ಸಹಜ ಸ್ಥಿತಿಗೆ ಮರಳುತ್ತಿರುವ ಮಡಿಕೇರಿ

7

ಸಹಜ ಸ್ಥಿತಿಗೆ ಮರಳುತ್ತಿರುವ ಮಡಿಕೇರಿ

Published:
Updated:

ಮಡಿಕೇರಿ: ಕಳೆದೆರಡು ದಿನಗಳ ಕಾಲ ಕಿಡಿಗೇಡಿಗಳ ಕೃತ್ಯದಿಂದ ನಲುಗಿದ ಮಡಿಕೇರಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಶುಕ್ರವಾರ ಸಂಜೆ ಪೊಲೀಸರು ಕಂಡ ಕಂಡಲ್ಲಿ ಬೆತ್ತದ ರುಚಿ ತೋರಿಸಿ ಗುಂಪನ್ನು ಚದುರಿಸಿದ ನಂತರದಿಂದಲೇ ಪರಿಸ್ಥಿತಿ ತಹಬದಿಗೆ ಬಂತು.ಇನ್ನೂ ಎರಡು ದಿನ ನಿಷೇಧಾಜ್ಞೆ ಮುಂದುವರಿದಿರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಂತಹುದೇ ಸ್ಥಿತಿಯನ್ನು ಎದುರಿಸಲು ಪೊಲೀಸರು ಸಜ್ಜಾಗಿ ನಿಂತಿದ್ದಾರೆ. ಬೆಳಿಗ್ಗೆಯಿಂದಲೇ ಎರಡೂ ಕೋಮಿನ ಜನ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದು, ಎಲ್ಲಿಯೂ ಕಲ್ಲು ತೂರಾಟದಂತಹ ಪ್ರಕರಣಗಳು ಮರುಕಳಿಸಲು ಪೊಲೀಸರು ಅವಕಾಶ ನೀಡಿಲ್ಲ.ಸಾಮಾನ್ಯವಾಗಿ ವಾರದ ಕೊನೇ ಎರಡು ದಿನ ಹೊರಗಿನಿಂದ ಅಧಿಕ ಸಂಖ್ಯೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದರು. ಆದರೆ, ಗಲಭೆ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಜನರ ಸಂಖ್ಯೆ ಬಹಳ ವಿರಳವಾಗಿತ್ತು. ಮೊನ್ನೆ ಕಿಡಿಗೇಡಿಗಳು ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಶುಕ್ರವಾರ ಅಂಗಡಿಗಳನ್ನು ಬಂದ್ ಮಾಡಿದ್ದ ಮುಸ್ಲಿಂ ಸಮಾಜದ ಸದಸ್ಯರು ಶನಿವಾರ ತಮ್ಮ ಅಂಗಡಿಗಳನ್ನು ತೆರೆದರು.ದಕ್ಷಿಣ ವಲಯದ ಐಜಿಪಿ ಎ.ಎನ್.ಎಸ್. ಮೂರ್ತಿ ನಗರದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಪರಿಸ್ಥಿತಿ ತಹಬದಿಗೆ ಮರಳುತ್ತಿರುವುದರಿಂದ ನಿಷೇಧಾಜ್ಞೆ ವಾಪಸು ತೆಗೆದುಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ಭಾನುವಾರ ನಡೆಯಲಿರುವ ಶಾಂತಿ ಸೌಹಾರ್ದ ಸಭೆಯಲ್ಲಿ ಎರಡೂ ಕೋಮಿನ ಮುಖಂಡರು ಒಮ್ಮತದ ತೀರ್ಮಾನಕ್ಕೆ ಬಂದಲ್ಲಿ ಮಾತ್ರ ನಿಷೇಧಾಜ್ಞೆ ವಾಪಸು ತೆಗೆದುಕೊಳ್ಳುವ ಕುರಿತು ಪುನರ್ ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲಾಡಳಿತ ಭಾನುವಾರ ಬೆಳಿಗ್ಗೆ 11 ಗಂಟೆಗೆ ಜನಪ್ರತಿನಿಧಿಗಳು, ಎರಡೂ ಕೋಮಿನ ಮುಖಂಡರು, ಸಂಘ-ಸಂಸ್ಥೆಗಳ ಪ್ರಮುಖರ ಶಾಂತಿ ಸೌಹಾರ್ದ ಸಭೆಯನ್ನು ಕರೆದಿದೆ. ಆನಂತರ ಪ್ರಮುಖರು ನಗರದಲ್ಲಿ ಶಾಂತಿ ಸೌಹಾರ್ದ ಮೆರವಣಿಗೆ ನಡೆಸುವ ಸಾಧ್ಯತೆಯಿದೆ.ಫೆ. 24ರಂದು ವಿರಾಟ್ ಸಮಾಜೋತ್ಸವ ಶೋಭಾಯಾತ್ರೆ ವೇಳೆ ಕಿಡಿಗೇಡಿಗಳು ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರ ಜತೆಗೆ, ಮರು ದಿನವೂ ಕಲ್ಲು ತೂರಾಟ ಮುಂದುವರಿದಿದ್ದರಿಂದ ಪೊಲೀಸರು ಶುಕ್ರವಾರ ಸಂಜೆ ಹಲವೆಡೆ ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಗಸ್ತನ್ನು ಹೆಚ್ಚಿಸಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿಯೂ ವ್ಯವಸ್ಥೆ ಬಿಗಿಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry