ಶುಕ್ರವಾರ, ನವೆಂಬರ್ 22, 2019
22 °C
ಸ್ವಸ್ಥ ಬದುಕು

ಸಹಾನುಭೂತಿ ಮದ್ದು!

Published:
Updated:
ಸಹಾನುಭೂತಿ ಮದ್ದು!

ಹಿರಿಯ ನಾಗರಿಕರಿಗೆ ಮೀಸಲಾದ ಕಾಲ್‌ಸೆಂಟರ್ ಹೇಗೆ ವ್ಯವಹರಿಸಬೇಕು ಎಂಬ ಕುರಿತು ಅಧ್ಯಯನ ನಡೆಸಲಾಗಿತ್ತು. ಹಿರಿಯ ನಾಗರಿಕರೇ ಇರಲಿ ಅಥವಾ ಬೇರೆ ಯಾರೇ ಆಗಿರಲಿ ಅನುಕಂಪ ತೋರುವುದಕ್ಕಿಂತ ಸಹಾನುಭೂತಿ ಮುಖ್ಯ ಎಂಬ ಅಂಶ ಈ ಅಧ್ಯಯನದಿಂದ ದೃಢಪಟ್ಟಿತು.ವರ್ಷಗಳ ಹಿಂದೆ ನನ್ನ ಗೆಳತಿಯ ಪತಿ ತೀರಿಕೊಂಡಿದ್ದರು. ಕೆಲ ದಿನಗಳ ನಂತರ ಆಕೆ ಸಿಕ್ಕಾಗ, ನಿನ್ನನ್ನು ನೀನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ ಅಲ್ಲವೇ ಎಂದು ಪ್ರಶ್ನಿಸಿದೆ. `ನನ್ನನ್ನು ಏನು ಅಂದುಕೊಂಡಿದ್ದೀಯಾ? ಇಡೀ ದಿನ ಕಣ್ಣೀರು ಸುರಿಸುತ್ತಾ ಕುಳಿತುಕೊಳ್ಳಲು ನಾನು ಸಿನಿಮಾ ಹಿರೋಯಿನ್ ಅಲ್ಲ' ಎಂದು ಸಿಟ್ಟಿಗೆದ್ದ ಆಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಳು. ಆಕೆ ಉತ್ತರಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನನ್ನ ಧ್ವನಿಯಲ್ಲಿ ಸಹಾನುಭೂತಿಗಿಂತ ಹೆಚ್ಚಾಗಿ ಅನುಕಂಪವಿತ್ತು.ಅನುಕಂಪ ನೋವುಂಟು ಮಾಡುತ್ತದೆ. ಆದರೆ, ಸಹಾನುಭೂತಿ ಮನಸ್ಸು ತಂಪಾಗಿಸುತ್ತದೆ. ಅನುಕಂಪ ವ್ಯಕ್ತಿಯನ್ನು ದುಃಖದ ಮಡುವಿಗೆ ತಳ್ಳುತ್ತದೆ. ಸಹಾನುಭೂತಿ ಸಂಕಷ್ಟಮಯ ಸನ್ನಿವೇಶದಿಂದ ಹೊರಬರಲು ನೆರವು ನೀಡುತ್ತದೆ. ಅನುಕಂಪ ತೋರುವಾಗ ನಾನು ಮೇಲಿದ್ದೇನೆ ಎಂಬ ಮನೋಭಾವ ಇರುತ್ತದೆ. ಸಹಾನುಭೂತಿಯಲ್ಲಿ ನಾವಿಬ್ಬರೂ ಒಂದೇ ಎಂಬ ಸೌಹಾರ್ದ ಮನೋಭಾವ ಕಾಣುತ್ತದೆ.ಸಹಾನುಭೂತಿ ತೋರುವಾಗ ಯಾರೂ ಕೆಳಗಲ್ಲ, ಮೇಲಲ್ಲ, ನಾವಿಬ್ಬರೂ ಸಮಾನರು ಎಂಬ ಮನೋಭಾವ ತಳೆಯುವುದು ಮುಖ್ಯ. ಎಲ್ಲರನ್ನೂ ಸಮಾನವಾಗಿ ಕಾಣುವ ಮುನ್ನ ನಿಮ್ಮಳಗೆ ಸಮತೋಲನ ಬೆಳೆಸಿಕೊಳ್ಳುವುದು ಮುಖ್ಯ. ಕಳೆದ ಸಂಚಿಕೆಗಳಲ್ಲಿ ಹೇಳಿದ್ದಂತೆ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ನೀವು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಂಡು, ನಕಾರಾತ್ಮಕ ಭಾವನೆಗಳನ್ನು ಹೊರದೂಡಬಹುದು. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ ಶಾಂತಿ ಸ್ಥಾಪಿಸಿಕೊಳ್ಳಬಹುದು.ಉಸಿರಾಟದ ವ್ಯಾಯಾಮದ ನಂತರ ಯೋಚನೆ ಮಾಡುವುದನ್ನು ಬಿಡಿ. ಯಾರ ಜತೆ ಮಾತನಾಡಲೂ ಬೇಡಿ. ಸುಮ್ಮನೇ ಕುಳಿತು ಹೀಗೆ ಆಲೋಚಿಸಿ.ನಾವೆಲ್ಲರೂ ಒಂದು. ನಾವೆಲ್ಲರೂ ಸೂರ್ಯನಿಂದ ಹೊರಸೂಸುವ ಲಕ್ಷಾಂತರ ಕಿರಣಗಳು. ನಾನು ಅಂತಹ ಒಂದು ಕಿರಣ. ನನ್ನ ಪಾಲಿನ ಜಗತ್ತನ್ನು ಬೆಳಗಲು ಬಂದ ಕಿರಣ.ನಾನು ಬಯಕೆಗಳನ್ನೆಲ್ಲ ಬಿಟ್ಟುಬಿಡುತ್ತೇನೆ. ಆಗ ಬಯಕೆಯ ಆ ಶಕ್ತಿ ಸಹಾನುಭೂತಿಯಾಗಿ ಹರಿಯುತ್ತದೆ. ಅದರ ಹಿಂದೆ ಯಾವುದೇ ಸ್ವಾರ್ಥ, ಗುರಿ ಇರುವುದಿಲ್ಲ.ಸಹಾನುಭೂತಿ ನನ್ನ ಅಂತಃಪ್ರಜ್ಞೆಯನ್ನು ಋಣಾತ್ಮಕ ಭಾವ ಮತ್ತು ಬಯಕೆಗಳಿಂದ ದೂರ ಇಡುತ್ತದೆ.ಸಹಾನುಭೂತಿ ಎಂಬುದು ಪ್ರೀತಿಯ ಮತ್ತೊಂದು ಆಯಾಮ. ಸಹಾನುಭೂತಿ ತುಂಬಿದ ಪ್ರೀತಿ ನನ್ನಲ್ಲಿ ತುಂಬಿ ಹರಿಯುತ್ತದೆ.ಕೆಟ್ಟತನ, ಅಸೂಯೆ, ದ್ವೇಷ, ಸಿಟ್ಟು ಹಳಹಳಿಕೆಯ ಭಾವವನ್ನು ನಾನು ಬೇರು ಸಹಿತ ಕಿತ್ತೊಗೆಯುತ್ತೇನೆ. ಸಹಾನುಭೂತಿಯ ಹೂವು ಅರಳಿಸುವ ಕ್ಷಮೆಯ ಸುಂದರ ಬೀಜವನ್ನು ನನ್ನೊಳಗೆ ನೆಡುತ್ತೇನೆ.ಸಹಾನುಭೂತಿ ಸದಾ ನನ್ನಲ್ಲಿ ಉಕ್ಕಲಿ ಎಂದು ನಾನು ಬಯಸುತ್ತೇನೆ. ಏಕೆಂದರೆ ಸಹಾನುಭೂತಿ ಮನಸ್ಸಿಗಾದ ಗಾಯಗಳನ್ನೆಲ್ಲ ತೊಳೆದು ನಮ್ಮನ್ನು ಮತ್ತೊಮ್ಮೆ ಮಗುವಾಗಿಸುತ್ತದೆ.ಸಹಾನುಭೂತಿ ತನ್ನ ಗೆಳತಿಯರಾದ ಸೌಂದರ್ಯ, ಸಂತಸವನ್ನೂ ಜತೆಗೆ ತರುತ್ತದೆ. ಸಹಾನುಭೂತಿಯ ವಿರುದ್ಧಾರ್ಥಕ ಪದ ಪೂರ್ವಗ್ರಹ ಮತ್ತು ಟೀಕೆ. ಇವೆರಡೂ ವ್ಯಕ್ತಿಗಳನ್ನು ದೂರ ಮಾಡುತ್ತವೆ. ನೀವು ಯಾವುದೇ ವ್ಯಕ್ತಿಯ ಬಗ್ಗೆ ಸಿನಿಕರಾಗಿ, ಕೆಟ್ಟದಾಗಿ ಯೋಚಿಸುತ್ತಿದ್ದಲ್ಲಿ ಅವರನ್ನು `ಬೇರೆ'ಯವರು ಎಂದು ಪರಿಗಣಿಸುತ್ತೀರಿ ಎಂದರ್ಥ. ಸಹಾನುಭೂತಿ ಸೌಹಾರ್ದ ಮೂಡಿಸಿ, ಎಲ್ಲರೂ ತನ್ನವರು ಎಂದು ಪರಿಗಣಿಸುವಂತೆ ಮಾಡುತ್ತದೆ.ಅಪರಿಚಿತ ವ್ಯಕ್ತಿಗಳ ಬಗ್ಗೆ ಸಹಾನುಭೂತಿ ತೋರುವುದು ಸುಲಭ. ಆದರೆ, ನಮ್ಮದೇ ಕುಟುಂಬದ ಸದಸ್ಯರತ್ತ ಸಹಾನುಭೂತಿ ತೋರುವುದು ಅಷ್ಟು ಸುಲಭವಲ್ಲ. ಸಿಟ್ಟಿಗೇಳುವುದು, ವಾದ ಮಾಡುವುದು, ಬಯ್ದೊಡುವುದು ಇದ್ದಾಗ ಸಹಾನುಭೂತಿ ಹುಟ್ಟುವುದಿಲ್ಲ. ಆದರೆ, ನಾವು ಸ್ಪಷ್ಟವಾಗಿ ಆಲೋಚಿಸಿದಲ್ಲಿ ಆ ಪೂರ್ವಗ್ರಹವೂ ಕರಗುತ್ತದೆ.ನಮ್ಮ ಬದುಕಿನಲ್ಲಿರುವ ಪ್ರತಿ ವ್ಯಕ್ತಿಯೂ ಅವರದ್ದೇ ರೀತಿಯಲ್ಲಿ ಸರಿಯಾಗಿದ್ದಾರೆ ಅಂದುಕೊಂಡಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ನಮ್ಮಲ್ಲಿನ ಒಳ್ಳೆತನ ಹಾಗೂ ನಮ್ಮನ್ನು ವಿರೋಧಿಸುವ ಜನರ ಒಳ್ಳೆಯತನದಲ್ಲಿ ನಂಬಿಕೆ ಇಟ್ಟಾಗಲೂ ಸಹಾನುಭೂತಿ ಉಕ್ಕುತ್ತದೆ.

ಕಾಮನಬಿಲ್ಲಿನ ಎಲ್ಲ ಬಣ್ಣಗಳಂತೆ ನೀವು ಸೇರಿದಂತೆ ಎಲ್ಲ ವ್ಯಕ್ತಿಗಳೂ ಸರಿಯಾಗಿದ್ದಾರೆ, ಸಮಾಜದಲ್ಲಿ ಎಲ್ಲರಿಗೂ ಅವರದ್ದೇ ಆದ ಸ್ಥಳ ಇದೆ ಎಂದು ಅರಿತುಕೊಂಡಾಗ ಸಂಘರ್ಷ ಕರಗಿಹೋಗುತ್ತದೆ.ಅತಿಯಾದ ಒತ್ತಡ ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹಾಳುಗೆಡವಿದರೆ, ಸಹಾನುಭೂತಿ ಅದನ್ನು ಹೆಚ್ಚಿಸುತ್ತದೆ. ಒತ್ತಡದಿಂದಾಗಿ ಹಾನಿಕಾರಕ ಕಾರ್ಟಿಸೋಲ್ ಬಿಡುಗಡೆಯಾಗುತ್ತದೆ. ಸಹಾನುಭೂತಿಯಿಂದ ರೋಗಾಣುಗಳನ್ನು ಕೊಲ್ಲುವ ಶಕ್ತಿ ಹೆಚ್ಚುತ್ತದೆ.ದ್ವೀಪದಂತಿರುವ ನಮ್ಮ ಮನಸ್ಸುಗಳನ್ನು ಸಹಾನುಭೂತಿಯಿಂದ ಒಂದುಗೂಡಿಸಿದಾಗ ಅದು ಆತ್ಮಗಳ ಮಿಲನವಾಗುತ್ತದೆ. ನಮ್ಮ ವ್ಯಕ್ತಿತ್ವಗಳನ್ನು ಸೀಮಿತಗೊಳಿಸುವ ಋಣಾತ್ಮಕ ಭಾವನೆಗಳೆಲ್ಲ ಕರಗಿಹೋದಾಗ ದೈವಿಕ ಶಕ್ತಿ ನಮ್ಮಳಗೆ ಪ್ರವೇಶಿಸಲು ಶಕ್ತವಾಗುತ್ತದೆ. ನಮ್ಮ ದೇಹದ ಪ್ರತಿ ಕೋಶವೂ ಸಂತಸದಿಂದ ಹೊಳೆಯುತ್ತದೆ. ಆಗ ಹೊಸದಾಗಿ ಹುಟ್ಟಿದಂತೆ ಇರುತ್ತದೆ.

 

ಪ್ರತಿಕ್ರಿಯಿಸಿ (+)