನೌಕರರ ತೀರ್ಮಾನ ಬೇರೆಯದೇ ಆಗಿತ್ತು. ಲಾಕ್‌ಔಟ್ ಮಾಡಿದ ಕಂಪೆನಿಯಿಂದ ದೊರೆತ 12 ಲಕ್ಷ ಹಾಗೂ ಜತೆಗೊಂದಿಷ್ಟು ಹಣ ಸೇರಿಸಿ ಅದೇ ಕಂಪೆನಿಯಿಂದಲೇ ಆರು ಬಸ್ಸುಗಳನ್ನು ಖರೀದಿಸಿದರು. ಮಾಲೀಕ ನೌಕರ ತಾರತಮ್ಯವಿಲ್ಲದ ಸಹಕಾರ ತತ್ವದಡಿ ಸಂಸ್ಥೆ ಬೆಳೆಸಿದರು.ಈಗ ಅದೇ ಕಂಪೆನಿಗೆ 20ರ ಹರೆಯ!. ಆರು ಬಸ್ಸುಗಳು ಈಗ ಎಂಬತ್ತಾಗಿವೆ. ಸುಮಾರು 300 ಜನರಿಗೆ ಉದ್ಯೋಗ ಲಭಿಸಿದೆ. ವಾರ್ಷಿಕ  12 ಕೋಟಿ ವ್ಯವಹಾರ ನಡೆಸುತ್ತಿದೆ. ಅಷ್ಟೇ ಅಲ್ಲ, ಸಾರಿಗೆ ಕ್ಷೇತ್ರದಲ್ಲಿ ಏಷ್ಯಾದಲ್ಲಿಯೇ ಮೊದಲ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೂ ‘ಕೊಪ್ಪ ಸಹಕಾರ ಸಾರಿಗೆ’ ಪಾತ್ರವಾಗಿದೆ.ಈ ಸಾಧನೆಯ ಹಿಂದಿರುವ ರೂವಾರಿ ಸಮಾಜವಾದಿ ಚಳವಳಿಯ ನಾಯಕರಾಗಿದ್ದ ದಿ. ಬಿ.ಕೆ. ಸುಂದರೇಶ್. ಇವರಿಗೆ ಬೆಂಬಲವಾಗಿ ನಿಂತವರು ಚಿಕ್ಕಮಗಳೂರಿನ ಆಗಿನ ಜಿಲ್ಲಾಧಿಕಾರಿ ಡಾ. ಎಸ್.ಸುಬ್ರಮಣ್ಯ ಮತ್ತು ಉಪನಿಬಂಧಕರಾಗಿದ್ದ ಜಿ. ರಮಣರೆಡ್ಡಿ. ‘ಸಹಕಾರ ಸಾರಿಗೆ’ (ಟ್ರಾನ್ಸ್‌ಪೋರ್ಟ್ ಕೋ-ಆಪರೇಟಿವ್ ಸೊಸೈಟಿ- ‘ಟಿಸಿಎಸ್’) ತತ್ವದಡಿ ಬೆಳೆದ ಈ ಸಂಸ್ಥೆಯಲ್ಲಿ ನೌಕರರೇ ಆಡಳಿತ ಮಂಡಳಿಯ ಸದಸ್ಯರು ಎನ್ನುವುದು ವಿಶೇಷ. ಆಡಳಿತ ಮಂಡಳಿಯಲ್ಲಿ ನೌಕರರ ಹೊರತು ಅನ್ಯ ಸದಸ್ಯರಿಲ್ಲ. ಸಹಕಾರ ಕ್ಷೇತ್ರದ ಇಂತಹ ಅಪರೂಪದ ವ್ಯವಸ್ಥೆಗೆ ಸರ್ಕಾರ ಕೂಡ ಕಾನೂನಿನಲ್ಲಿ ತಿದ್ದುಪಡಿ ತಂದು ಅವಕಾಶ ನೀಡಿರುವುದು ಮತ್ತೊಂದು ವಿಶೇಷ.ಸರ್ಕಾರಿ ಬಸ್ ಸೌಲಭ್ಯವೂ ಇಲ್ಲದೆ ಸಾರಿಗೆ ಸಂಪರ್ಕದ ಸಮಸ್ಯೆ ತೀವ್ರವಾಗಿದ್ದ ಮಲೆನಾಡಿನಲ್ಲಿ ಜನರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿ ಬೆಳೆದಿದ್ದು ಖಾಸಗಿ ಬಸ್‌ಗಳು. ಇಂದಿಗೂ ಮಲೆನಾಡಿನ ಕುಗ್ರಾಮಗಳಿಗೆ ಸಾರಿಗೆ ಸೇವೆ ಒದಗಿಸುತ್ತಿರುವುದು ಖಾಸಗಿ ಬಸ್‌ಗಳೇ. ಇವುಗಳ ಮಧ್ಯೆ ನಮ್ಮವರೇ ಕಟ್ಟಿದ ಸಾರಿಗೆ ಸಂಸ್ಥೆ ಎಂಬ ಪ್ರೀತಿ ಜನರಿಗೆ. ಸರ್ಕಾರಿ ಬಸ್‌ಗಳ ಸೌಲಭ್ಯ ದೊರಕುವ ನಗರ ಪ್ರದೇಶದ ಜನತೆಗೆ ಮಲೆನಾಡಿನ ಹಳ್ಳಿಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮಟ್ಟಕ್ಕೆ ಬೆಳೆಸಿದ ಸಾಮಾನ್ಯ ನೌಕರರ ಸಾಧನೆ ವಿಸ್ಮಯ ಮೂಡಿಸದಿರದು.ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಎನ್.ಆರ್.ಪುರ ತಾಲ್ಲೂಕುಗಳ  ಮೂಲೆ ಮೂಲೆಯ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುತ್ತಿರುವ ಸಂಸ್ಥೆ ಪ್ರಾಮಾಣಿಕ ಸೇವೆಗಾಗಿ ಪಡೆದಿರುವ ಜನಮನ್ನಣೆ ಅಪಾರ.‘ಸಹಕಾರ ಸಾರಿಗೆ’ ಬಸ್ ಎಂದಿಗೂ ‘ಕೈಕೊಡುವುದಿಲ್ಲ’ ಎಂಬ ಕಾರಣಕ್ಕೆ ಖಾಸಗಿ ಬಸ್‌ಗಳ ತೀವ್ರ ಪೈಪೋಟಿಯ ನಡುವೆಯೂ ಜನರು ಇದು ನಮ್ಮದೇ ಬಸ್ ಎನ್ನುವಂತೆ ಮನ್ನಣೆ ಗಳಿಸಿದೆ. ಕಂಪೆನಿ ಲಾಕ್‌ಔಟ್ ಆಗುವ ಮುನ್ನ ನಾವು ಮುಷ್ಕರ ಮಾಡುತ್ತಿದ್ದಾಗ ಜನರು ಅಕ್ಕಿ, ತರಕಾರಿಗಳನ್ನು ನೀಡಿ ನಮಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಕಂಪೆನಿ ಬಗ್ಗೆ ಜನರಲ್ಲಿ ಮೂಡಿರುವ ವಿಶ್ವಾಸಕ್ಕೆ ಅನುಗುಣವಾದ ಸೇವೆ ನೀಡುವುದೇ ನಮ್ಮ ಧ್ಯೇಯ’ ಎನ್ನುತ್ತಾರೆ ಅಧ್ಯಕ್ಷ ವಿಶ್ವನಾಥ್.‘ವಿಶೇಷ ಸಹಕಾರ ಸಂಘ’ ಎಂದು ಪರಿಗಣಿಸಿರುವ ಈ ಸಂಸ್ಥೆಗೆ ಎರಡು ಬಾರಿ ಸರ್ಕಾರದ ಅನುದಾನವೂ ದೊರೆತಿದೆ. ಜಪಾನಿನ ರಟ್ಸುಮೆಕಿನ್ ವಿಶ್ವವಿದ್ಯಾನಿಲಯದ 21 ಜನರ ತಂಡ 1998ರಲ್ಲಿ ಇಲ್ಲಿಗೆ ಭೇಟಿ ನೀಡಿ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕರೊಬ್ಬರು ಸಂಸ್ಥೆಯನ್ನು ವಿವಿಧ ಕೋನಗಳಲ್ಲಿ ನಡೆಸಿದ ಅಧ್ಯಯನಕ್ಕೆ ಪಿಎಚ್.ಡಿ ಪದವಿಯೂ ಲಭಿಸಿದೆ. ಈ ಅಧ್ಯಯನದ ವಿಷಯವನ್ನು ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪಠ್ಯದಲ್ಲಿಯೂ ಬಳಸಿಕೊಂಡಿದೆ. ಹೊಸದಾಗಿ ಸೇರ್ಪಡೆಗೊಂಡ ನೌಕರನ ನಡತೆ ಮತ್ತು ಕಾರ್ಯಬದ್ಧತೆಯನ್ನು ಪರಿಶೀಲಿಸಿ ಎರಡು ವರ್ಷಗಳ ನಂತರ ಆತ ಅರ್ಹನಾಗಿದ್ದರೆ ಮಾತ್ರ ಕಂಪೆನಿಗೆ ಸದಸ್ಯನಾಗಿ ಮಾಡಿಕೊಳ್ಳಲಾಗುತ್ತದೆ. ಕಂಪೆನಿಯ ಎಲ್ಲಾ ಕಾಯಂ ನೌಕರನೂ ಷೇರುದಾರನಾಗುವುದು ಕಡ್ಡಾಯ. ಸದಸ್ಯನಾಗಿ ಒಂದು ವರ್ಷದ ನಂತರ ಮತದಾನದ ಹಕ್ಕು ನೀಡಲಾಗುತ್ತದೆ.ಉಳಿದ ಸರ್ಕಾರಿ ಕಂಪೆನಿಗಳಲ್ಲಿ ಇರುವಂತೆ ಇಲ್ಲಿಯೂ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ವಯಸ್ಕರಿಗೆ ರಿಯಾಯತಿ ದರದ ಬಸ್‌ಪಾಸ್ ಸೌಲಭ್ಯವಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ನೌಕರರಿಗೆ ದಿನಬಳಕೆ ವಸ್ತುಗಳ ಮೇಲೆ ರಿಯಾಯಿತಿ ಖರೀದಿ ಸೌಲಭ್ಯ, ಉಳಿತಾಯ ಯೋಜನೆ ಇದೆ. ನಿವೃತ್ತಿಯಾದ ನಂತರ ಪಿಂಚಣಿ ಸಹ ನೀಡಲಾಗುತ್ತದೆ. ‘ಭವಿಷ್ಯದಲ್ಲಿ ಸಾರಿಗೆ ಉದ್ದಿಮೆಯನ್ನು ಸಹಕಾರ ವಲಯದಲ್ಲಿ ಮುಂದುವರೆಸುವುದು ಕಷ್ಟಕರ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಪೈಪೋಟಿ ಹೆಚ್ಚುತ್ತಿದೆ. ಜೊತೆಗೆ ನೂರಾರು ಅಡ್ಡಿ ಆತಂಕಗಳು ನಿರಂತರವಾಗಿ ಎದುರಾಗುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳನ್ನು ನಿಭಾಯಿಸುವುದು ಸುಲಭವಲ್ಲ. ಹೀಗಾಗಿ ಇತರ ಕ್ಷೇತ್ರಗಳೆಡೆಗೂ ಗಮನ ಹಿರಿಸುತ್ತಿದ್ದೇವೆ.  ನೌಕರರಿಗೆ ಸಾಲ ನೀಡುವ ಸಲುವಾಗಿ ಸ್ಥಾಪಿಸಲಾಗಿರುವ ಬ್ಯಾಂಕ್ ಸಾರ್ವಜನಿಕರಿಗೂ ಲಭ್ಯವಾಗುವಂತೆ ವಿಸ್ತರಿಸುವುದು ಮುಖ್ಯ ಗುರಿ. ಸಾರ್ವಜನಿಕ ಪೆಟ್ರೋಲ್ ಬಂಕ್, ಗ್ಯಾರೇಜ್‌ಗಳ ಸ್ಥಾಪನೆಗೆ ಸಹ ಚಿಂತನೆ ನಡೆದಿದೆ. ಕೊಪ್ಪದಲ್ಲಿ ಬಸ್ ಸರ್ವಿಸ್ ಸ್ಟೇಷನ್ ಪ್ರಾರಂಭಿಸುವ ಉದ್ದೇಶವೂ ಇದೆ’ ಎನ್ನುತ್ತಾರೆ ಟಿಸಿಎಸ್‌ನ ನಿರ್ದೇಶಕ ಮಹೇಶ್.ನವದೆಹಲಿಯ ಎಕಾನಮಿಕ್ ಗ್ರೋಥ್ ಸೊಸೈಟಿ ಆಫ್ ಇಂಡಿಯಾದ ‘ರಾಷ್ಟ್ರೀಯ ವಿಕಾಸ್ ರತ್ನ ಪ್ರಶಸ್ತಿ’, ‘ಎಚ್.ಡಿ.ಚೌಡಯ್ಯ ಸಹಕಾರ ಪ್ರಶಸ್ತಿ’, ಚಿಕ್ಕಮಗಳೂರು ಜಿಲ್ಲೆಯ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಅಮೃತಶ್ರೀ’ ಪ್ರಶಸ್ತಿಗಳು ಸೇರಿದಂತೆ ‘ಸಾರಿಗೆ’ ಸಾಧನೆಗೆ ಹಲವಾರು ಗೌರವಗಳು ಸಂದಿವೆ.                              

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.