ಸೋಮವಾರ, ಏಪ್ರಿಲ್ 19, 2021
25 °C

ಸಹಬಾಳ್ವೆ ಸಾರಿದ ಗೋರೆ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬೀರಪ್ಪನ ಗುಡಿಯ ಪಕ್ಕದಲ್ಲಿಯೇ ಸಗಣಿಯ ರಾಶಿ ಹಾಕಲಾಗಿತ್ತು. ಬೆಳಿಗ್ಗೆಯೇ ಯುವಕರು ಸಗಣಿ ಸಂಗ್ರಹಿಸಲು ಪಟ್ಟಿದ್ದ ಸಂಕಷ್ಟವನ್ನು ರಾಶಿಯೇ ಸಾರುತ್ತಿತ್ತು. ಗ್ರಾಮದ ಹೊರವಲಯದಿಂದ ಕೊಂಡಿಗೆಕಾರನ(ಚಾಡಿಕೋರ) ಆಗಮನವಾಯಿತು. ರಾಶಿಗೆ ಪೂಜೆ ಸಲ್ಲಿಸುತ್ತಿದ್ದಂತೆಯೇ ನೆರೆದಿದ್ದ ನೂರಾರು ಯುವಕರು ಪರಸ್ಪರ ಸಗಣಿ ಎರಚಾಟವನ್ನು ಶುರುವಿಟ್ಟುಕೊಂಡರು!ಗಡಿ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲ ತಾಲ್ಲೂಕಿನ ತಾಳವಾಡಿ ಫಿರ್ಕಾಕ್ಕೆ ಸೇರಿದ ಗುಮುಟಾಪುರ ಗ್ರಾಮದಲ್ಲಿ ಗುರುವಾರ `ಗೋರೆ ಹಬ್ಬ~ದ ಸಂಭ್ರಮ ಎಲ್ಲೆ ಮೀರಿತ್ತು. ಗ್ರಾಮದಲ್ಲಿರುವ ಕನ್ನಡಿಗರು ಸಂಭ್ರಮದಿಂದ ಹಬ್ಬ ಆಚರಿಸಿದರು.ರಾಜಕಾರಣಿಗಳು ಈಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಸಾಮಾನ್ಯ. ಆದರೆ, ಗುಮುಟಾಪುರದ ಜನರು ಮೈಮೇಲೆ ಸಗಣಿ ಎರೆಚಾಡಿಕೊಂಡು ಸಂಭ್ರಮಪಡುವುದು ವಿಶೇಷ.ಸಗಣಿ ಎಸೆದಾಟ ನಡೆಸಿದ ಯುವಕರು ಸಂತಸದ ಹೊನಲಿನಲ್ಲಿ ತೇಲಿದರು.  ಕೊಂಡಿಗೆಕಾರನ ಚಿತ್ರವಿಚಿತ್ರ ವೇಷ ಕಂಡು ಕುಣಿದು ಕುಪ್ಪಳಿಸಿದರು.  ದೀಪಾವಳಿಯ ಮರುದಿನವೇ ಗ್ರಾಮದಲ್ಲಿ ಗೋರೆ ಹಬ್ಬದ ಸಡಗರ ಮನೆ ಮಾಡುತ್ತದೆ. ಹಲವು ವರ್ಷದಿಂದ ಗ್ರಾಮದಲ್ಲಿರುವ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಿಂದ ತಿಪ್ಪೆಯಲ್ಲಿದ್ದ ಸಗಣಿ ಸಂಗ್ರಹಿಸಿದ್ದ ಯುವಕರು ಬೀರಪ್ಪನ ಗುಡಿ ಪಕ್ಕದಲ್ಲಿಯೇ ರಾಶಿ ಹಾಕಿದ್ದರು. ಬಳಿಕ, ಚಿಣ್ಣರು ಹಾಗೂ ಯುವಕರ ದಂಡು ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಿತು. ನಂತರ, ಗ್ರಾಮದ ಕಟ್ಟೆ ಬಳಿ ಕತ್ತೆಯ ಕಾಲು ತೊಳೆದು ಪೂಜೆ ಸಲ್ಲಿಸಲಾಯಿತು.ಆ ವೇಳೆಗೆ ಚಾಡಿಕೋರ ಹುಲ್ಲಿನ ಮೀಸೆ, ಗಡ್ಡ ಕಟ್ಟಿಕೊಂಡು ಸಿದ್ಧನಾಗಿದ್ದ. ಹುಡುಗರು ಆತನನ್ನು ಕತ್ತೆ ಮೇಲೆ ಕುಳ್ಳಿರಿಸಿಕೊಂಡು ಬೀರಪ್ಪನ ದೇವಸ್ಥಾನದತ್ತ ಮೆರವಣಿಗೆ ಹೊರಟರು.ಅದಾಗಲೇ ಸಗಣಿಯ ರಾಶಿ ಮುಂದೆ ಜಮಾಯಿಸಿದ್ದ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಎಲ್ಲರ ದೃಷ್ಟಿ ಬೀರಪ್ಪನ ಗುಡಿಯತ್ತಲೇ ನೆಟ್ಟಿತು. ಪೂಜಾರಿಯು ರಾಶಿ ಬಳಿಗೆ ಬಂದು ಪೂಜೆ ಸಲ್ಲಿಸಿದ ನಂತರ ಆತನ ಮೇಲೆ ದೇವರು ಬಂದಿತು. ಮತ್ತೊಂದೆಡೆ ಯುವಕರ ಕೇಕೆಯೂ ಮುಗಿಲು ಮುಟ್ಟಿತು. ನಂತರ ಸಗಣಿ ಎರೆಚಾಟಕ್ಕೆ ಚಾಲನೆ ಸಿಕ್ಕಿತ್ತು. ಯಾವುದೇ, ಜಾತಿಭೇದವಿಲ್ಲದೆ ನೆರೆದಿದ್ದ ಎಲ್ಲರೂ ಪರಸ್ಪರ ಸಗಣಿ ಎರಚಾಡಿದರು. ಆ ಮೂಲಕ ಸಹಬಾಳ್ವೆಯ ಸಂದೇಶ ಸಾರಿದರು. ಈ ಸುಂದರ ಕ್ಷಣ ನೋಡಲು ನೆರೆಹೊರೆಯ ಗ್ರಾಮಸ್ಥರು ನೆರೆದಿದ್ದರು. ಆಟ ಮುಗಿದ ಬಳಿಕ ಹಂಚಿಕಡ್ಡಿಯಿಂದ ಮಾಡಿದ ಚಾಡಿಕೋರನ ಪ್ರತಿರೂಪವನ್ನು ಗ್ರಾಮಕ್ಕೆ ಸಮೀಪದ ಕೊಂಡಿಗೆಕೋರನ ಗುಡ್ಡಕ್ಕೆ ತೆಗೆದುಕೊಂಡು ಹೋಗಿ ಸುಡಲಾಯಿತು. ಅಲ್ಲಿ ಕೋಳಿ ಬಲಿಯೂ ನಡೆಯಿತು.ಅಲ್ಲಿಂದ ಯುವಕರ ಸವಾರಿ ಕೆರೆಗೆ ತೆರಳಿ ಸ್ನಾನ ಮಾಡಿ ದೇಗುಲಕ್ಕೆ ಬಂದಿತು. ಬಳಿಕ ಚಾಡಿಕೋರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಇಲ್ಲಿನ ವಿಶೇಷ.

ಐತಿಹಾಸಿಕ ಹಿನ್ನೆಲೆ 

ಗೋರೆ ಹಬ್ಬದ ಆಚರಣೆ ನೂರು ವರ್ಷದ ಹಿಂದೆ ಪ್ರಾರಂಭವಾಯಿತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಊರಿನ ಕಾಳೇಗೌಡ ಎಂಬಾತನ ಮನೆಗೆ ಉತ್ತರ ದೇಶದಿಂದ ದೇವರಗುಡ್ಡ ಎಂಬ ಆಳು ಬರುತ್ತಾನೆ. ಅವರ ಮನೆ ಮಗನಂತೆಯೇ ಇರುತ್ತಾನೆ. ನಿಧನನಾದ ನಂತರ ಆತ ನಿತ್ಯವೂ ಬಳಸುತ್ತಿದ್ದ ಬೆತ್ತ, ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಯಿತಂತೆ. ಕೆಲವು ದಿನದ ಬಳಿಕ ಆ ತಿಪ್ಪೆಗುಂಡಿಯ ಬಳಿ ಎತ್ತಿನಗಾಡಿಯೊಂದು ಹೋದಾಗ ಲಿಂಗ ಕಾಣಿಸಿಕೊಂಡಿತು. ಚಕ್ರ ಅದರ ಮೇಲೆ ಹರಿದಾಗ ಅದರಿಂದ ರಕ್ತ ಹೊರಬಂದಿತಂತೆ.ರಾತ್ರಿ ನಿದ್ರಿಸುತ್ತಿರುವಾಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರಗುಡ್ಡ ಕಾಣಿಸಿಕೊಂಡು ದೀಪಾವಳಿ ಬಳಿಕ ಗೋರೆ ಹಬ್ಬ ಆಚರಿಸಲು ಸೂಚಿಸಿದರಂತೆ. ಆಗ ಗ್ರಾಮಸ್ಥರು ತಿಪ್ಪೆಗುಂಡಿಯಲ್ಲೇ ಈಗಿರುವ ಬೀರಪ್ಪನ ದೇವರ ಗುಡಿ ನಿರ್ಮಿಸಿಕೊಂಡು ಪ್ರತಿವರ್ಷವೂ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.