ಗುರುವಾರ , ಮೇ 26, 2022
23 °C

ಸಹಬಾಳ್ವೆ ಎಲ್ಲರ ಮಂತ್ರವಾಗಲಿ: ಬಿಷಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಿ, ಎಲ್ಲರೂ ಸಹೋದರರಂತೆ ಬಾಳಬೇಕು ಎನ್ನುವುದೇ ಕ್ರೈಸ್ತ ಧರ್ಮದ ಆಶಯ. ಎಲ್ಲರೂ ಏಸು ತೋರಿದ ದಾರಿಯಲ್ಲಿ ನಡೆಯುವ ಮೂಲಕ ಶಾಂತಿ-ಸಹಬಾಳ್ವೆಯ ಜೀವನ ನಡೆಸಬೇಕು ಎಂದು ಧಾರವಾಡ ಕೆಎನ್‌ಡಿ ಬಿಷಪ್ ಜೆ. ಪ್ರಭಾಕರ ರಾವ್ ಕರೆ ನೀಡಿದರು.ಪ್ರೊಟೆಸ್ಟೆಂಟರ ಪವಿತ್ರ ಸ್ಥಳ ಹಳೇ ದಾವಣಗೆರೆಯ ಸಿಎಸ್‌ಐ ಚೀಯೋನ್ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 75ನೇ ವರ್ಷದ ಅಮೃತ ಮಹೋತ್ಸವ ಆರಾಧನೆ ಹಾಗೂ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.ಹಿಂಸೆ ನೀಡಿದ ಶತ್ರುಗಳನ್ನೂ ಪ್ರೀತಿಯಿಂದ ಕರುಣಿಸಿದ ದೇವರು ಏಸು. ಸಂಕಷ್ಟದ ಸಂದರ್ಭದಲ್ಲಿ ಅರಿವಿನ ದಾರಿ ತೋರಿ ಕೈಹಿಡಿದು ನಡೆಸುವ ಭಗವಂತ. ಎಲ್ಲ ಜನರೂ ಪ್ರೀತಿಯಿಂದ ಬಾಳಬೇಕು ಎನ್ನುವುದು ಅವರ ಆಶಯವಾಗಿತ್ತು. ದೇವಾಲಯದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಯರ್ ಎಂ.ಜಿ. ಬಕ್ಕೇಶ್, ಅಧಿಕಾರ ಕ್ಷಣಿಕ. ಜನರ ಪ್ರೀತಿ-ವಿಶ್ವಾಸ ಶಾಶ್ವತ. ಹಳೇಪೇಟೆಯ ಜನರ ಪ್ರೀತಿಯು ಅಧಿಕಾರಕ್ಕಿಂತ ಮಿಗಿಲು ಎಂದು ಬಣ್ಣಿಸಿದರು.ಹಳೇಪೇಟೆಯ ಜನರು ಜಾತಿ, ಧರ್ಮವನ್ನು ಮೀರಿ ತಮಗೆ ಪ್ರೀತಿ ತೋರಿದ್ದಾರೆ. ಗೆಲುವಿಗೆ ಸಹಕರಿಸಿದ್ದಾರೆ. ಅವರ ಋಣ ತೀರಿಸುವ ಸದಾವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.ಧಾರವಾಡ ಕೆಎನ್‌ಡಿ ಮಹಿಳಾ ಅಧ್ಯಕ್ಷೆ ಸೌಜನ್ಯಾ ಪ್ರಭಾಕರ್, ಉಪಾಧ್ಯಕ್ಷ ಟಿ.ಎಸ್. ಅಸಂಗಿ, ವಿಜಯಕುಮಾರ್ ಎನ್. ದಂಡಿನ್, ಡಿಟಿ. ಕೊನೆಸಾಗರ್, ಎಂ.ಎಸ್. ಬಲ್ಮಿ, ಡ್ಯಾನಿಯಲ್ ಎಸ್. ಹೊನ್ನಾಯಕರ್, ಪಾಲಿಕೆ ಸದಸ್ಯ ಗುರುನಾಥ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನವೀಕರಿಸಿದ ಚೀಯೋನ್ ದೇವಾಲಯದ ಅತಿಥಿಗೃಹವನ್ನು ಉದ್ಘಾಟಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.