ಸೋಮವಾರ, ಏಪ್ರಿಲ್ 19, 2021
30 °C

ಸಹನಾ ಕುಮಾರಿ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಹೋರಾಟ ಅಂತ್ಯ ಕಂಡಿದೆ. ಈ ಸಲದ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಸ್ಪರ್ಧಿ ಕರ್ನಾಟಕದ ಸಹನಾ ಕುಮಾರಿ ಫೈನಲ್ ಪ್ರವೇಶಿಸಲು ವಿಫಲರಾದರು.

ಗುರುವಾರ ನಡೆದ ಮಹಿಳಾ ವಿಭಾಗದ `ಬಿ~ ಗುಂಪಿನ ಸ್ಪರ್ಧೆಯಲ್ಲಿ ಅವರಿಗೆ 1.80 ಮೀಟರ್ಸ್‌ ಮಾತ್ರ ಜಿಗಿಯಲು ಸಾಧ್ಯವಾಯಿತು. 1.85 ಮೀಟರ್ಸ್ `ಗಡಿ~ ಜಿಗಿಯಲು ನಡೆಸಿದ ಮೂರೂ ಯತ್ನಗಳಲ್ಲಿ ಅವರು ವಿಫಲರಾದರು. ಇದರಿಂದ ಪ್ರಾಥಮಿಕ ಸುತ್ತಿನಲ್ಲಿಯೇ ಅವರು 15ನೇ ಸ್ಥಾನಕ್ಕೆ ಇಳಿಯುವಂತಾಯಿತು.

30 ವರ್ಷದ ಸಹನಾ ಮೊದಲ ಅವಕಾಶದಲ್ಲಿ 1.80ಮೀ. ಜಿಗಿದರು. ಜೂನ್ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 1.92ಮೀ. ಜಿಗಿದು, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು `ಬಿ~ ದರ್ಜೆಯ ಅರ್ಹತೆ ಗಿಟ್ಟಿಸಿದ್ದರು. ಅಷ್ಟೇ ಅಲ್ಲ ಅಂದು ಕೇರಳದ ಬಾಬಿ ಅಲಾಯ್ಸಿಯಸ್ 2004ರಲ್ಲಿ ನಿರ್ಮಿಸಿದ್ದ (1.91ಮೀ.) ದಾಖಲೆಯನ್ನೂ ಅಳಿಸಿ ಹಾಕಿದ್ದರು.

1.96ಮೀ. ಜಿಗಿದ ಉಜ್ಬೇಕಿಸ್ತಾನದ ಸ್ವೆಟ್ಲಾನಾ ರಾಡ್ಜಿವಿಲ್ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಬೆಲ್ಜಿಯಂನ ತೈ ಹೆಲ್ಲೆ, ಅಮೆರಿಕದ ಚೌಂಟೆ ಲೊವೆ, ರಷ್ಯಾದ ಸ್ವೆಟ್ಲಾನಾ ಶಿಕೊಲಿನಾ ಹಾಗೂ ಇರಾನ್‌ನ  ಗಾರ್ಡೆವಾ ಅವರು 1.93ಮೀ. ಜಿಗಿದು ಫೈನಲ್‌ಗೆ ಅರ್ಹತೆ ಪಡೆದುಕೊಂಡರು.

`ಎ~ ಗುಂಪಿನಿಂದ ಟರ್ಕಿಯ ಬಾರ್ಸು ಅಯಾಮ್, ಅಮೆರಿಕದ ಬ್ರಿಗೆಟ್ಟಾ ಬಾರೆಟ್ ಹಾಗೂ ಲುಥುವೇನಿಯಾದ ಏರೆನೆ ಪಾಲ್ಸೆಟೆ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಆಗಸ್ಟ್ 11ರಂದು ಫೈನಲ್ ನಡೆಯಲಿದೆ.

`ಎ~ ಗುಂಪಿನಿಂದ ಸ್ಪೇನ್‌ನ ರುತು ಭೇಟಿಯಾ, ರಷ್ಯಾದ ಅನ್ನಾ ಚೇಚೆರೊವಾ, ಸ್ವೀಡನ್‌ನ ಎಮ್ಮಾ ಗ್ರೀನ್ ಟ್ರೆಗಾರೊ ಮತ್ತು ಫ್ರಾನ್ಸ್‌ನ ಮಿಲಾನಿಯ ಮಲ್ಫೂರ್ಟ್ ಫೈನಲ್‌ಗೆ ಅರ್ಹತೆ ಪಡೆದ ಇತರ ಸ್ಪರ್ಧಿಗಳು. ಇವರು 1.93ಮೀಟರ್ಸ್‌ ಜಿಗಿದು ಅರ್ಹತೆ ಗಿಟ್ಟಿಸಿಕೊಂಡರು. ಒಟ್ಟು 12 ಸ್ಪರ್ಧಿಗಳು ಫೈನಲ್‌ನಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕೊನೆಯ ಸ್ಪರ್ಧಿ ಎನಿಸಿಕೊಂಡಿದ್ದ ಸಹನಾ ಇಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಉಕ್ರೇನ್‌ನ ನಿಖಿಲ್ ಎಗ್ವೆನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.