ಶುಕ್ರವಾರ, ನವೆಂಬರ್ 15, 2019
21 °C

ಸಹಬಾಳ್ವೆಯಿಂದ ಸಮೃದ್ಧಿ: ನ್ಯಾ. ಕುಲಕರ್ಣಿ

Published:
Updated:

ಜಮಖಂಡಿ: ಬಾಲಕಾರ್ಮಿಕ ಪದ್ಧತಿಯನ್ನು ಬೇರು ಸಹಿತ ಕಿತ್ತು ಹಾಕಲು, ಬಾಲಕರನ್ನು ಶೋಷಣೆಯಿಂದ ಮುಕ್ತಗೊಳಿಸಲು ಹಾಗೂ ಅವರಿಗೆ ಸಹಬಾಳ್ವೆ ನೀಡಲು ಇಡೀ ಸಮಾಜ ದೃಢಸಂಕಲ್ಪ ತೊಡುವುದು ಅಗತ್ಯ ಎಂದು ತ್ವರಿತ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಎಸ್.ವಿ. ಕುಲಕರ್ಣಿ ಹೇಳಿದರು.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಇಲ್ಲಿನ ಸರಕಾರಿ ಪಿಬಿ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಾಲ ಕಾರ್ಮಿಕರ ಕುರಿತು ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಮಾಹಿತಿ ನೀಡಿದಲ್ಲಿ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಉಲ್ಲಂಘಿಸುವ ಮಾಲೀಕರಿಗೆ ಆರು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ರೂ.25 ಸಾವಿರ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದರು.ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಲು ಸಹಾಯಕ ಆಗುವಂತೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ವರಿಗೂ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಂ.ಹಿರೇಮಠ ಹೇಳಿದರು.ತಹಸೀಲ್ದಾರ ಡಾ. ಸಿದ್ದು ಹುಲ್ಲೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ ಕಾರ್ಮಿಕ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಬಾರದು. ಅದಕ್ಕಾಗಿ ತಾಲ್ಲೂಕಿನ ಮೈಗೂರ ಮತ್ತು ಚಿಕ್ಕಪಡಸಲಗಿ ಗ್ರಾಮಗಳ ಇಟ್ಟಿಗೆ ಬಟ್ಟಿ ಇರುವಲ್ಲಿ ಟೆಂಟ್ ಸ್ಕೂಲ್‌ಗಳನ್ನು ತೆರೆಯಲಾಗಿದೆ ಎಂದರು.ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕುರಿತು ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ದೇವರವರ, ಉಪನ್ಯಾಸಕ ರಮೇಶ ಮಡಿವಾಳ, ಬಿಇಓ ಎ.ಸಿ. ಗಂಗಾಧರ, ಡಿವೈಎಸ್ಪಿ ರವಿ ನಾರಾಯಣ ವಿಶೇಷ ಉಪನ್ಯಾಸ ನೀಡಿದರು.ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಓಂಕಾರಮೂರ್ತಿ, ಹೆಚ್ಚುವರಿ ಎಪಿಪಿ ಸಿ.ಎಸ್. ಬಡಿಗೇರ, ಉಪಪ್ರಾಚಾರ್ಯ ಸಿ.ಎಂ. ನ್ಯಾಮಗೌಡ, ಜಿಜಿಪಪೂ ಕಾಲೇಜು ಉಪಪ್ರಾಚಾರ್ಯ ಸಿ.ಎಸ್. ಪಾಟೀಲ ವೇದಿಕೆಯಲ್ಲಿದ್ದರು.ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ವಕೀಲ ಎಸ್.ಜಿ. ಭೂಮಾರ ಸ್ವಾಗತಿಸಿದರು. ವಕೀಲ ರವಿ ಯಡಹಳ್ಳಿ ನಿರೂಪಿಸಿದರು. ಶಿಕ್ಷಕ ಬಿ.ಎಸ್. ಕಡಕೋಳ ವಂದಿಸಿದರು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಎನ್. ಶಿರಹಟ್ಟಿ ಹಾಜರಿದ್ದರು.ಜಾಗೃತಿ ಜಾಥಾ: ಇದಕ್ಕೂ ಮೊದಲು ಜಾಗೃತಿ ಜಾಥಾ ಆರಂಭಿಸಲಾಗಿತ್ತು. ಘೋಷಣಾ ಫಲಕಗಳನ್ನು ಹಿಡಿದ ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)