ಮಂಗಳವಾರ, ಮೇ 24, 2022
25 °C

ಸಹಾಯಕ ಪ್ರಾಧ್ಯಾಪಕನ ಐಷಾರಾಮಿ ಜೀವನ

ಸಿದ್ದಯ್ಯ ಹಿರೇಮಠ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ, ಸದ್ಯ ತಲೆ ಮರೆಸಿಕೊಂಡಿರುವ ವಿಮ್ಸನ ವಿಧಿವಿಜ್ಞಾನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವಿನಾಯಕ ಪ್ರಸನ್ನ, ವಿಲಕ್ಷಣ ಸ್ವಭಾವದಿಂದಲೇ ಹೆಸರಾಗಿದ್ದು ಐಷಾರಾಮಿ ಜೀವನದಿಂದಲೂ ಖ್ಯಾತಿಗೊಳಗಾಗಿದ್ದಾರೆ.ಗೈರುಹಾಜರಿ ಹಿನ್ನೆಲೆಯಲ್ಲಿ ವಿಮ್ಸ ಆಡಳಿತ ಮಂಡಳಿ ಸದ್ಯ ಇವರನ್ನು ಅಮಾನತು ಮಾಡಿದ್ದು, ಸಿಐಡಿ ಪೊಲೀಸರು ಇವರಿಗಾಗಿಯೇ ತೀವ್ರ ಶೋಧ ನಡೆಸಿದ್ದಾರೆ.ಐಷಾರಾಮಿ ಕೊಠಡಿ: ವಿಮ್ಸನ ಶವಾಗಾರದ ಬಳಿಯಿರುವ ವಿಧಿ ವಿಜ್ಞಾನಶಾಸ್ತ್ರ ವಿಭಾಗದ ಮುಖ್ಯಸ್ಥರ ಕೊಠಡಿ ಅತ್ಯಂತ ಸರಳವಾಗಿದ್ದರೆ, ಪಕ್ಕದಲ್ಲೇ ಇರುವ ಡಾ.ವಿನಾಯಕ ಅವರ ಕೊಠಡಿ ಮಾತ್ರ ಝಗಮಗಿಸುತ್ತ ಕಣ್ಣು ಕುಕ್ಕುತ್ತದೆ.ಹವಾನಿಯಂತ್ರಿತ ವ್ಯವಸ್ಥೆ, ಎರಡೆರಡು ಸ್ಥಿರ ದೂರವಾಣಿ ಸಂಪರ್ಕ, ಅತ್ಯಾಧುನಿಕ ಆಸನ, ಚಿಕ್ಕ ಅಕ್ವೇರಿಯಂ ಮತ್ತಿತರ ಸಲಕರಣೆಗಳು ನೋಡುಗರಲ್ಲಿ ಸೋಜಿಗ ಮೂಡಿಸುತ್ತವೆ.ತಮ್ಮ ಕೊಠಡಿಯಲ್ಲಿ ಸ್ವಂತದ ಖರ್ಚಿನಲ್ಲೇ ಇಷ್ಟೆಲ್ಲ ಐಷಾರಾಮಿ ಉಪಕರಣಗಳನ್ನು ಅಳವಡಿಸಿರುವ ವಿನಾಯಕ ಅವರ ನಡೆ ಮೊದಲಿನಿಂದಲೂ ಸಂಶಯಾಸ್ಪದವಾಗೇ ಇದೆ ಎಂದು ವಿಮ್ಸನ ಅನೇಕ ವೈದ್ಯರು ಹೇಳುತ್ತಾರೆ. ಅಲ್ಲದೆ, ತಮ್ಮ ಕೊಠಡಿಗೆ ಪ್ರತ್ಯೇಕ ವ್ಯವಸ್ಥೆ ಅಳವಡಿಸಲು ವಿಮ್ಸ ನಿರ್ದೇಶಕರು, ಪ್ರಾಚಾರ್ಯರು ಅಥವಾ ವಿಭಾಗದ ಮುಖ್ಯಸ್ಥರಿಂದ ಅವರು ಪರವಾನಗಿಯನ್ನು ಪಡೆದಿಲ್ಲ.ಮುಖ್ಯಸ್ಥರ ಕೊಠಡಿಗಿಂತಲೂ ಭಿನ್ನವಾದ ಐಷಾರಾಮಿ ಕೊಠಡಿ ಹೊಂದಿದ್ದರೂ ವಿಮ್ಸ ಆಡಳಿತ ಮಂಡಳಿ ಚಕಾರ ಎತ್ತದೆ, ದೂರವಾಣಿ ಹಾಗೂ ವಿದ್ಯುತ್ ಶುಲ್ಕವನ್ನು ಭರಿಸಿದೆ.ಸಂಬಂಧಿಗಳು ಭಾಗಿ: ಪ್ರಮುಖವಾಗಿ ರೇಡಿಯಾಲಜಿ, ಗೈನಕಾಲಜಿ ಮತ್ತು ಜನರಲ್ ಮೆಡಿಸಿನ್ ವಿಭಾಗದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಸರ್ಕಾರಿ ಸೀಟು ಪಡೆಯಲು ಉನ್ನತ ರ‌್ಯಾಂಕ್ ಪಡೆಯುವುದು ಕಡ್ಡಾಯ. ಈ ಹಿಂದೆ ಕೆಲವು ಬಾರಿ ಪರೀಕ್ಷೆ ಬರೆದು ಯಾಶಸ್ವಿಯಾಗದ ವಿಮ್ಸ ಸಿಬ್ಬಂದಿಯ ಸಂಬಂಧಿಕರೂ, ವಿಮ್ಸನಲ್ಲೇ ಕೆಲಸ ಮಾಡುತ್ತಿದ್ದ ಕಿರಿಯ ವೈದ್ಯರೂ, ರಾಜ್ಯದ ಬೇರೆ ಕಡೆಯಿಂದ ಬಂದವರೂ ಅರ್ಧ ಕೋಟಿಗಿಂತ ಅಧಿಕ ಹಣ ನೀಡಿ, ಇಲ್ಲಿ ಪರೀಕ್ಷೆ ಬರೆದಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಕಾರಣರಾದವರೂ, ಕೆಲ ವಿದ್ಯಾರ್ಥಿಗಳೂ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.ವಿಶೇಷವೆಂದರೆ, ಪ್ರವೇಶ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಮೊದಲು ಬಳ್ಳಾರಿಯ ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ವಿಚಾರಣೆ ನಡೆಸಿದ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಈ ಪ್ರಕರಣದಲ್ಲಿ ಅಕ್ರಮವೇ ನಡೆದಿಲ್ಲ ಎಂಬ ವರದಿಯನ್ನು ನೀಡಿದೆ.

ನಂತರವಷ್ಟೇ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಇದೀಗ 17 ಜನ ಬಂಧನಕ್ಕೆ ಒಳಗಾಗುವಂತಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.