ಸಹನೆ ಮೆರೆದ ಗ್ಲಾಡಿಸ್ ಪತ್ನಿ

7

ಸಹನೆ ಮೆರೆದ ಗ್ಲಾಡಿಸ್ ಪತ್ನಿ

Published:
Updated:

ಭುವನೇಶ್ವರ (ಪಿಟಿಐ): ತನ್ನ ಪತಿ ಹಾಗೂ ಎರಡು ಒಡಲ ಕುಡಿಗಳ ಹತ್ಯೆ ಎಸಗಿದವರ ವಿರುದ್ಧ ಕೂಡ ಆಕ್ರೋಶದ ಸಣ್ಣ ಎಳೆಯೂ ಇಲ್ಲದ ಸಹನೆ ಮೆರೆದಿರುವ ಗ್ರಹಾಂ ಸ್ಟೇನ್ಸ್ ಅವರ ಪತ್ನಿ ಗ್ಲಾಡಿಸ್ ಸ್ಟೇನ್ಸ್, ‘ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನ ಪುನರ್‌ರೂಪಿಸಿಕೊಳ್ಳಲು ಅವಕಾಶ ನೀಡಬೇಕು’ ಎಂದಿದ್ದಾರೆ.ಹಂತಕ ದಾರಾಸಿಂಗ್‌ಗೆ ಮರಣದಂಡನೆ ವಿಧಿಸಬೇಕೆಂಬ ಸಿಬಿಐ ಕೋರಿಕೆ ತಿರಸ್ಕರಿಸಿ ಒರಿಸ್ಸಾ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅವರು ಸಮಾಧಾನ ವ್ಯಕ್ತಪಡಿಸಿದ್ದಾರೆ.ಸುಪ್ರೀಂಕೋರ್ಟ್‌ನ ತೀರ್ಪು ಹೊರಬಿದ್ದ ನಂತರ ಆಸ್ಟ್ರೇಲಿಯಾದಲ್ಲಿರುವ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಆಪ್ತ ಸ್ನೇಹಿತ ಸುಭಾಷ್ ಘೋಷ್  ಬಳಿ ಗ್ಲಾಡಿಸ್ ಸ್ಟೇನ್ಸ್ ಈ ಸಮಾಧಾನದ ಮಾತುಗಳನ್ನು ಆಡಿದ್ದಾರೆ.ಸುಭಾಷ್ ಘೋಷ್ ಸ್ಟೇನ್ಸ್ ಕುಷ್ಠರೋಗ ಪರಿವೀಕ್ಷಣಾಲಯ ಹಾಗೂ ಮಯೂರ್‌ಭಂಜ್‌ನಲ್ಲಿರುವ ಇವಾಂಜೆಲಿಕಲ್ ಮಿಷನರಿ ಸೊಸೈಟಿಯ ಉಸ್ತುವಾರಿ ಹೊತ್ತವರೂ ಆಗಿದ್ದಾರೆ.ತಮ್ಮ ಕಾರ್ಯಕ್ಷೇತ್ರವಾದ ಒರಿಸ್ಸಾಕ್ಕೆ ಕಳೆದ ವರ್ಷ ಭೇಟಿ ನೀಡಿದ್ದ ಸಂದರ್ಭದಲ್ಲೇ ಗ್ಲಾಡಿಸ್, ಹಂತಕರು ತಪ್ಪನ್ನು ತಾವು ಅದಾಗಲೇ ಮರೆತಿರುವುದಾಗಿ ಹೇಳಿದ್ದರು.ಮಯೂರ್‌ಭಂಜ್‌ನಲ್ಲೇ ಬೆಳೆದ ಸ್ಟೇನ್ಸ್ ದಂಪತಿಯ ಏಕೈಕ ಪುತ್ರಿ ಎಸ್ತರ್ ಈಗ ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ಕೋರ್ಸ್‌ನ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ವಿವಾಹಿತರಾಗಿರುವ ಅವರೂ ಹಂತಕರ ತಪ್ಪನ್ನು ಮರೆತಿದ್ದಾರೆ ಎಂದು ಸುಭಾಷ್ ಘೋಷ್ ತಿಳಿಸಿದ್ದಾರೆ.‘ಹತ್ಯೆ ಎಸಗಿದವರು ಪಶ್ಚಾತ್ತಾಪ ಪಟ್ಟರೆ ಸಾಕು’ ಎಂಬುದಷ್ಟೇ ತಾಯಿ- ಪುತ್ರಿ ಇಬ್ಬರ ಆಶಯವಾಗಿದೆ ಎಂಬುದನ್ನೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry