ಗುರುವಾರ , ನವೆಂಬರ್ 14, 2019
19 °C
ಕೇರಳ ಹೈಕೋರ್ಟ್ ಮಹತ್ವದ ತೀರ್ಪು

`ಸಹಜೀವನದ'ದ ಮಹಿಳೆಗೂ ದೌರ್ಜನ್ಯ ವಿರುದ್ಧ ರಕ್ಷಣೆ

Published:
Updated:

ಕೊಚ್ಚಿ (ಪಿಟಿಐ): ಮದುವೆಯಾದ ಮಹಿಳೆ ಅಷ್ಟೆ ಅಲ್ಲ; ಗಂಡಿನೊಂದಿಗೆ `ಸಹಜೀವನ' (ಲಿವ್- ಇನ್ ರಿಲೇಷನ್‌ಶಿಪ್) ನಡೆಸುತ್ತಿರುವ ಮಹಿಳೆಯೂ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನಿನ ಅಡಿ ರಕ್ಷಣೆ ಪಡೆಯಲು ಅರ್ಹಳು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.`ಕೌಟುಂಬಿಕ ದೌರ್ಜನ್ಯ ಕಾನೂನಿನ ಸೆಕ್ಷನ್ 2(ಎ)ರಲ್ಲಿ ತಿಳಿಸಿದಂತೆ ಮದುವೆಯ ಸ್ವರೂಪದಲ್ಲಿರುವಂತೆಯೇ ಇತರ ಸಂಬಂಧಗಳೂ ಇರುತ್ತವೆ' ಎಂದು ನ್ಯಾಯಮೂರ್ತಿ ಕೆ. ಹರಿಲಾಲ್ ತಮ್ಮ ಆದೇಶದಲ್ಲಿ ತಿಳಿಸಿದರು.ಕೇರಳದ ಅಲಪ್ಪುಜ ಜಿಲ್ಲೆಯ ಚೆರ್ತಾಲ ಎಂಬಲ್ಲಿಯ ವ್ಯಕ್ತಿಯ ಜತೆ ಸಹಜೀವನ ನಡೆಸುತ್ತಿರುವ ಮಹಿಳೆ ತನಗೆ ಆತನಿಂದ ರಕ್ಷಣೆ ಒದಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದು ಇದನ್ನು ವಜಾಗೊಳಿಸಲು ಕೋರಿ ಈ ವ್ಯಕ್ತಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತು.ನ್ಯಾಯಮೂರ್ತಿ ಹರಿಲಾಲ್ ಅವರ ಪ್ರಕಾರ, `ಗಂಡ ಹೆಂಡಂದಿರಂತೆ ಜೋಡಿಯೊಂದು ಜೀವಿಸುತ್ತಿದ್ದು ಮಹಿಳೆಗೆ ಅನ್ಯಾಯವಾದಲ್ಲಿ ಆಕೆಗೆ ರಕ್ಷಣೆ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಕಾನೂನುಬದ್ಧವಾಗಿ ಮದುವೆಯಾಗದಿದ್ದರೂ ಅವರು ಗಂಡ ಹೆಂಡತಿಯರಂತೆ ಜೀವನ ಮಾಡುತ್ತಿದ್ದಲ್ಲಿ ದೌರ್ಜನ್ಯದ ವಿರುದ್ಧ ಮಹಿಳೆಗೆ ರಕ್ಷಣೆ ನೀಡಬೇಕಾಗುತ್ತದೆ' ಎಂದು ಸ್ಪಷ್ಟಪಡಿಸಿದರು.`ಕಾನೂನಿನ ಸೆಕ್ಷನ್ 2(ಎಫ್) ಅನ್ವಯ ದೂರು ನೀಡಿದಾಕೆ ನನ್ನ ಹೆಂಡತಿ ಅಲ್ಲ ಮೇಲಾಗಿ ನನಗೂ ಅವಳಿಗೂ ಕೌಟುಂಬಿಕ ಸಂಬಂಧ ಇಲ್ಲ ಹಾಗಾಗಿ ಅವಳಿಗೆ ರಕ್ಷಣೆ ನೀಡುವ ಅಗತ್ಯ ಇಲ್ಲ' ಎನ್ನುವುದು ಅರ್ಜಿದಾರನ ವಾದವಾಗಿದೆ.ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಸಹ ತನ್ನ ಅಭಿಪ್ರಾಯ ಸ್ಪಷ್ಟಪಡಿಸಿದ್ದು, `ಅವರು ಮದುವೆಯಾಗಲು ಕಾನೂನುಬದ್ಧವಾಗಿ ಇರುವ ವಯಸ್ಸು ಪೂರೈಸಿ ನಿರ್ದಿಷ್ಟ ಅವಧಿಯವರೆಗಾದರೂ ದಂಪತಿಯಂತೆ ಒಟ್ಟಿಗೆ  ಜೀವಿಸುತ್ತಿರಬೇಕು' ಎಂದು ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)